Photo Credits: @nandish__7999 (Instagram)
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಇಂದು ಹೈಕೋರ್ಟ್‌ನಲ್ಲಿ ನಡೆದಿದೆ. ವಿಚಾರಣೆಗೆ ಖುದ್ದು ಹಾಜರಾಗಲು ಅವಕಾಶ ನೀಡಬೇಕು ಎಂದು ದರ್ಶನ್ ಮನವಿ ಮಾಡಿದ್ದರು.
ಈ ಮೊದಲು ಸೆಷನ್ಸ್ ಕೋರ್ಟ್ ದರ್ಶನ್ ಅವರ ಖುದ್ದು ಹಾಜರಾತಿ ಅರ್ಜಿಯನ್ನು ವಜಾ ಮಾಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದು, ಇಂದು ನ್ಯಾ. ಶ್ರೀಶಾನಂದ ಅವರಿದ್ದ ಪೀಠವು ವಿಚಾರಣೆ ನಡೆಸಿ ಕಲಾಪವನ್ನು ಸೆಪ್ಟೆಂಬರ್ 16ಕ್ಕೆ ಮುಂದೂಡಿದೆ.
ಸಾಕ್ಷ್ಯ ವಿಚಾರಣೆಯನ್ನು ನೇರವಾಗಿ ವೀಕ್ಷಿಸುವುದು ಹಾಗೂ ಆಲಿಸುವುದು ತಮ್ಮ ಮೂಲಭೂತ ಹಕ್ಕಾಗಿದೆ ಎಂದು ದರ್ಶನ್ ಪರ ಹಿರಿಯ ವಕೀಲ ಹಷ್ಮತ್ ಪಾಷಾ ಅವರು ಪೀಠದ ಮುಂದೆ ಸುದೀರ್ಘ ವಾದ ಮಂಡಿಸಿದರು.
ತಾಂತ್ರಿಕ ಅಡಚಣೆಗಳ ಬಗ್ಗೆ ದರ್ಶನ್ ಲಾಯರ್ ವಾದ: ಜಡ್ಜ್ ಕೊಟ್ಟ ಖಡಕ್ ಉತ್ತರವೇನು?
ಜೈಲಿನಲ್ಲಿ ಮತ್ತು ಕೋರ್ಟ್‌ನಲ್ಲಿ ತಾಂತ್ರಿಕ ಉಪಕರಣಗಳು ಸರಿಯಾಗಿ ಉನ್ನತೀಕರಣಗೊಂಡಿಲ್ಲ ಎಂದು ವಕೀಲರು ದೂರಿದ್ದಾರೆ. ವಿಡಿಯೋ ಕಾನ್ಫರೆನ್ಸ್‌ನಲ್ಲಿ ತಾಂತ್ರಿಕ ಅಡಚಣೆಗಳಿದ್ದು, ವಕೀಲರೊಂದಿಗೆ ನೇರ ಸಂವಹನ ನಡೆಸಲು ದರ್ಶನ್‌ಗೆ ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರು.
ಈ ವಾದ ಆಲಿಸಿದ ನ್ಯಾಯಾಧೀಶರು, “ನಿಮ್ಮ ಕಕ್ಷಿದಾರರ ಜೊತೆ ಮಾತನಾಡುವುದು ಎಲ್ಲರಿಗೂ ಕೇಳುತ್ತದೆ ಎಂಬ ಆಕ್ಷೇಪ ನಿಮಗಿರಬಹುದು. ಆದರೆ ವಿಡಿಯೋ ಕಾನ್ಫರೆನ್ಸ್‌ನಲ್ಲೇ ಖಾಸಗಿ ಮಾತುಕತೆಗೆ ಪ್ರತ್ಯೇಕ ವ್ಯವಸ್ಥೆ ಮಾಡಿಕೊಡುತ್ತೇವೆ” ಎಂದು ಸ್ಪಷ್ಟಪಡಿಸಿದರು.
ಕೋರ್ಟ್ ಕಲಾಪ ಆರಂಭವಾಗುವುದಕ್ಕೂ 15 ನಿಮಿಷ ಮುನ್ನವೇ ವಕೀಲರು ತಮ್ಮ ಕಕ್ಷಿದಾರ ದರ್ಶನ್ ಜೊತೆ ಮಾತನಾಡಲು ಸೂಕ್ತ ಅವಕಾಶ ಕಲ್ಪಿಸಿಕೊಡಲಾಗುವುದು ಎಂದು ಪೀಠವು ದರ್ಶನ್ ವಕೀಲರಿಗೆ ಭರವಸೆ ನೀಡಿದೆ.
‘ಪರಪ್ಪನ ಅಗ್ರಹಾರದಲ್ಲೇ ಕೋರ್ಟ್ ವ್ಯವಸ್ಥೆ’: ಸೌಹಾರ್ದಯುತ ತೀರ್ಮಾನಕ್ಕೆ ಹೈಕೋರ್ಟ್ ಸಲಹೆ
ದರ್ಶನ್ ಅವರನ್ನು ಜೈಲಿನಿಂದ ಕೋರ್ಟ್‌ಗೆ ಕರೆತರಲು ಭಾರಿ ಪೊಲೀಸ್ ಭದ್ರತೆ ಬೇಕಾಗುತ್ತದೆ. ಜೈಲಿನಿಂದ ಹೊರಗೆ ತಂದರೆ ಸಾರ್ವಜನಿಕ ಜನದಟ್ಟಣೆ ನಿಯಂತ್ರಿಸುವುದು ಕಷ್ಟ ಎಂದು ನ್ಯಾಯಾಧೀಶರು ತಮ್ಮ ಕಳವಳ ವ್ಯಕ್ತಪಡಿಸಿದ್ದಾರೆ.
ಖುದ್ದಾಗಿ ಹಾಜರಾಗುವುದಕ್ಕಿಂತ ವಿಡಿಯೋ ಕಾನ್ಫರೆನ್ಸ್‌ನಲ್ಲೇ ಸ್ಪಷ್ಟವಾಗಿ ಧ್ವನಿ ಕೇಳಿಸುತ್ತದೆ ಎಂದು ಜಡ್ಜ್ ಅಭಿಪ್ರಾಯಪಟ್ಟಿದ್ದಾರೆ. ಬೇಕಿದ್ದರೆ ಪರಪ್ಪನ ಅಗ್ರಹಾರ ಜೈಲಿನಲ್ಲೇ ಕೋರ್ಟ್ ವ್ಯವಸ್ಥೆ ಮಾಡಿ ವಿಚಾರಣೆ ನಡೆಸಬಹುದು ಎಂದು ಆಯ್ಕೆ ನೀಡಿದ್ದಾರೆ.
ಎರಡೂ ಕಡೆಯ ವಕೀಲರು ಚರ್ಚಿಸಿ ಸೌಹಾರ್ದಯುತವಾಗಿ ಒಂದು ತೀರ್ಮಾನಕ್ಕೆ ಬನ್ನಿ ಎಂದು ಸಲಹೆ ನೀಡಲಾಗಿದೆ. ಕ್ರಾಸ್ ಎಕ್ಸಾಮಿನೇಷನ್ ದಿನಾಂಕವನ್ನು ಸ್ಪಷ್ಟಪಡಿಸುವಂತೆ ಸೂಚಿಸಿ ವಿಚಾರಣೆಯನ್ನು ಮುಂದೂಡಲಾಗಿದ್ದು, ಇದರಿಂದ ಟ್ರಯಲ್ ಇನ್ನಷ್ಟು ತಡವಾಗುವ ಸಾಧ್ಯತೆಯಿದೆ.




