ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಉದ್ಯೋಗ ಪಡೆಯಲು ಬಯಸುವ ಅಭ್ಯರ್ಥಿಗಳಿಗೆ ಸಿಬ್ಬಂದಿ ನೇಮಕಾತಿ ಆಯೋಗವು ಉತ್ತಮ ಅವಕಾಶ ತಂದಿದೆ. ಕಿರಿಯ ಅಭಿಯಂತರ ವಿಭಾಗದ ಒಟ್ಟು 1,748 ಹುದ್ದೆಗಳ ಭರ್ತಿಗೆ ಬೃಹತ್ ನೇಮಕಾತಿ ಪ್ರಕ್ರಿಯೆ ಶುರುವಾಗಿದೆ.
ಈ ನೇಮಕಾತಿಯಲ್ಲಿ ಸಿವಿಲ್, ಎಲೆಕ್ಟ್ರಿಕಲ್, ಮೆಕ್ಯಾನಿಕಲ್ ಸೇರಿದಂತೆ ವಿವಿಧ ತಾಂತ್ರಿಕ ವಿಭಾಗಗಳಲ್ಲಿ ಡಿಪ್ಲೋಮಾ ಅಥವಾ ಇಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿದ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ.
ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಸೆಪ್ಟೆಂಬರ್ 22, 2026ರೊಳಗೆ ಆಯೋಗದ ಅಧಿಕೃತ ಜಾಲತಾಣದ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ದೇಶದಾದ್ಯಂತ ಯಾವುದೇ ಭಾಗದಲ್ಲಿ ಕಾರ್ಯನಿರ್ವಹಿಸಲು ಅಭ್ಯರ್ಥಿಗಳು ಸಿದ್ಧರಿರಬೇಕು.
ವೇತನ ಶ್ರೇಣಿ, ವಯೋಮಿತಿ ಮತ್ತು ಅರ್ಜಿ ಶುಲ್ಕದ ವಿವರ
ಆಯ್ಕೆಯಾಗುವ ಅಭ್ಯರ್ಥಿಗಳಿಗೆ 7ನೇ ವೇತನ ಆಯೋಗದ ನಿಯಮದಂತೆ ತಿಂಗಳಿಗೆ ₹35,400 ರಿಂದ ₹1,12,400 ರವರೆಗೆ ಆಕರ್ಷಕ ವೇತನ ದೊರೆಯಲಿದೆ. ಇದರೊಂದಿಗೆ ಸರ್ಕಾರಿ ನಿಯಮಾನುಸಾರ ವಿವಿಧ ಭತ್ಯೆಗಳು ಸಿಗಲಿವೆ.
ಆಗಸ್ಟ್ 1, 2026ಕ್ಕೆ ಅನ್ವಯವಾಗುವಂತೆ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ತುಂಬಿರಬೇಕು. ಗರಿಷ್ಠ ವಯೋಮಿತಿ 30 ರಿಂದ 32 ವರ್ಷ ಇರಲಿದ್ದು, ನಿಯಮಗಳಂತೆ ಹಿಂದುಳಿದ ವರ್ಗದವರಿಗೆ 3 ವರ್ಷ ಹಾಗೂ ಪ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಇರಲಿದೆ.
ಸಾಮಾನ್ಯ ಹಾಗೂ ಹಿಂದುಳಿದ ವರ್ಗದ ಪುರುಷ ಅಭ್ಯರ್ಥಿಗಳಿಗೆ ₹100 ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಆಯ್ಕೆ ಪ್ರಕ್ರಿಯೆ ಮತ್ತು ಪ್ರಮುಖ ದಿನಾಂಕಗಳು
ಅಭ್ಯರ್ಥಿಗಳ ಆಯ್ಕೆಯನ್ನು ಎರಡು ಹಂತದ ಗಣಕಯಂತ್ರ ಆಧಾರಿತ ಪರೀಕ್ಷೆಗಳ ಮೂಲಕ ನಡೆಸಲಾಗುತ್ತದೆ. ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ದಾಖಲಾತಿ ಪರಿಶೀಲನೆ ನಡೆಯಲಿದೆ.
ತಾತ್ಕಾಲಿಕ ವೇಳಾಪಟ್ಟಿಯಂತೆ ಮೊದಲ ಹಂತದ ಪರೀಕ್ಷೆಯು ಅಕ್ಟೋಬರ್-ನವೆಂಬರ್ 2026ರಲ್ಲಿ ನಡೆಯಲಿದೆ. ಎರಡನೇ ಹಂತದ ಪರೀಕ್ಷೆಯನ್ನು ಡಿಸೆಂಬರ್ 2026ರಲ್ಲಿ ನಡೆಸಲು ತೀರ್ಮಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 22 ಕೊನೆಯ ದಿನವಾಗಿದ್ದು, ಶುಲ್ಕ ಪಾವತಿಸಲು ಸೆಪ್ಟೆಂಬರ್ 23 ಕೊನೆಯ ದಿನಾಂಕವಾಗಿದೆ. ಕೇಂದ್ರ ಸರ್ಕಾರಿ ಕೆಲಸ ಬಯಸುವ ತಾಂತ್ರಿಕ ಅಭ್ಯರ್ಥಿಗಳು ತಕ್ಷಣವೇ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.




