ಮಕ್ಕಳಿಗೆ ದೊಡ್ಡವರ ಟೂತ್​​ಪೇಸ್ಟ್ ಕೊಡುತ್ತಿದ್ದೀರಾ? ಮೊದಲು ಇದನ್ನು ತಿಳಿಯಿರಿ

ಸಾಮಾನ್ಯವಾಗಿ ಕುಟುಂಬದಲ್ಲಿ ಎಲ್ಲರಿಗೂ ಸೇರಿ ಒಂದು ಟೂತ್​​ಪೇಸ್ಟ್ (ಹಲ್ಲುಜ್ಜುವ ಪೇಸ್ಟ್) ತರುವುದು ಬಹುತೇಕ ಮನೆಗಳಲ್ಲಿ ರೂಢಿ. ಹಣ ಉಳಿಸುವ ಜೊತೆಗೆ ಬೇರೆ ಬೇರೆ ವಯಸ್ಸಿನವರಿಗೆ ಬೇರೆ ಬೇರೆ ಪೇಸ್ಟುಗಳು ಬೇಕಾಗುತ್ತವೆ ಎಂಬ ಅರಿವು ಇಲ್ಲದಿರುವುದು ಸಹ ಇದಕ್ಕೆ ಕಾರಣ ಆಗಿರಬಹುದು. ಬಹುತೇಕ ಮನೆಗಳಲ್ಲಿ ಮಕ್ಕಳು ವಿಶೇಷವಾಗಿ 5 ಅಥವಾ ಆರು ವರ್ಷ ವಯಸ್ಸಿನ ಒಳಗಿರುವ ಮಕ್ಕಳು ತಂದೆ ತಾಯಿ ಬಳಸುವ ಟೂತ್ ಪೇಸ್ಟ್ ಅನ್ನೇ ಹಲ್ಲುಜ್ಜಲು ಬಳಸುತ್ತಾರೆ. ಆದರೆ ಇದು ಸೂಕ್ತವಲ್ಲ. ಹೀಗೆ ಮಾಡುವುದರಿಂದ ನಿಮ್ಮ ಮಕ್ಕಳ ನಾಜೂಕಾದ ಹಲ್ಲುಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ.

ವಿಜ್ಞಾನ ಹೇಳುವುದೇನು?

ಹಲ್ಲುಗಳು ದೇಹದ ಬಹಳ ಗಟ್ಟಿ ಭಾಗಗಳು. ಮನುಷ್ಯ ಸತ್ತು ದೇಹ ಕೊಳೆತರು ಹಲ್ಲು ಕೊಳೆಯುವುದಿಲ್ಲ. ಮನುಷ್ಯನ ದೇಹ ಸುಟ್ಟು ಬೂದಿಯಾದರು ಹಲ್ಲುಗಳು ಹಾಗೆ ಉಳಿಯುತ್ತವೆ. ಅಷ್ಟು ಕಠಿಣ ಗುಣವುಳ್ಳ ಹಲ್ಲುಗಳು ಅಷ್ಟೇ ಸೂಕ್ಷ್ಮತೆಯನ್ನು ಸಹ ಹೊಂದಿರುತ್ತವೆ. ವಿಶೇಷವಾಗಿ ಐದು ಅಥವಾ ಆರು ವರ್ಷದ ಒಳಗಿನ ಮಕ್ಕಳ ಹಲ್ಲುಗಳು. ಏಕೆಂದರೆ ಅವಿನ್ನೂ ಹಾಲು ಹಲ್ಲುಗಳಾಗಿರುತ್ತವೆ. ಭವಿಷ್ಯದಲ್ಲಿ ಬರುವ ಶಾಶ್ವತ ಹಲ್ಲುಗಳು ಅವುಗಳ ಕೆಳಗೇ ಅಡಗಿರುತ್ತವೆ. ವಯಸ್ಕರ ಹಲ್ಲುಗಳು ಹಾಗೂ ಮಕ್ಕಳ ಹಲ್ಲುಗಳಲ್ಲಿ ಸಾಕಷ್ಟು ವ್ಯತ್ಯಾಸ ಇರುತ್ತವೆ. ವಿಶೇಷವಾಗಿ ಸೂಕ್ಷ್ಮತೆ (ಸೆನ್ಸಿಟಿವಿಟಿ) ವಿಚಾರದಲ್ಲಿ ಹಾಗೂ ಹಲ್ಲಿನ ಅತಿ ಮುಖ್ಯ ಭಾಗವಾದ ಎನಾಮಲ್ ಸಹ ಭಿನ್ನವಾಗಿರುತ್ತದೆ. ಇದೇ ಕಾರಣಗಳಿಗಾಗಿ ವಯಸ್ಕರ ಟೂತ್​​ಪೇಸ್ಟ್ ಮತ್ತು ಮಕ್ಕಳ ಟೂತ್​​ಪೇಸ್ಟ್ ಬೇರೆ-ಬೇರೆ ಇರಬೇಕು ಎನ್ನುತ್ತಾರೆ ದಂತ ಚಿಕಿತ್ಸಕರು.

40 ವರ್ಷ ವಯಸ್ಸಿನ ಒಳಗಿನವರ ಹಲ್ಲುಗಳು ಹೆಚ್ಚು ಕಠಿಣವಾಗಿರುತ್ತವೆ. ಹಲ್ಲುಗಳು ಮೇಲಿನ ಎನಾಮಲ್ ಭಾಗ ದೊಡ್ಡದಾಗಿರುತ್ತದೆ ಮತ್ತು ಗಟ್ಟಿಯಾಗಿರುತ್ತದೆ. ಜೊತೆಗೆ ಮಕ್ಕಳ ಹಲ್ಲುಗಳಿಗೆ ಹೋಲಿಸಿದರೆ ಹೆಚ್ಚು ರೋಗಪ್ರತಿರೋಧಕ ಶಕ್ತಿಯನ್ನು ಹೆಚ್ಚು ಹೊಂದಿರುತ್ತವೆ. ಆದರೆ ಮಕ್ಕಳ ಹಲ್ಲುಗಳು ಹಾಗಲ್ಲ, ಅವಿನ್ನೂ ಹಾಲು ಹಲ್ಲುಗಳಾಗಿರುತ್ತವೆ. ಹುಳುಕುಗಳಿಗೆ ಪ್ರತಿರೋಧಕತ್ವವವನ್ನು ಹೊಂದಿರುವುದಿಲ್ಲ ಮತ್ತು ಮುಖ್ಯವಾಗಿ ಎನಾಮಲ್ ಭಾಗ ಬಹಳ ತೆಳುವಾಗಿರುತ್ತವೆ. ಹಾಗಾಗಿ ಅವುಗಳಿಗೆ ಬೇರೆಯದ್ದೇ ರೀತಿಯ ಆರೈಕೆ, ಟೂತ್​​ಪೇಸ್ಟ್ ಬೇಕಾಗುತ್ತದೆ.

ವಯಸ್ಕರ ಟೂತ್‌ಪೇಸ್ಟ್‌ ಏಕೆ ಬಳಸಬಾರದು?

ವಯಸ್ಕರು ಬಳಸುವ ಟೂತ್​​​ಪೇಸ್ಟ್​ನಲ್ಲಿ ಫ್ರೋರೈಡ್ ಅಂಶ ಹೆಚ್ಚಾಗಿರುತ್ತದೆ. ಈ ಫ್ಲೋರೈಡ್ ಅಂಶ ಟೂತ್​​ಪೇಸ್ಟ್​​ಗಳಲ್ಲಿ ಇರಬೇಕಾದುದು ಬಹಳ ಮುಖ್ಯ, ಇದು ಹಲ್ಲುಗಳು ಹುಳುಕು ಬೀಳುವುದರಿಂದ ರಕ್ಷಿಸುತ್ತದೆ. ಆದರೆ ವಯಸ್ಕರ ಟೂತ್​​ಪೇಸ್ಟ್​​ನಲ್ಲಿ ಈ ಅಂಶ ಹೆಚ್ಚಾಗಿರುತ್ತದೆ. ಸಾಮಾನ್ಯವಾಗಿ 1450 ಪಿಪಿಎಂ ನಿಂದ 1500 ಪಿಪಿಎಂ ವರೆಗೆ ಫ್ಲೋರೈಡ್ ಅಂಶವನ್ನು ವಯಸ್ಕರ ಟೂತ್​​ಪೇಸ್ಟ್ ಹೊಂದಿರುತ್ತದೆ. ಫ್ಲೋರೈಡ್ ಹಲ್ಲುಗಳ ರಕ್ಷಣೆಗೆ ಅಗತ್ಯವಾದ ರಾಸಾಯನಿಕ ಆದರೆ ಹೆಚ್ಚಾದರೆ ಅಪಾಯಕಾರಿ ಸಹ. ವಿಶೇಷವಾಗಿ ಮಕ್ಕಳಿಗೆ ಫ್ಲೋರೈಡ್ ಹೆಚ್ಚಾಗಬಾರದು. ಇದರಿಂದ ಕೆಲ ಸಮಸ್ಯೆಗಳು ಉಂಟಾಗುತ್ತವೆ. ವಿಶೇಷವಾಗಿ ಮಕ್ಕಳು ಟೂತ್​​ಪೇಸ್ಟ್ ಅನ್ನು ನುಂಗುವ ಚಟವುಳ್ಳವರಾದ್ದರಿಂದ ಫ್ಲೋರೈಡ್ ಪರಿಣಾಮ ಅವರ ಮೇಲೆ ಹೆಚ್ಚಾಗುವ ಸಂಭವ ಇರುತ್ತದೆ.

ಫ್ಲೋರೈಡ್ ಅತಿಯಾಗಿ ದೇಹಕ್ಕೆ ಸೇರುವುದರಿಂದ ಮಕ್ಕಳ ವಸಡಿನ ಸೆನ್ಸಿಟಿವಿಟಿ ಹಾಳಾಗುತ್ತದೆ. ಮುಂದೆ ಬರಲಿರುವ ಶಾಶ್ವತ ಹಲ್ಲುಗಳ ಆಕಾರದ ಮೇಲೆ ಪರಿಣಾಮ ಬೀರುತ್ತದೆ ಹಾಗೂ ಆ ಹಲ್ಲುಗಳ ಮೇಲಿನ ಎನಾಮಲ್ ಪರದೆಯನ್ನು ದುರ್ಬಲಗೊಳಿಸುತ್ತದೆ. ಜೊತೆಗೆ ಮಕ್ಕಳ ಜೀರ್ಣಾಂಗ ವ್ಯವಸ್ಥೆಯ ಮೇಲೂ ಪರಿಣಾಮ ಬೀರುತ್ತದೆ. ಕೆಲವರಿಗೆ ಭೇದಿ ಉಂಟಾಬಹುದು. ಒಮ್ಮೊಮ್ಮೆ ಹಲ್ಲುಗಳ ಮೇಲೆ ಗಾಢ ಬಿಳಿ ಬಣ್ಣದ ಮಚ್ಚೆಗಳ ಏಳುವಂತಾಗುತ್ತದೆ.

ದಂತ ವೈದ್ಯರ ಸಲಹೆ ಏನು?

ಮಕ್ಕಳು ವಿಶೇಷವಾಗಿ ಆರು ವರ್ಷದ ಒಳಗಿನ ಮಕ್ಕಳು ವಯಸ್ಕರ ಟೂತ್​​ಪೇಸ್ಟ್ ಬಳಸುವ ಬದಲಿಗೆ ಫ್ಲೋರೈಡ್ ಅಂಶ ಕಡಿಮೆ ಇರುವ ಮಕ್ಕಳಿಗಾಗಿಯೇ ವಿನ್ಯಾಸ ಮಾಡಲಾಗಿರುವ ಮಕ್ಕಳ ಟೂತ್​​ಪೇಸ್ಟ್ ಬಳಸುವುದು ಸೂಕ್ತ. ಅಥವಾ ಒಂದೊಮ್ಮೆ ದೊಡ್ಡವರ ಟೂತ್​​ಪೇಸ್ಟ್ ಬಳಸಲೇ ಬೇಕಾದ ಅನಿವಾರ್ಯತೆ ಇದ್ದಲ್ಲಿ, ಮೂರು ವರ್ಷದ ವಯಸ್ಸಿನ ಕೆಳಗಿನ ಮಕ್ಕಳಿಗೆ ಕೇವಲ ಒಂದು ಅಕ್ಕಿ ಕಾಳಿನ ಗಾತ್ರದಷ್ಟು ದೊಡ್ಡವರ ಟೂತ್​​ಪೇಸ್ಟ್ ಕೊಡುವುದು, ಮೂರು ವರ್ಷದ ಮೇಲಿನ ಆರು ವರ್ಷದ ಕೆಳಗಿನ ಮಕ್ಕಳಿಗೆ ಒಂದು ಬಟಾಣಿ ಕಾಳಿನಷ್ಟು ಗಾತ್ರದ ಟೂತ್​​ಪೇಸ್ಟ್ ಅನ್ನಷ್ಟೆ ಕೊಡಬೇಕು ಎನ್ನುತ್ತಾರೆ ವೈದ್ಯರು. ಅಂದಹಾಗೆ ಟೂತ್​​ಪೇಸ್ಟ್​​ನಲ್ಲಿ ಫ್ಲೋರೈಡ್ ಇದೆ ಎಂದ ಮಾತ್ರಕ್ಕೆ ಅದು ‘ಕೆಮಿಕಲ್’ ಯುಕ್ತ ಎಂದಲ್ಲ, ಫ್ಲೋರೈಡ್ ಹಲ್ಲುಗಳ ಆರೋಗ್ಯಕ್ಕೆ ಬಹಳ ಒಳ್ಳೆಯದು. ಮಕ್ಕಳಿಗೆ ಇದ್ದಿಲು, ಬೇವಿನಕಡ್ಡಿಗಳಲ್ಲಿ ಹಲ್ಲುಜ್ಜಿಸುವ ಪ್ರಯತ್ನ ಬೇಡ ಬದಲಿಗೆ ಮಕ್ಕಳ ಟೂತ್​​ಪೇಸ್ಟ್ ಅಥವಾ ವಯಸ್ಕರ ಟೂತ್​​ಪೇಸ್ಟ್​​ನ ಅತ್ಯಂತ ಕಡಿಮೆ ಪ್ರಮಾಣದಲ್ಲಿ ನೀಡಿ.