ಬಿಡುಗಡೆಗೆ ಸಿದ್ಧವಾಯ್ತು ‘ಟಾಕ್ಸಿಕ್’ ಇಂಗ್ಲಿಷ್ ಆವೃತ್ತಿ; ಕೆಲ ಪ್ರಮುಖ ಬದಲಾವಣೆಗಳೊಂದಿಗೆ ರಿಲೀಸ್

'ಟಾಕ್ಸಿಕ್' ಧಮಾಕಾ

Photo Credits: @kvn.productions (Instagram)

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಭಾರತೀಯ ಭಾಷೆಗಳಲ್ಲಿ ಬಿಡುಗಡೆಯಾಗಿ ಹತ್ತು ದಿನಗಳು ಪೂರೈಸುತ್ತಿವೆ. ದೇಶಾದ್ಯಂತ ಬಿಡುಗಡೆಯಾಗಿರುವ ಭಾರತೀಯ ಆವೃತ್ತಿಗಳು ಪ್ರೇಕ್ಷಕರಿಂದ ಭರ್ಜರಿ ಮೆಚ್ಚುಗೆಯನ್ನು ಪಡೆದುಕೊಂಡಿವೆ.

ಈ ಸಿನಿಮಾವನ್ನು ಆರಂಭದಲ್ಲೇ ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಏಕಕಾಲಕ್ಕೆ ಶೂಟಿಂಗ್ ಮಾಡಲಾಗಿತ್ತು. ಕನ್ನಡದಲ್ಲಿ ಚಿತ್ರೀಕರಿಸಿದ ಆವೃತ್ತಿಯನ್ನು ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಿಗೆ ಡಬ್ ಮಾಡಿ ಪ್ರದರ್ಶಿಸಲಾಗಿತ್ತು.

ಇದೀಗ ಭಾರತೀಯ ಭಾಷೆಗಳ ಆವೃತ್ತಿ ರಿಲೀಸ್ ಆದ 10 ದಿನಗಳ ಬಳಿಕ, ಸಿನಿಮಾದ ಇಂಗ್ಲಿಷ್ ಆವೃತ್ತಿಯನ್ನು ಜಾಗತಿಕ ಮಟ್ಟದಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ.

ಸೆಪ್ಟೆಂಬರ್ 4ರಂದು ರಿಲೀಸ್: ಲಯನ್ಸ್ ಗೇಟ್ ಸಾಥ್

‘ಟಾಕ್ಸಿಕ್’ ಸಿನಿಮಾದ ಇಂಗ್ಲಿಷ್ ಆವೃತ್ತಿಯು ನಾಳೆ ಅಂದರೆ ಸೆಪ್ಟೆಂಬರ್ 4ರಂದು ಜಗತ್ತಿನಾದ್ಯಂತ ಬಿಡುಗಡೆಯಾಗಲಿದೆ. ಈ ಆವೃತ್ತಿಯು ಪ್ರಮುಖವಾಗಿ ವಿದೇಶಗಳಲ್ಲಿ ಹಾಗೂ ಭಾರತದ ಕೆಲವು ಆಯ್ದ ಮೆಟ್ರೋ ನಗರಗಳಲ್ಲಿ ಮಾತ್ರ ಪ್ರದರ್ಶನ ಕಾಣಲಿದೆ.

ವಿಶೇಷವೆಂದರೆ ಹಾಲಿವುಡ್‌ನ ಬೃಹತ್ ನಿರ್ಮಾಣ ಹಾಗೂ ವಿತರಣಾ ಸಂಸ್ಥೆಯಾದ ‘ಲಯನ್ಸ್ ಗೇಟ್’ ಜೊತೆಗೆ ಚಿತ್ರತಂಡ ಒಪ್ಪಂದ ಮಾಡಿಕೊಂಡಿದೆ. ವಿದೇಶಗಳಲ್ಲಿ ಈ ಇಂಗ್ಲಿಷ್ ಆವೃತ್ತಿಯ ವಿತರಣೆಯನ್ನು ಲಯನ್ಸ್ ಗೇಟ್ ಸಂಸ್ಥೆಯೇ ನಿರ್ವಹಿಸುತ್ತಿದೆ.

ಭಾರತೀಯ ಭಾಷೆಗಳಲ್ಲಿ ಈಗಾಗಲೇ ಭಾರಿ ಗಳಿಕೆ ಮಾಡುತ್ತಿರುವ ‘ಟಾಕ್ಸಿಕ್’, ಇಂಗ್ಲಿಷ್ ಆವೃತ್ತಿಯ ಮೂಲಕ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಮತ್ತಷ್ಟು ಹೊಸ ದಾಖಲೆ ಬರೆಯುವ ನಿರೀಕ್ಷೆಯನ್ನು ಚಿತ್ರತಂಡ ಹೊಂದಿದೆ.

ಇಂಗ್ಲಿಷ್ ಆವೃತ್ತಿಯಲ್ಲಿ ಏನೆಲ್ಲಾ ಬದಲಾವಣೆಗಳಿರಲಿವೆ?

ಚಿತ್ರದ ನಿರ್ಮಾಣ ಸಂಸ್ಥೆಯಾದ ಕೆವಿಎನ್ ಪ್ರೊಡಕ್ಷನ್ಸ್ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಇಂಗ್ಲಿಷ್ ಆವೃತ್ತಿಯು ಭಾರತೀಯ ಆವೃತ್ತಿಗಿಂತ ಕಡಿಮೆ ಅವಧಿಯನ್ನು ಹೊಂದಿರಲಿದೆ. ಜಾಗತಿಕ ಪ್ರೇಕ್ಷಕರಿಗೆ ತಲುಪುವಂತೆ ಸಿನಿಮಾವನ್ನು ಟ್ರಿಮ್ ಮಾಡಲಾಗಿದೆ.

ಭಾರತೀಯ ಆವೃತ್ತಿಯಲ್ಲಿದ್ದ ಕೆಲ ಹಾಡುಗಳು ಹಾಗೂ ಕೆಲವು ದೃಶ್ಯಗಳನ್ನು ಇಂಗ್ಲಿಷ್ ಆವೃತ್ತಿಯಿಂದ ಕೈಬಿಡಲಾಗಿದೆ. ಈ ಸುದ್ದಿಯನ್ನು ಕೇಳಿ ಈಗಾಗಲೇ ತಮ್ಮ ಮಾತೃಭಾಷೆಯಲ್ಲಿ ಸಿನಿಮಾ ನೋಡಿದ ಅಭಿಮಾನಿಗಳು, ಇಂಗ್ಲಿಷ್ ಆವೃತ್ತಿಯನ್ನೂ ವೀಕ್ಷಿಸಲು ತೀವ್ರ ಕಾತುರ ವ್ಯಕ್ತಪಡಿಸಿದ್ದಾರೆ.

ಈ ಅದ್ಧೂರಿ ಚಿತ್ರದಲ್ಲಿ ಯಶ್ ದ್ವಿಪಾತ್ರದಲ್ಲಿ ನಟಿಸಿದ್ದು, ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ರುಕ್ಮಿಣಿ ವಸಂತ್ ಹಾಗೂ ತಾರಾ ಸುತಾರಿಯಾ ಮುಖ್ಯ ಪಾತ್ರಗಳಲ್ಲಿದ್ದಾರೆ. ಗೀತು ಮೋಹನ್ ದಾಸ್ ನಿರ್ದೇಶನದ ಈ ಚಿತ್ರಕ್ಕೆ ರವಿ ಬಸ್ರೂರ್ ಹಿನ್ನೆಲೆ ಸಂಗೀತ ನೀಡಿದ್ದಾರೆ.