TOXIC: ‘ಟಾಕ್ಸಿಕ್’ ಆಕ್ಷನ್ ಸೀಕ್ರೆಟ್ ಔಟ್; ಯಶ್ ಡೆಡಿಕೇಷನ್‌ಗೆ ಹಾಲಿವುಡ್ ಡೈರೆಕ್ಟರ್ ಫಿದಾ

'ಟಾಕ್ಸಿಕ್' ಆಕ್ಷನ್ ಸೀಕ್ರೆಟ್ ಔಟ್

Photo Credits: @jjlocoperry (Instagram)

ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿರುವ ‘ರಾಕಿಂಗ್ ಸ್ಟಾರ್’ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾದ ಆಕ್ಷನ್ ದೃಶ್ಯಗಳು ಜಾಗತಿಕ ಮಟ್ಟದಲ್ಲಿ ಸಖತ್ ಸದ್ದು ಮಾಡುತ್ತಿವೆ. ಅತ್ಯಂತ ಅದ್ಧೂರಿ ಹಾಗೂ ವಿಭಿನ್ನವಾಗಿ ಮೂಡಿಬಂದಿರುವ ಈ ಸಾಹಸ ದೃಶ್ಯಗಳನ್ನು ಹಾಲಿವುಡ್‌ನ ಜನಪ್ರಿಯ ಆಕ್ಷನ್ ಕೊರಿಯೋಗ್ರಾಫರ್ ಜೆಜೆ ಪೆರ್ರಿ ನಿರ್ದೇಶಿಸಿದ್ದಾರೆ.

ಪ್ರೇಕ್ಷಕರು ಸಿನಿಮಾದ ಮೇಕಿಂಗ್, ಯಶ್ ನಟನೆ ಮತ್ತು ಕ್ಲೈಮ್ಯಾಕ್ಸ್ ಟ್ವಿಸ್ಟ್‌ಗಳಿಗೆ ಸಂಪೂರ್ಣವಾಗಿ ಮನಸೋತಿದ್ದಾರೆ. ಇದೀಗ ಕೆವಿಎನ್ ಸಂಸ್ಥೆಯು ಆಕ್ಷನ್ ಸೀನ್ಗಳ ಚಿತ್ರೀಕರಣದ ವಿಶೇಷ ವಿಡಿಯೋ ಬಿಡುಗಡೆ ಮಾಡಿದ್ದು, ಅದರಲ್ಲಿ ಜೆಜೆ ಪೆರ್ರಿ ಅವರು ಯಶ್ ಮತ್ತು ಗೀತು ಮೋಹನ್‌ದಾಸ್ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

ಸರ್ಕಸ್ ಕ್ಯಾಂಪ್ ಫೈಟ್ ಹಾಗೂ ಗೀತು ಮೋಹನ್‌ದಾಸ್ ಸಾಥ್

ಸರ್ಕಸ್ ಕ್ಯಾಂಪ್‌ನಲ್ಲಿ ನಡೆಯುವ ಭೀಕರ ಫೈಟ್ ದೃಶ್ಯದ ಬಗ್ಗೆ ಹಂಚಿಕೊಂಡ ಜೆಜೆ ಪೆರ್ರಿ, “ಅದು ನಮಗೆ ಬಹಳ ದೊಡ್ಡ ಸವಾಲಾಗಿತ್ತು. ವಿಶೇಷ ಆಯುಧಗಳ ಬದಲು ಫೈಟ್ ನಡೆಯುವ ಲೊಕೇಶನ್‌ನಲ್ಲೇ ಸಿಗುವ ಪ್ರಾಪರ್ಟಿ ಬಳಸಿ ಫೈಟ್ ಸೃಷ್ಟಿಸುವುದು ನನಗೆ ಇಷ್ಟ. ಸರ್ಕಸ್ ಕ್ಯಾಂಪ್‌ನಲ್ಲಿ ನಮಗೆ ಅಂತಹ ಹಲವು ವಸ್ತುಗಳು ಸಿಕ್ಕವು” ಎಂದಿದ್ದಾರೆ.

ಸಾಮಾನ್ಯವಾಗಿ ಆಕ್ಷನ್ ಸೀನ್‌ಗಳಲ್ಲಿ ಸಿನಿಮಾದ ನಿರ್ದೇಶಕರು ತಲೆಹಾಕುವುದಿಲ್ಲ. ಆದರೆ ಗೀತು ಮೋಹನ್‌ದಾಸ್ ಪ್ರತಿ ವಿಷಯದಲ್ಲೂ ನಮ್ಮೊಂದಿಗೆ ಚರ್ಚಿಸುತ್ತಿದ್ದರು. ಯಶ್ ಹಾಗೂ ಗೀತು ಮೋಹನ್‌ದಾಸ್ ಜೋಡಿ ಒಂದು ಅದ್ಭುತವಾದ ಟೀಂ ಆಗಿ ಕೆಲಸ ಮಾಡಿದೆ ಎಂದು ಅವರು ಹೊಗಳಿದ್ದಾರೆ.

“ಯಶ್ ಬರಿ ಮೂವಿ ಸ್ಟಾರ್ ಅಲ್ಲ”: ಹಾಲಿವುಡ್ ಪೆರ್ರಿ ಮೆಚ್ಚುಗೆ

ಯಶ್ ನಟನಾ ಶ್ರಮವನ್ನು ಕೊಂಡಾಡಿದ ಜೆಜೆ ಪೆರ್ರಿ, “ಯಶ್ ಕೇವಲ ಓರ್ವ ಮೂವಿ ಸ್ಟಾರ್ ಮಾತ್ರವಲ್ಲ, ಅವರೊಬ್ಬ ಅದ್ಭುತ ಕಲಾವಿದ. ಸಿನಿಮಾ ಹಾಗೂ ಆಕ್ಷನ್ ಬಗ್ಗೆ ಅವರಿಗೆ ಅಪಾರ ಆಸಕ್ತಿ ಇದೆ. ನಟಿಸುವುದಷ್ಟೇ ಅಲ್ಲದೆ ಹಲವು ಹೊಸ ನೂತನ ಐಡಿಯಾಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದರು” ಎಂದು ಹೇಳಿದ್ದಾರೆ.

ಯಶ್ ಅವರ ನಡಿಗೆ ಮತ್ತು ನಿಲುವಿನಲ್ಲಿ ಅದ್ಭುತವಾದ ಸ್ವಾಗ್ ಇದೆ. ಫೈಟ್‌ಗಳಿಗಾಗಿ ಅವರು ತಮ್ಮನ್ನು ತಾವು ತಯಾರು ಮಾಡಿಕೊಳ್ಳುತ್ತಿದ್ದ ರೀತಿ, ಅವರ ಫಿಟ್‌ನೆಸ್ ಹಾಗೂ ಕಾಯಾಕಾಯದ ಶಕ್ತಿ ನಿಜಕ್ಕೂ ಪ್ರಶಂಸನೀಯ ಎಂದಿದ್ದಾರೆ.

ವಿದೇಶಿ ಫೈಟರ್ಸ್‌ಗಳಿಂದ ಯಶ್ ಗುಣಗಾನ

ಸಿನಿಮಾದಲ್ಲಿ ಬರುವ ‘ಲೇಡೀಸ್ ಆಂಡ್ ಲೇಡೀಸ್’ ಫೈಟ್‌ನಲ್ಲಿ ಕಾಣಿಸಿಕೊಂಡಿರುವ ವಿದೇಶಿ ಆಕ್ಷನ್ ಫೈಟರ್‌ಗಳು ಸಹ ಯಶ್ ಅವರ ಬದ್ಧತೆಯನ್ನು ಕಂಡು ಬೆರಗಾಗಿದ್ದಾರೆ. ವಿಡಿಯೋದಲ್ಲಿ ಮಾತನಾಡಿದ ಅವರು, ಯಶ್ ಅತ್ಯಂತ ಸರಳ ಹಾಗೂ ಅದ್ಭುತ ವ್ಯಕ್ತಿ ಎಂದು ಮುಕ್ತಕಂಠದಿಂದ ಹೊಗಳಿದ್ದಾರೆ.

ಪ್ರತಿಯೊಂದು ಫೈಟ್ ಸೀನ್‌ನಲ್ಲೂ ಯಶ್ ತೋರಿಸಿದ ಡೆಡಿಕೇಷನ್ ಚಿತ್ರದ ಮೆರುಗನ್ನು ಹೆಚ್ಚಿಸಿದೆ. ಒಟ್ಟಿನಲ್ಲಿ ಹಾಲಿವುಡ್ ಮಟ್ಟದ ಮೇಕಿಂಗ್‌ನೊಂದಿಗೆ ಬಂದಿರುವ ‘ಟಾಕ್ಸಿಕ್’ ಆಕ್ಷನ್ ದೃಶ್ಯಗಳು ಚಿತ್ರಮಂದಿರಗಳಲ್ಲಿ ಪ್ರೇಕ್ಷಕರಿಗೆ ಕಣ್ಣಿವೇಜಾರ ನೀಡುತ್ತಿವೆ.