TOXIC REACTION: ಮುಂಬೈನಲ್ಲಿ ‘ಟಾಕ್ಸಿಕ್’ ಪ್ರಶ್ನೆ; ಯಶ್ ಸಿನಿಮಾ ಬಗ್ಗೆ ಶಿವಣ್ಣ ಹೇಳಿದ್ದೇನು?

ಮುಂಬೈನಲ್ಲಿ 'ಟಾಕ್ಸಿಕ್' ಪ್ರಶ್ನೆ

Photo Credits: @cineloka (Instagram)

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಸದ್ಯ ತಮ್ಮ ಬಹುನಿರೀಕ್ಷಿತ ‘ಒರಿಜಿನಲ್ ಮಾನ್‌ಸ್ಟರ್’ ಚಿತ್ರದ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಪೋಸ್ಟರ್ ರಿಲೀಸ್ ಕಾರ್ಯಕ್ರಮ ಇತ್ತೀಚೆಗೆ ಮುಂಬೈನಲ್ಲಿ ಅದ್ಧೂರಿಯಾಗಿ ಜರುಗಿತು.

ಇದೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುಂಬೈ ಪತ್ರಕರ್ತರು ಶಿವಣ್ಣನಿಗೆ ರಾಕಿಂಗ್ ಸ್ಟಾರ್ ಯಶ್ ಅವರ ‘ಟಾಕ್ಸಿಕ್’ ಚಿತ್ರದ ಬಗ್ಗೆ ಪ್ರಶ್ನೆಗಳನ್ನು ಕೇಳಿದ್ದಾರೆ. ಕನ್ನಡ ಚಿತ್ರರಂಗದವರು ಸಿನಿಮಾ ಬಗ್ಗೆ ಏನು ಹೇಳುತ್ತಿದ್ದಾರೆ ಎಂದು ಮಾಧ್ಯಮದವರು ಪ್ರಶ್ನಿಸಿದ್ದಾರೆ.

ಇದಕ್ಕೆ ಸೆಂಚುರಿ ಸ್ಟಾರ್ ಶಿವಣ್ಣ ತಮ್ಮದೇ ಶೈಲಿಯಲ್ಲಿ ಸ್ಪಷ್ಟ ಹಾಗೂ ನೇರವಾದ ಉತ್ತರವನ್ನು ನೀಡಿದ್ದಾರೆ. ಯಶ್ ಸಿನಿಮಾ ಹಾಗೂ ಅದಕ್ಕೆ ಸಿಗುತ್ತಿರುವ ಪ್ರತಿಕ್ರಿಯೆಗಳ ಬಗ್ಗೆ ಶಿವಣ್ಣ ಏನೆಲ್ಲಾ ಮಾತನಾಡಿದರು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

‘ಟಾಕ್ಸಿಕ್’ ಬಗ್ಗೆ ಶಿವಣ್ಣ ಹೇಳಿದ್ದೇನು?

‘ಒರಿಜಿನಲ್ ಮಾನ್‌ಸ್ಟರ್’ ಲಾಂಚ್‌ಗಾಗಿ ಮುಂಬೈಗೆ ಬಂದಿದ್ದ ಶಿವಣ್ಣನಿಗೆ, ‘ಟಾಕ್ಸಿಕ್’ ಚಿತ್ರಕ್ಕೆ ನಿಮ್ಮ ಬೆಂಬಲ ಹೇಗಿದೆ ಎಂಬ ಪ್ರಶ್ನೆ ಎದುರಾಯಿತು. ಇದಕ್ಕೆ ಉತ್ತರಿಸಿದ ಶಿವಣ್ಣ, “ನಾನು ನನ್ನ ಚಿತ್ರದ ಕೆಲಸಕ್ಕಾಗಿ ಇಲ್ಲಿಗೆ ಬಂದಿದ್ದೇನೆ. ಹಾಗಾಗಿ ಇನ್ನೂ ಟಾಕ್ಸಿಕ್ ಸಿನಿಮಾ ನೋಡಲು ಸಾಧ್ಯವಾಗಿಲ್ಲ. ಆದರೆ ಬಿಡುವು ಮಾಡಿಕೊಂಡು ಖಂಡಿತ ಆ ಚಿತ್ರವನ್ನು ನೋಡುತ್ತೇನೆ” ಎಂದು ಭರವಸೆ ನೀಡಿದರು.

ಇಂಡಸ್ಟ್ರಿಯಲ್ಲಿ ರೆಸ್ಪಾನ್ಸ್ ಹೇಗಿದೆ?

‘ಟಾಕ್ಸಿಕ್’ ಚಿತ್ರದ ಬಗ್ಗೆ ನಿಮ್ಮ ಆಪ್ತರು ಹಾಗೂ ಸ್ನೇಹಿತರು ಏನು ಹೇಳುತ್ತಿದ್ದಾರೆ ಎಂದು ಪತ್ರಕರ್ತರು ಮರುಪ್ರಶ್ನೆ ಹಾಕಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಿವಣ್ಣ, “ಕೆಲವರು ಈ ಸಿನಿಮಾವನ್ನು ತುಂಬಾ ಮೆಚ್ಚಿಕೊಂಡಿದ್ದಾರೆ. ಪ್ರತಿಯೊಬ್ಬರಿಗೂ ಅವರದ್ದೇ ಆದ ಒಂದು ಸ್ಟೈಲ್ ಇರುತ್ತದೆ. ಆ ಸ್ಟೈಲ್ ಪ್ರಕಾರವೇ ಈ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ. ಇದರಲ್ಲಿ ಏನೋ ಒಂದು ಹೊಸ ವಿಚಾರವನ್ನು ಹೇಳಲು ಪ್ರಯತ್ನಿಸಿದ್ದಾರೆ. ಅದು ಹಲವು ಜನರಿಗೆ ಇಷ್ಟವಾಗಿದೆ” ಎಂದು ಸ್ಪಷ್ಟಪಡಿಸಿದ್ದಾರೆ.

Photo Credits: @cineloka (Instagram)

ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ‘ಒರಿಜಿನಲ್ ಮಾನ್‌ಸ್ಟರ್’

ಮುಂಬೈನಲ್ಲಿ ‘ಒರಿಜಿನಲ್ ಮಾನ್‌ಸ್ಟರ್’ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಶಿವಣ್ಣನ ಖಡಕ್ ಲುಕ್ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ನಿರ್ದೇಶಕ ಆರ್. ಚಂದ್ರು ಅವರು ಆನಂದ್ ಪಂಡಿತ್ ಅವರ ಜೊತೆಗೂಡಿ ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ‘ಕಬ್ಜ’ ಸಿನಿಮಾ ಮೂಲಕ ಹಿಂದಿ ಚಿತ್ರರಂಗಕ್ಕೆ ಹೋಗಿದ್ದ ಚಂದ್ರು, ಇದೀಗ ಮತ್ತೆ ಬಾಲಿವುಡ್ ಅಂಗಳಕ್ಕೆ ಕಾಲಿಟ್ಟಿದ್ದಾರೆ.

ಬಹುಭಾಷೆಗಳಲ್ಲಿ ಒಂದೇ ಟೈಟಲ್

ಈ ಸಿನಿಮಾ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಾಣಗೊಳ್ಳುತ್ತಿದೆ. ಕನ್ನಡದಲ್ಲಿ ಶಿವರಾಜ್‌ಕುಮಾರ್ ನಾಯಕರಾಗಿದ್ದರೆ, ತೆಲುಗಿನಲ್ಲಿ ಹಾಸ್ಯ ನಟ ಸುನಿಲ್ ಕಾಣಿಸಿಕೊಳ್ಳಲಿದ್ದಾರೆ. ಆದರೆ ತಮಿಳು, ಹಿಂದಿ ಹಾಗೂ ಮಲಯಾಳಂನಲ್ಲಿ ಯಾರು ನಟಿಸಲಿದ್ದಾರೆ ಎಂಬ ಕುತೂಹಲ ಸದ್ಯ ಅಭಿಮಾನಿಗಳಲ್ಲಿದೆ. ಒಟ್ಟಿನಲ್ಲಿ ಮುಂಬೈನಲ್ಲಿ ನಡೆದ ಶಿವಣ್ಣನ ಈ ಲಾಂಚ್ ಇವೆಂಟ್ ನ್ಯಾಷನಲ್ ಲೆವೆಲ್‌ನಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.