ಬೆಂಗಳೂರಿನಲ್ಲಿ ಹಿರಿಯ ಐಎಎಸ್ ಅಧಿಕಾರಿಯೊಬ್ಬರು ದಿಢೀರನೆ ಕಾಣೆಯಾಗಿರುವ ಘಟನೆ ಆಡಳಿತ ಮತ್ತು ಪೊಲೀಸ್ ಇಲಾಖೆಯಲ್ಲಿ ಸಂಚಲನ ಸೃಷ್ಟಿಸಿದೆ. ಈ ಅಧಿಕಾರಿ ಈ ಹಿಂದೆ ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಸೇವೆ ಸಲ್ಲಿಸಿದ್ದರು. ಇತ್ತೀಚೆಗೆ ಅವರ ಮನೆ ಮತ್ತು ಕಚೇರಿ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದರು. ಆ ದಾಳಿಯ ನಂತರವೇ ಅವರು ನಾಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಜ್ಞಾನೇಶ್ ಕುಮಾರ್ ಕುಟುಂಬದ ಜತೆಗೂ ಸಂಪರ್ಕ ಕಡಿದುಕೊಂಡಿರುವ ಅವರನ್ನು ಪತ್ತೆ ಮಾಡುವಂತೆ ಮತ್ತೊಬ್ಬ ಹಿರಿಯ ಐಎಎಸ್ ಅಧಿಕಾರಿ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರಿಗೆ ದೂರು ನೀಡಿದ್ದಾರೆ. ದೂರನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮೊಬೈಲ್ ಟವರ್ ಜಾಡು ಹಿಡಿದಾಗ ಅವರ ಕೊನೆಯ ಸ್ಥಳ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ತಿಳಿದುಬಂದಿದೆ. ವಿಮಾನ ನಿಲ್ದಾಣ ತಲುಪಿದ ನಂತರ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಅಲ್ಲಿಂದ ಅವರು ದೆಹಲಿಯತ್ತ ಪ್ರಯಾಣಿಸಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಈ ಪ್ರಕರಣವನ್ನು ಕೇವಲ ನಾಪತ್ತೆ ಪ್ರಕರಣವಾಗಿ ನೋಡಲು ಸಾಧ್ಯವಿಲ್ಲ. ಕೆಪಿಎಸ್‌ಸಿ ನೇಮಕಾತಿ ಅಕ್ರಮಗಳಿಗೆ ಸಂಬಂಧಿಸಿದಂತೆ ಇಡಿ ತನಿಖೆ ಚುರುಕುಗೊಂಡಿರುವ ಸಂದರ್ಭದಲ್ಲೇ ಅಧಿಕಾರಿ ಕಣ್ಮರೆಯಾಗಿರುವುದು ತನಿಖೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನವೇ ಎಂಬ ಪ್ರಶ್ನೆ ಮೂಡಿದೆ. ಇಂತಹ ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳು ಕಾನೂನು ಪ್ರಕ್ರಿಯೆಗೆ ಸಹಕರಿಸುವ ಬದಲು ಸಂಪರ್ಕಕ್ಕೆ ಸಿಗದಂತೆ ನಡೆದುಕೊಳ್ಳುವುದು ಆಡಳಿತ ವ್ಯವಸ್ಥೆಯ ವಿಶ್ವಾಸಾರ್ಹತೆಗೆ ಧಕ್ಕೆ ತರುತ್ತದೆ.
ಒಂದೊಮ್ಮೆ ಬಂಧನ ಭಯದಿಂದ ಪರಾರಿಯಾಗಿದ್ದರೆ ಅದು ತಪ್ಪಿತಸ್ಥ ಮನಸ್ಥಿತಿಯನ್ನು ಸೂಚಿಸುತ್ತದೆ. ಇಡಿ ದಾಳಿಯ ಬಳಿಕ ದೆಹಲಿಗೆ ತೆರಳಿರುವ ಶಂಕೆ ಕಾನೂನು ನೆರವು ಪಡೆಯುವ ಅಥವಾ ರಕ್ಷಣೆ ಕೋರುವ ಉದ್ದೇಶವನ್ನೂ ಹೊಂದಿರಬಹುದು. ಪೊಲೀಸರು ವಿಮಾನ ಪ್ರಯಾಣದ ದಾಖಲೆ, ಸಿಸಿಟಿವಿ ದೃಶ್ಯಗಳು ಮತ್ತು ಕುಟುಂಬದ ಹೇಳಿಕೆ ಆಧರಿಸಿ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಬೇಕಿದೆ.




