JAGAMAE SANGEETHAM: ಸಂಗೀತ ಪ್ರಿಯರಿಗೆ ‘ಪ್ರೈಮ್’ ಸರ್ಪ್ರೈಸ್; ಚಿರಂಜೀವಿ ಮಗಳ ವೆಬ್ ಸರಣಿಗೆ ಪ್ರಕಾಶ್ ರಾಜ್ ಹೀರೋ

ಜಗಮೇ ಸಂಗೀತಂ ವೆಬ್ ಸೀರೀಸ್

Photo Credits: @goldboxent (Instagram)

ಬಹುಭಾಷಾ ನಟ ಪ್ರಕಾಶ್ ರಾಜ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಜಗಮೇ ಸಂಗೀತಂ’ ಎಂಬ ಹೊಸ ತೆಲುಗು ವೆಬ್ ಸರಣಿ ಶೀಘ್ರದಲ್ಲೇ ಪ್ರಸಾರವಾಗಲಿದೆ. ಕರ್ನಾಟಕ ಸಂಗೀತದ ಹಿನ್ನೆಲೆ ಹೊಂದಿರುವ ಈ ಭಾವನಾತ್ಮಕ ಕೌಟುಂಬಿಕ ಸರಣಿಯ ಅಧಿಕೃತ ಸ್ಟ್ರೀಮಿಂಗ್ ದಿನಾಂಕವನ್ನು ಒಟಿಟಿ ಸಂಸ್ಥೆ ಅನೌನ್ಸ್ ಮಾಡಿದೆ. ಮೆಗಾಸ್ಟಾರ್ ಚಿರಂಜೀವಿ ಪುತ್ರಿ ಸುಶ್ಮಿತಾ ಕೊನಿಡೇಲ ಈ ಸಂಗೀತಮಯ ವೆಬ್ ಸೀರೀಸ್ ಅನ್ನು ಅತ್ಯಂತ ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ.

ಅಜ್ಜ-ಮೊಮ್ಮಗನ ಎಮೋಷನಲ್ ಕಥಾಹಂದರ: ಪ್ರಕಾಶ್ ರಾಜ್ ಸಂಗೀತ ವಿದ್ವಾನ್…

ಈ ವೆಬ್ ಸರಣಿಯಲ್ಲಿ ಪ್ರಕಾಶ್ ರಾಜ್ ಅವರು ಕರ್ನಾಟಕ ಸಂಗೀತ ವಿದ್ವಾನ್ ಪಾತ್ರದಲ್ಲಿ ಕಮಾಲ್ ಮಾಡಿದ್ದಾರೆ. ಅಜ್ಜನ ಸಂಗೀತ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಲು ಶ್ರಮಿಸುವ ಮೊಮ್ಮಗನ ಕಥೆ ಇಲ್ಲಿದೆ. ಕೌಟುಂಬಿಕ ಕಲಹಗಳು ಮತ್ತು ಎಮೋಷನಲ್ ಸವಾಲುಗಳ ನಡುವೆ ಮೊಮ್ಮಗ ಹೇಗೆ ಗುರಿ ತಲುಪುತ್ತಾನೆ ಎಂಬುದು ಇದರ ಕಥೆಯಾಗಿದೆ. ಹಿಂದಿಯ ಜನಪ್ರಿಯ ‘ಬಂದಿಶ್ ಬ್ಯಾಂಡಿಟ್ಸ್’ ಸರಣಿಯಿಂದ ಪ್ರೇರಿತಗೊಂಡು ಈ ವೆಬ್ ಸರಣಿಯನ್ನು ಸಿದ್ಧಪಡಿಸಲಾಗಿದೆ.

ಅಣ್ಣಯ್ಯ ಚಿತ್ರದ ನಾಯಕಿ ಮಧುಬಾಲಾ ರೀ-ಎಂಟ್ರಿ: ಸಖತ್ ಸ್ಟಾರ್ ಕಾಸ್ಟ್…

ಈ ಸರಣಿಯಲ್ಲಿ ‘ಅಣ್ಣಯ್ಯ’ ಚಿತ್ರದ ನಾಯಕಿ ಮಧುಬಾಲಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರೊಂದಿಗೆ ಮೇಕಾ ಶ್ರೀಕಾಂತ್, ಸುಶ್ಮಿತಾ ಶೆಟ್ಟಿ ಮತ್ತು ಅಕ್ಷಯ್ ಲಾಗುಸಾನಿ ನಟಿಸಿದ್ದಾರೆ. ಪಲ್ನಾಟಿ ಸೂರ್ಯ ಪ್ರತಾಪ್ ಈ ಸರಣಿಯನ್ನು ನಿರ್ದೇಶನ ಮಾಡಿದ್ದು, ಕಥೆಯನ್ನು ಬಹಳ ಕುತೂಹಲಕಾರಿಯಾಗಿ ಹೆಣೆದಿದ್ದಾರೆ. ವಿಶಾಲ್ ಚಂದ್ರಶೇಖರ್ ಅವರ ಸಂಗೀತ ನೀಡಿದ್ದು, ಸರಣಿಗೆ ಮ್ಯೂಸಿಕ್ ಪ್ರಮುಖ ಶಕ್ತಿಯಾಗಿ ಮೂಡಿಬಂದಿದೆ.

Photo Credits: @cinebuzz.media (Instagram)

ಸೆಪ್ಟೆಂಬರ್ 4ರಿಂದ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್…

ಸಂಗೀತ ಪ್ರಿಯರ ಮನ ಗೆಲ್ಲಲು ಸಜ್ಜಾಗಿರುವ ಈ ವೆಬ್ ಸರಣಿಯ ಪ್ರಸಾರದ ದಿನಾಂಕ ನಿಗದಿಯಾಗಿದೆ. ಜನಪ್ರಿಯ ಒಟಿಟಿ ಪ್ಲಾಟ್‌ಫಾರ್ಮ್ ‘ಅಮೆಜಾನ್ ಪ್ರೈಮ್ ವಿಡಿಯೋ’ದಲ್ಲಿ ಇದು ಪ್ರಸಾರವಾಗಲಿದೆ. ಇದೇ ಸೆಪ್ಟೆಂಬರ್ 4ರಂದು ವಿಶ್ವಾದ್ಯಂತ ‘ಜಗಮೇ ಸಂಗೀತಂ’ ಸರಣಿ ಅಧಿಕೃತವಾಗಿ ಸ್ಟ್ರೀಮಿಂಗ್ ಆರಂಭಿಸಲಿದೆ. ಒಟಿಟಿ ಪ್ರೇಕ್ಷಕರಿಗೆ ಈ ಸರಣಿಯು ಹೊಸ ರೀತಿಯ ಕೌಟುಂಬಿಕ ಹಾಗೂ ಸಂಗೀತಮಯ ಅನುಭವ ನೀಡಲಿದೆ.