Photo Credits: @nagathihallicinecreations (Instagram)
ತೊಂಬತ್ತರ ದಶಕದಲ್ಲಿ ‘ಅಮೆರಿಕಾ ಅಮೆರಿಕಾ’ ಸಿನಿಮಾ ಸೃಷ್ಟಿಸಿದ್ದ ಇತಿಹಾಸ ಹಾಗೂ ಎವರ್ಗ್ರೀನ್ ಹಾಡುಗಳನ್ನು ಕನ್ನಡಿಗರು ಎಂದಿಗೂ ಮರೆಯಲು ಸಾಧ್ಯವಿಲ್ಲ. ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಹಾಗೂ ಸಂಗೀತ ಮಾಂತ್ರಿಕ ಮನೋಮೂರ್ತಿ ಜೋಡಿಯ ಸೂಪರ್ ಹಿಟ್ ಕಾಂಬಿನೇಷನ್ ಸ್ಯಾಂಡಲ್ವುಡ್ನಲ್ಲಿ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಇದೀಗ ‘ಅಮೆರಿಕಾ ಅಮೆರಿಕಾ 2’ ಚಿತ್ರದ ಮೂಲಕ ಈ ಜೋಡಿ ಮತ್ತೆ ಒಂದಾಗಿದ್ದು, ಚಿತ್ರದ ಮೊದಲ ಗೀತೆ ‘ರನ್ ರನ್’ ಅದ್ಧೂರಿಯಾಗಿ ಬಿಡುಗಡೆಯಾಗಿದೆ.
ನಾಗತಿಹಳ್ಳಿ-ಮನೋಮೂರ್ತಿ ಮ್ಯಾಜಿಕ್ ಹಾಗೂ ‘ರನ್ ರನ್’ ಹಾಡಿನ ಮೆರಗು…
‘ಅಮೆರಿಕಾ ಅಮೆರಿಕಾ’ ಚಿತ್ರದ ‘ನೂರು ಜನುಮಕ್ಕೂ’, ‘ನನ್ನ ಪ್ರೀತಿಯ ಹುಡುಗಿ’ ಚಿತ್ರದ ‘ಕಾರ್ ಕಾರ್’ ಸಾಂಗ್ ಇಂದಿಗೂ ಎಲ್ಲರ ಬಾಯಲ್ಲಿ ಗುಣಗುವಂತಿದೆ. ‘ಅಮೆರಿಕಾ ಅಮೆರಿಕಾದಿಂದ’ ಆರಂಭವಾದ ಈ ಜೋಡಿಯ ಸೂಪರ್ ಹಿಟ್ ಪಯಣ ‘ಒಲವೇ ಜೀವನ ಲೆಕ್ಕಾಚಾರ’ದವರೆಗೂ ಬರೋಬ್ಬರಿ ಆರು ಚಿತ್ರಗಳಲ್ಲಿ ಮುಂದುವರಿದಿತ್ತು. ಇದೀಗ ‘ಅಮೆರಿಕಾ ಅಮೆರಿಕಾ 2’ ಈ ಯಶಸ್ವಿ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ 7ನೇ ಸಿನಿಮಾ ಎಂಬುದು ವಿಶೇಷ. ಚಿತ್ರದ ಮೊದಲ ಹಾಡು ‘ರನ್ ರನ್’ ಅನ್ನು ಸ್ವತಃ ನಾಗತಿಹಳ್ಳಿ ಚಂದ್ರಶೇಖರ್ ಬರೆದಿದ್ದು, ಶಂಕರ್ ಮಹದೇವನ್ ಹಾಗೂ ಶ್ರೇಯಾ ಘೋಷಲ್ ಧ್ವನಿಯಾಗಿದ್ದಾರೆ. ಖ್ಯಾತ ಲೇಖಕ ಜೋಗಿ ಅವರು ಈ ಸಾಂಗ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಆಲ್ ದಿ ಬೆಸ್ಟ್ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ನಾಗತಿಹಳ್ಳಿ ಹಾಗೂ ಮನೋಮೂರ್ತಿ ತಮ್ಮ ಸುದೀರ್ಘ ಸಂಗೀತ ಪಯಣದ ಮಧುರ ನೆನಪುಗಳನ್ನು ಮೆಲಕು ಹಾಕಿದರು.
ತಾರಾಗಣ, ಗ್ರಾಂಡ್ ರಿಲೀಸ್ ಹಾಗೂ ಕೆವಿಎನ್ ಸಂಸ್ಥೆಯ ಸಾಥ್…
ಹಾಡು ಬಿಡುಗಡೆಯ ಶುಭ ಸಂದರ್ಭದಲ್ಲೇ ಸಿನಿಮಾದ ಬಿಡುಗಡೆ ದಿನಾಂಕವನ್ನೂ ಸಹ ಅಧಿಕೃತವಾಗಿ ಘೋಷಣೆ ಮಾಡಲಾಯಿತು. ಮೈಸೂರು ಸ್ಯಾಂಡಲ್ ಸೋಪ್ ಸಂಸ್ಥೆಯ ಮುಖ್ಯಸ್ಥ ಪ್ರಶಾಂತ್ ಅವರು ಬಿಡುಗಡೆಯ ದಿನಾಂಕವನ್ನು ಅನಾವರಣಗೊಳಿಸಿದರು. ಚಿತ್ರದಲ್ಲಿ ನಟರಾದ ನಿರೂಪ್ ಭಂಡಾರಿ, ಪೃಥ್ವಿ ಅಂಬರ್ ಹಾಗೂ ನಟಿ ಶಾನ್ವಿ ಶ್ರೀವಾಸ್ತವ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ‘ಕ್ರೇಜಿಮೈಂಡ್ಸ್’ ಶ್ರೀ ಅವರ ಸಂಕಲನವಿದ್ದು, ‘ನಾಗತಿಹಳ್ಳಿ ಸಿನಿ ಕ್ರಿಯೇಷನ್ಸ್’ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಿದೆ. ಕನ್ನಡಿಗರಿರುವ ಜಾಗತಿಕ ಮಟ್ಟದ ಪ್ರಮುಖ ದೇಶಗಳಲ್ಲಿ ಈ ಸಿನಿಮಾ ಏಕಕಾಲಕ್ಕೆ ತೆರೆಕಾಣಲು ಸಜ್ಜಾಗಿದೆ. ಕರ್ನಾಟಕದಲ್ಲಿ ಹೆಸರಾಂತ ‘ಕೆ.ವಿ.ಎನ್’ ಸಂಸ್ಥೆಯು ಈ ಸಿನಿಮಾವನ್ನು ವಿತರಣೆ ಮಾಡುತ್ತಿರುವುದು ದೊಡ್ಡ ಮಟ್ಟದ ಹೈಪ್ ಸೃಷ್ಟಿಸಿದೆ.
ಗಣ್ಯರ ಉಪಸ್ಥಿತಿ ಹಾಗೂ ಸ್ಯಾಂಡಲ್ವುಡ್ನಲ್ಲಿ ಹೆಚ್ಚಿದ ನಿರೀಕ್ಷೆ…
ವಿಶಿಷ್ಟವಾಗಿ ನಡೆದ ಈ ಆಡಿಯೋ ಲಾಂಚ್ ಹಾಗೂ ಪತ್ರಿಕಾಗೋಷ್ಠಿಯಲ್ಲಿ ಚಿತ್ರರಂಗದ ಪ್ರಮುಖ ಗಣ್ಯರು ಭಾಗಿಯಾಗಿದ್ದರು. ಹಿರಿಯ ಪತ್ರಕರ್ತರಾದ ಸುಬ್ರಹ್ಮಣ್ಯ, ಸುನಯನ ಸುರೇಶ್ ಹಾಗೂ ಕಿಂಗ್ಸ್ ಕ್ಲಬ್ ಮಾಲೀಕ ರವಿಕುಮಾರ್ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಚಿತ್ರದ ನಾಯಕ ಪೃಥ್ವಿ ಅಂಬರ್ ಮತ್ತು ನಾಯಕಿ ಶಾನ್ವಿ ಶ್ರೀವಾಸ್ತವ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಸಂತಸ ಹಂಚಿಕೊಂಡರು. ‘ಅಮೆರಿಕಾ ಅಮೆರಿಕಾ’ ಸೀಕ್ವೆಲ್ ಆಗಿರುವುದರಿಂದ ಸಹಜವಾಗಿಯೇ ಪ್ರೇಕ್ಷಕರಲ್ಲಿ ಮತ್ತು ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮನೆಮಾಡಿದೆ. ಮನೋಮೂರ್ತಿ ಅವರ ಟ್ಯೂನ್ ಹಾಗೂ ನಾಗತಿಹಳ್ಳಿ ಅವರ ಸಾಹಿತ್ಯ ಮತ್ತೆ ಮ್ಯಾಜಿಕ್ ಮಾಡಲಿದೆ ಎಂಬ ನಂಬಿಕೆ ಸಿನಿರಸಿಕರದ್ದು. ಒಟ್ಟಿನಲ್ಲಿ ‘ರನ್ ರನ್’ ಹಾಡಿನ ಬಿಡುಗಡೆಯೊಂದಿಗೆ ‘ಅಮೆರಿಕಾ ಅಮೆರಿಕಾ 2’ ಸಿನಿಮಾದ ಪ್ರಚಾರ ಕಾರ್ಯಕ್ಕೆ ಗ್ರ್ಯಾಂಡ್ ಚಾಲನೆ ಸಿಕ್ಕಿದೆ.




