DK SHIVAKUMAR: ಅಮಾವಾಸ್ಯೆ ಮುಗಿತಿದ್ದಂಗೆ ಖಾತೆ ಹಂಚಿಕೆ – ಯಾರಿಗೆ ಯಾವ ಖಾತಾ ಗೊತ್ತಾ..?

ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ನೂತನ ಸಚಿವ ಸಂಪುಟದ ಖಾತೆ ಹಂಚಿಕೆಯನ್ನು ಅಂತಿಮಗೊಳಿಸಿ ಹೈಕಮಾಂಡ್ ಅಂತಿಮ ಪಟ್ಟಿ ರವಾನೆ ಮಾಡಿದೆ. ಹೈಕಮಾಂಡ್ ನಾಯಕರೊಂದಿಗೆ ನಡೆದ ಸುದೀರ್ಘ ಸಮಾಲೋಚನೆಯ ನಂತರ ಈ ಪಟ್ಟಿ ಸಿದ್ಧಗೊಂಡಿದ್ದು, ಪ್ರಮುಖ ಅನುಭವಿ ನಾಯಕರಿಗೆ ಪ್ರಭಾವಿ ಇಲಾಖೆಗಳನ್ನು ವಹಿಸಲಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹಣಕಾಸು, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಹಾಗೂ ಗುಪ್ತಚರ ಇಲಾಖೆಗಳನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ. ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರಿಗೆ ಕಂದಾಯ ಮತ್ತು ಕ್ರೀಡಾ ಇಲಾಖೆಯ ಜವಾಬ್ದಾರಿ ನೀಡಲಾಗಿದೆ.

ಇನ್ನುಳಿದ ಪ್ರಮುಖ ಸಚಿವರು ಮತ್ತು ಅವರಿಗೆ ಹಂಚಿಕೆಯಾಗಿರುವ ಇಲಾಖೆಗಳ ವಿವರ ಹೀಗಿದೆ:

ಚಲುವರಾಯಸ್ವಾಮಿಗೆ ಕೃಷಿ, ರಿಜ್ವಾನ್ ಅರ್ಷದ್‌ಗೆ ಆಹಾರ ಮತ್ತು ನಾಗರಿಕ ಪೂರೈಕೆ, ಕೆ.ಎಚ್. ಮುನಿಯಪ್ಪ ಅವರಿಗೆ ಸಮಾಜ ಕಲ್ಯಾಣ, ಸಂತೋಷ್ ಲಾಡ್‌ಗೆ ಕಾರ್ಮಿಕ ಇಲಾಖೆ, ಕೆ.ಎಸ್. ಬಸವಂತಪ್ಪ ಅವರಿಗೆ ಮೀನುಗಾರಿಕೆ, ಬಂದರು ಮತ್ತು ಒಳನಾಡು, ಮಧು ಬಂಗಾರಪ್ಪ ಅವರಿಗೆ ಪ್ರಾಥಮಿಕ ಶಿಕ್ಷಣ, ರಾಯರೆಡ್ಡಿಗೆ ಉನ್ನತ ಶಿಕ್ಷಣ, ಜಮೀರ್ ಅಹ್ಮದ್ ಅವರಿಗೆ ಹೌಸಿಂಗ್ ಮತ್ತು ವಕ್ಫ್, ಲಕ್ಷ್ಮಣ ಸವದಿಗೆ ಸಹಕಾರಿ, ಅಜಯ್ ಸಿಂಗ್ ಅವರಿಗೆ ಅರಣ್ಯ, ಎಸ್.ಎಸ್. ಮಲ್ಲಿಕಾರ್ಜುನ ಅವರಿಗೆ ಗಣಿ, ಬಾಲಕೃಷ್ಣ ಅವರಿಗೆ ಸಣ್ಣ ನೀರಾವರಿ ಹಾಗೂ ಪುಟ್ಟರಂಗಶೆಟ್ಟಿಗೆ ಪಶು ಸಂಗೋಪನೆ ಇಲಾಖೆಯ ಹೊಣೆಗಾರಿಕೆಯನ್ನು ನೀಡಲಾಗಿದೆ. ಈ ಮೂಲಕ ಸಚಿವರಿಗೆ ಅವರವರ ಇಲಾಖೆಗಳ ಆಡಳಿತ ಜವಾಬ್ದಾರಿಯನ್ನು ವಹಿಸಲಾಗಿದೆ.

ಈ ಖಾತೆ ಹಂಚಿಕೆಯ ಈ ಪ್ರಕ್ರಿಯೆ ಕೇವಲ ಆಡಳಿತಾತ್ಮಕ ಹಂಚಿಕೆಯಾಗಿರದೆ, ಕಾಂಗ್ರೆಸ್ ಪಕ್ಷದ ಆಂತರಿಕ ರಾಜಕೀಯ ಸಮತೋಲನವನ್ನು ಕಾಯ್ದುಕೊಳ್ಳುವ ಒಂದು ದೊಡ್ಡ ಸವಾಲಾಗಿತ್ತು. ಪಕ್ಷದಲ್ಲಿರುವ ವಿವಿಧ ಬಣಗಳು, ಜಾತಿಯ ಪ್ರಾತಿನಿಧ್ಯ ಮತ್ತು ಪ್ರಾದೇಶಿಕ ಹಿತಾಸಕ್ತಿಗಳನ್ನು ಸರಿದೂಗಿಸುವುದು ಹೈಕಮಾಂಡ್‌ಗೆ ಸುಲಭದ ಹಾದಿಯಾಗಿರಲಿಲ್ಲ. ಆದಾಗ್ಯೂ, ಪ್ರಭಾವಿ ನಾಯಕರಿಗೆ ಸೂಕ್ತ ಪ್ರಾಶಸ್ತ್ಯ ನೀಡುವ ಮೂಲಕ ಆರಂಭಿಕ ಹಂತದ ಭಿನ್ನಾಭಿಪ್ರಾಯಗಳನ್ನು ಶಮನಗೊಳಿಸಲು ಸರ್ವ ಪ್ರಯತ್ನ ಪಟ್ಟಿದೆ.