Photo Credits: @divyaspandana (Instagram)
ಮಹಿಳೆಯರ ಆರೋಗ್ಯ ಮತ್ತು ಶಾರೀರಿಕ ಬದಲಾವಣೆಗಳ ಕುರಿತು ನಟಿ ಹಾಗೂ ಮಾಜಿ ಸಂಸದೆ ರಮ್ಯಾ (ದಿವ್ಯ ಸ್ಪಂದನ) ಇತ್ತೀಚೆಗೆ ಅತ್ಯಂತ ಪ್ರಮುಖವಾದ ವಿಷಯವೊಂದನ್ನು ಹಂಚಿಕೊಂಡಿದ್ದಾರೆ. ತಮಗೆ 35 ವರ್ಷ ದಾಟಿದ ನಂತರ ದೇಹದಲ್ಲಿ ಹಲವಾರು ವಿಚಿತ್ರ ಬದಲಾವಣೆಗಳು ಕಾಣಿಸಿಕೊಂಡವು ಎಂದು ಅವರು ಮುಕ್ತವಾಗಿ ಹೇಳಿಕೊಂಡಿದ್ದಾರೆ. ಮಹಿಳೆಯರಲ್ಲಿ ಮೆನೋಪಾಸ್ ಹಾಗೂ ಪೆರಿ-ಮೆನೋಪಾಸ್ ಹಂತಗಳ ಬಗ್ಗೆ ಸಮಾಜದಲ್ಲಿ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಹೆಚ್ಚಿನ ಜಾಗೃತಿ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
“ನನ್ನ ದೇಹದಲ್ಲಿ ವ್ಯತ್ಯಾಸ ಅನಿಸ್ತಿತ್ತು”: ರಮ್ಯಾ ಅನುಭವಿಸಿದ ಆರೋಗ್ಯ ಸಮಸ್ಯೆಗಳು…
35 ವರ್ಷ ದಾಟಿದ ನಂತರ ತಮ್ಮ ದೇಹದ ಶಕ್ತಿ ಕಡಿಮೆಯಾಗಲು ತೊಡಗಿತು ಎಂದು ರಮ್ಯಾ ತಿಳಿಸಿದ್ದಾರೆ. ರಾತ್ರಿ ವೇಳೆ ಸರಿಯಾಗಿ ನಿದ್ದೆ ಬಾರದೆ ಇರುವುದು ಹಾಗೂ ಋತುಚಕ್ರದಲ್ಲಿ ಏರುಪೇರುಗಳಾಗುವುದು ಕಂಡುಬಂದವು. ಆದರೆ ನಾನು ವೈದ್ಯರನ್ನು ಸಂಪರ್ಕಿಸಿದಾಗ ಅವರು ಇದನ್ನು ಸಾಮಾನ್ಯ ವಿಷಯವೆಂದು ನಿರ್ಲಕ್ಷಿಸಿದರು. ಕೇವಲ ವಿಟಮಿನ್ ಡಿ ಮತ್ತು ವಿಟಮಿನ್ ಬಿ12 ಕೊರತೆ ಇರಬಹುದು ಎಂದು ವೈದ್ಯರು ಸಲಹೆ ನೀಡುತ್ತಿದ್ದರು. ಆದರೆ ನನ್ನ ಶರೀರದಲ್ಲಿ ಏನೋ ದೊಡ್ಡ ಮಟ್ಟದ ಬದಲಾವಣೆ ಆಗುತ್ತಿದೆ ಎಂಬುದು ನನಗೆ ಸ್ಪಷ್ಟವಾಗಿ ಅರಿವಾಗುತ್ತಿತ್ತು. ಇದರ ಸತ್ಯಾಸತ್ಯತೆ ತಿಳಿಯಲು ನಾನು ವಿದೇಶಿ ವೈದ್ಯರನ್ನು ಸಂಪರ್ಕಿಸಿ ಹೆಚ್ಚಿನ ಸಂಶೋಧನೆ ಮಾಡಬೇಕಾಯಿತು.
ಮೆನೋಪಾಸ್ ಬಗ್ಗೆ ಅಧ್ಯಯನ ಕಮ್ಮಿ: ಸರ್ಕಾರಿ ಯೋಜನೆಗಳಿಗೂ ರಮ್ಯಾ ಪ್ರಶ್ನೆ…
ವೈದ್ಯಕೀಯ ಶಿಕ್ಷಣದಲ್ಲೂ ಕೂಡ ಮೆನೋಪಾಸ್ (ಋತುಬಂಧ) ಕುರಿತು ಹೆಚ್ಚಿನ ಅಧ್ಯಯನ ನಡೆಯದಿರುವುದು ನಿಜಕ್ಕೂ ಬೇಸರದ ಸಂಗತಿ. ನಮ್ಮ ದೇಶದಲ್ಲಿ ಸಾಮಾನ್ಯವಾಗಿ 40 ವರ್ಷ ದಾಟಿದ ನಂತರ ಮಹಿಳೆಯರ ಜೀವನ ಮುಗಿಯಿತು ಎಂಬಂತೆ ನೋಡಲಾಗುತ್ತದೆ. ಅಷ್ಟೇ ಅಲ್ಲದೆ ಸರ್ಕಾರಿ ಆರೋಗ್ಯ ಯೋಜನೆಗಳಲ್ಲೂ 16 ರಿಂದ 39 ವರ್ಷದ ಮಹಿಳೆಯರಿಗೆ ಮಾತ್ರ ಆದ್ಯತೆ ನೀಡಲಾಗುತ್ತಿದೆ. 39 ವರ್ಷ ದಾಟಿದ ನಂತರ ಮಹಿಳೆಯರ ಆರೋಗ್ಯದ ಬಗ್ಗೆ ಯಾರು ಕೂಡ ತಲೆಕೆಡಿಸಿಕೊಳ್ಳುವುದಿಲ್ಲ. ಮಹಿಳೆಯರ ಜೀವನದ ಈ ಪ್ರಮುಖ ಹಂತವು ಒಂದು ಕತ್ತಲೆಯ ಬಾವಿಯಂತೆ ನಿರ್ಲಕ್ಷಿಸಲ್ಪಡುತ್ತಿದೆ. ವಿದೇಶಗಳಲ್ಲಿ ಈ ಕುರಿತು ಇರುವ ಉತ್ತಮ ಆರೋಗ್ಯ ನೀತಿಗಳನ್ನು ನಮ್ಮ ದೇಶದಲ್ಲೂ ಜಾರಿಗೆ ತರಬೇಕಿದೆ.
35 ದಾಟಿದ ಪ್ರತಿಯೊಬ್ಬ ಮಹಿಳೆಗೂ ಬೇಕಿದೆ ಪೆರಿ-ಮೆನೋಪಾಸ್ ಜಾಗೃತಿ…
ಪೆರಿ-ಮೆನೋಪಾಸ್ ಎಂದರೆ ಮೆನೋಪಾಸ್ ತಲುಪುವ ಮುನ್ನ ಮಹಿಳೆಯರ ದೇಹದಲ್ಲಿ ಆಗುವ ಹಾರ್ಮೋನ್ ಬದಲಾವಣೆಗಳ ಹಂತವಾಗಿದೆ. ಈ ವಿಷಯದ ಬಗ್ಗೆ ಇಂದಿನ ಶೇಕಡಾ 90 ರಷ್ಟು ಮಹಿಳೆಯರಿಗೆ ಯಾವುದೇ ರೀತಿಯ ಸರಿಯಾದ ಮಾಹಿತಿ ಇಲ್ಲ. ತಮಗೆ ಆಗುತ್ತಿರುವ ದೈಹಿಕ ಮತ್ತು ಮಾನಸಿಕ ಕಿರಿಕಿರಿಯ ಹಿಂದಿನ ನೈಜ ಕಾರಣ ತಿಳಿಯದೆ ಮಹಿಳೆಯರು ನರಳುತ್ತಿದ್ದಾರೆ. ಇದಕ್ಕೆ ಸೂಕ್ತ ವೈದ್ಯಕೀಯ ಚಿಕಿತ್ಸೆಗಿಂತ ಹೆಚ್ಚಾಗಿ ಸರಿಯಾದ ತಿಳುವಳಿಕೆ ಹಾಗೂ ಜಾಗೃತಿ ಅತ್ಯಂತ ಅಗತ್ಯವಾಗಿದೆ. ಮಹಿಳೆಯರು ತಮ್ಮ ಆರೋಗ್ಯದ ವಿಚಾರದಲ್ಲಿ ಮುಕ್ತವಾಗಿ ಮಾತನಾಡಲು ಮುಂದೆ ಬರಬೇಕು ಎಂದು ರಮ್ಯಾ ಕರೆ ನೀಡಿದ್ದಾರೆ. ರಮ್ಯಾ ಅವರ ಈ ಧ್ವನಿ ಸದ್ಯ ದೇಶದಾದ್ಯಂತ ಲಕ್ಷಾಂತರ ಮಹಿಳೆಯರಿಗೆ ಹೊಸ ಭರವಸೆ ಹಾಗೂ ಅರಿವು ಮೂಡಿಸಿದೆ.




