ಕನ್ನಡ ಚಿತ್ರರಂಗದಲ್ಲಿ ಈ ವರ್ಷ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಂಡಿರುವ ‘ಕರಾವಳಿ’ ಸಿನಿಮಾ ಈಗ ಗಲ್ಫ್ ರಾಷ್ಟ್ರಗಳಿಗೆ ಕಾಲಿಡುತ್ತಿದೆ. ವಿದೇಶದಲ್ಲೂ ಈ ಸಿನಿಮಾಗೆ ಭಾರಿ ಬೇಡಿಕೆ ವ್ಯಕ್ತವಾಗಿದೆ.
ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವ ಈ ಚಿತ್ರವನ್ನು ಈಗಾಗಲೇ ಲಕ್ಷಾಂತರ ಪ್ರೇಕ್ಷಕರು ವೀಕ್ಷಿಸಿ ಮೆಚ್ಚಿಕೊಂಡಿದ್ದಾರೆ. ಈಗ ವಿದೇಶಿ ಕನ್ನಡಿಗರನ್ನು ರಂಜಿಸಲು ಚಿತ್ರತಂಡ ಸಜ್ಜಾಗಿದೆ.
ಇದೇ ಶುಕ್ರವಾರದಿಂದ ದುಬೈ ಹಾಗೂ ಅಬುದಾಬಿಯಲ್ಲಿ ಕರಾವಳಿ ಚಿತ್ರ ಬಿಡುಗಡೆಯಾಗಲಿದೆ. ಓವರ್‌ಸೀಸ್‌ನಲ್ಲಿ ಸಿನಿಮಾಗೆ ದೊಡ್ಡ ಮಟ್ಟದ ಕ್ರೇಜ್ ಸೃಷ್ಟಿಯಾಗಿದೆ.
ಕಂಬಳದ ರೋಮಾಂಚನಕಾರಿ ಕಥಾಹಂದರ…
ಗುರುದತ್ ಗಾಣಿಗ ನಿರ್ದೇಶನದ ಈ ಸಿನಿಮಾದಲ್ಲಿ ‘ಡೈನಾಮಿಕ್ ಪ್ರಿನ್ಸ್’ ಪ್ರಜ್ವಲ್ ದೇವರಾಜ್ ಹಾಗೂ ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ತುಳುನಾಡಿನ ಸಾಂಪ್ರದಾಯಿಕ ಕಂಬಳದ ಹಿನ್ನೆಲೆಯಲ್ಲಿ ಮೂಡಿಬಂದಿರುವ ಈ ಚಿತ್ರ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿ ಮಾಡಿದೆ.
ಸಿನಿಮಾದಲ್ಲಿರುವ ಸಾಹಸ ದೃಶ್ಯಗಳು, ಕರಾವಳಿಯ ಸಂಸ್ಕೃತಿ ಮತ್ತು ಅದ್ಭುತ ನಟನೆಗೆ ಸಿನಿಪ್ರಿಯರು ಫಿದಾ ಆಗಿದ್ದಾರೆ. ಎಲ್ಲಾ ವರ್ಗದ ಪ್ರೇಕ್ಷಕರು ಹಾಗೂ ಫ್ಯಾಮಿಲಿ ಆಡಿಯನ್ಸ್ ಚಿತ್ರಮಂದಿರಗಳತ್ತ ಹರಿದು ಬರುತ್ತಿದ್ದಾರೆ.
ಓವರ್‌ಸೀಸ್ ಹಕ್ಕು ಪಡೆದ ಪ್ರಖ್ಯಾತ ಸಂಸ್ಥೆ…
ಸೌತ್ ಇಂಡಿಯಾದ ಬಹುತೇಕ ಸೂಪರ್ ಹಿಟ್ ಸಿನಿಮಾಗಳನ್ನು ರಿಲೀಸ್ ಮಾಡಿರುವ ‘ಫಾರಾಸ್ ಸಿನಿಮಾಸ್’ ಸಂಸ್ಥೆಯು ‘ಕರಾವಳಿ’ ಚಿತ್ರದ ಓವರ್‌ಸೀಸ್ ರೈಟ್ಸ್ ಪಡೆದುಕೊಂಡಿದೆ. ಇದು ಕನ್ನಡ ಸಿನಿಮಾರಂಗಕ್ಕೆ ಸಿಕ್ಕ ದೊಡ್ಡ ಗೌರವವಾಗಿದೆ.
ಈ ಹಿಂದೆ ‘ಸರ್ವಂಮಯ’, ‘ಜನನಾಯಗನ್’, ‘ಬಾಲನ್’ ನಂತಹ ಬಿಗ್ ಹಿಟ್ ಸಿನಿಮಾಗಳನ್ನು ರಿಲೀಸ್ ಮಾಡಿದ ಅನುಭವ ಈ ಸಂಸ್ಥೆಗಿದೆ. ಈಗ ಕರಾವಳಿ ಸಿನಿಮಾವನ್ನು ಗಲ್ಫ್ ರಾಷ್ಟ್ರಗಳಲ್ಲಿ ಅತ್ಯಂತ ಅದ್ದೂರಿಯಾಗಿ ಬಿಡುಗಡೆ ಮಾಡುತ್ತಿದೆ.
ಬಾಕ್ಸ್ ಆಫೀಸ್‌ನಲ್ಲಿ 6 ಕೋಟಿಗೂ ಅಧಿಕ ಕಲೆಕ್ಷನ್…
ಜುಲೈ 24ರಂದು ರಾಜ್ಯಾದ್ಯಂತ 175ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ‘ಕರಾವಳಿ’ ತೆರೆಕಂಡಿತ್ತು. ಮೊದಲ ದಿನವೇ 1 ಕೋಟಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಗಾಂಧಿನಗರದಲ್ಲಿ ಧೂಳೆಬ್ಬಿಸಿತ್ತು.
ಕೇವಲ 6 ದಿನಗಳಲ್ಲಿ ಈ ಸಿನಿಮಾವನ್ನು 5 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಇದುವರೆಗೆ ಚಿತ್ರ ಬರೋಬ್ಬರಿ 6 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಪ್ರಸ್ತುತ ಕನ್ನಡ ಚಿತ್ರರಂಗದ ಪರಿಸ್ಥಿತಿಯಲ್ಲಿ ಇದು ಅತ್ಯಂತ ದೊಡ್ಡ ಮೊತ್ತದ ಗಳಿಕೆಯಾಗಿದೆ. ಪ್ರೇಕ್ಷಕರ ಬೆಂಬಲ ನೋಡಿ ಈಗ ಸ್ಕ್ರೀನ್ ಹಾಗೂ ಶೋಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ.

ಪರಭಾಷೆಯಲ್ಲೂ ‘ಕರಾವಳಿ’ ರಿಲೀಸ್ ಸಾಧ್ಯತೆ…
ಕರ್ನಾಟಕದಲ್ಲಿ ಸಿಗುತ್ತಿರುವ ಅಭೂತಪೂರ್ವ ಯಶಸ್ಸನ್ನು ನೋಡಿ ನೆರೆ ರಾಜ್ಯಗಳಲ್ಲೂ ಈ ಸಿನಿಮಾಗೆ ಬೇಡಿಕೆ ಹೆಚ್ಚಾಗಿದೆ. ಮುಂದಿನ ವಾರ ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲೂ ಕರಾವಳಿ ಬಿಡುಗಡೆಯಾಗುವ ಸಾಧ್ಯತೆ ಇದೆ.
ಮೊದಲ ವಾರದಲ್ಲೇ ಗಲ್ಫ್ ಕಂಟ್ರಿಗೆ ಎಂಟ್ರಿ ಕೊಡುತ್ತಿರುವ ಈ ಸಿನಿಮಾ, ವಿದೇಶದಲ್ಲೂ ಹೊಸ ಬಾಕ್ಸ್ ಆಫೀಸ್ ದಾಖಲೆ ಬರೆಯುವ ಮುನ್ಸೂಚನೆ ನೀಡಿದೆ.



