ರಾಮನಗರ : ಬಮೂಲ್ ಅಧ್ಯಕ್ಷ, ಮಾಜಿ ಸಂಸದ ಡಿ.ಕೆ.ಸುರೇಶ್ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ (HD Kumaraswamy) ವಿರುದ್ಧ ತೀಕ್ಷ್ಣವಾಗಿ ಹರಿಹಾಯ್ದರು. ಸುಳ್ಳು ಹೇಳುವುದರಲ್ಲಿ ಹಾಗೂ ಅಸೂಯೆ ಪಡುವುದರಲ್ಲಿ ಕುಮಾರಸ್ವಾಮಿಗೆ ಪದ್ಮಶ್ರೀ ಕೊಡಿಸಬೇಕು ಎಂದು ವ್ಯಂಗ್ಯವಾಡಿದರು. ಮಾಗಡಿ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಗ್ಯಾರಂಟಿ ಯೋಜನೆಗಳ ಟೀಕೆಗೆ ತಿರುಗೇಟು ನೀಡಿದರು. ಅಭಿವೃದ್ಧಿ ಎಂದರೆ ಕೇವಲ ಕಟ್ಟಡ ಕಟ್ಟುವುದಲ್ಲ, ರೈತರಿಗೆ ಮತ್ತು ಹಿಂದುಳಿದ ವರ್ಗಗಳಿಗೆ ಶಕ್ತಿ ತುಂಬುವುದೇ ನಿಜವಾದ ಅಭಿವೃದ್ಧಿ ಎಂದರು. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರಕ್ಕೆ ಮೂರೂವರೆ ವರ್ಷ ತುಂಬಿದೆ. ಜಾತಿ ಹಾಗೂ ಪಕ್ಷದ ಭೇದವಿಲ್ಲದೆ ಪ್ರತಿ ಕುಟುಂಬಕ್ಕೆ ಐದು ಗ್ಯಾರಂಟಿಗಳ ಮೂಲಕ ಸುಮಾರು 76 ಸಾವಿರ ರೂಪಾಯಿ ತಲುಪಿಸಿದ್ದೇವೆ. ಸರ್ಕಾರ ದಿವಾಳಿಯಾಗಿಲ್ಲ, ಬದಲಿಗೆ ಪ್ರತಿಯೊಂದು ಮನೆಯಲ್ಲೂ ಜ್ಯೋತಿ ಬೆಳಗಿದೆ ಎಂದರು. ಹಿಂದೆ 15 ಲಕ್ಷ ರೂಪಾಯಿ ಕೊಡುತ್ತೇವೆ ಎಂದು ಹೇಳಿದವರು ಭರವಸೆ ಈಡೇರಿಸಿದರೇ ಎಂದು ಪ್ರಶ್ನಿಸಿದರು.
25 ವರ್ಷ ರಾಜಕೀಯ ಮಾಡಿ ಯಾವುದೇ ಅಭಿವೃದ್ಧಿ ಮಾಡಿಲ್ಲ !
ಈ ಹಿಂದೆ ಎಸ್.ಬಂಗಾರಪ್ಪ ಅವರು ರೈತರಿಗೆ ಉಚಿತ ವಿದ್ಯುತ್ ನೀಡಿದ್ದರು. ಈಗ ಬಡವರ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಕೆಪಿಎಸ್ ಶಾಲೆಗಳನ್ನು ನಿರ್ಮಿಸಲಾಗುತ್ತಿದೆ ಎಂದ ಸುರೇಶ್, ಸಚಿವ ಪುಟ್ಟರಂಗಶೆಟ್ಟಿ ಅವರ ಸಹಕಾರದಿಂದ ಹಾಲಿನ ದರ ಹೆಚ್ಚಿಸಿ ರೈತರಿಗೆ ಪ್ರತಿ ಲೀಟರ್ಗೆ 7 ರೂಪಾಯಿ ಹೆಚ್ಚುವರಿ ಹಣ ನೀಡಲಾಗುತ್ತಿದೆ ಎಂದು ತಿಳಿಸಿದರು. ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿದಾಗ ಸುಮ್ಮನಿದ್ದವರು ಈಗ ರೈತರಿಗೆ ಅನುಕೂಲ ಮಾಡಿಕೊಟ್ಟರೆ ಬೀದಿಗಿಳಿದು ಹೋರಾಟ ಮಾಡುತ್ತಾರೆ ಎಂದು ಕಿಡಿಕಾರಿದರು. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಇಲ್ಲಿ ಒಂದೇ ಒಂದು ಸೇತುವೆ ನಿರ್ಮಿಸಲಿಲ್ಲ, 25 ವರ್ಷ ರಾಜಕೀಯ ಮಾಡಿ ಯಾವುದೇ ಅಭಿವೃದ್ಧಿ ಮಾಡಿಲ್ಲ ಎಂದು ಆರೋಪಿಸಿದರು. ಮಂಡ್ಯದಲ್ಲಿ 10 ನಿಮಿಷದಲ್ಲಿ ಮೇಕೆದಾಟು ಯೋಜನೆಗೆ ಸಹಿ ಮಾಡಿಸುತ್ತೇನೆ ಎಂದಿದ್ದರು, ಈಗ ಯಾಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು. ಮೇಕೆದಾಟು ಯೋಜನೆಯಿಂದ ನಮ್ಮ ಜಿಲ್ಲೆಗಿಂತ ಮಂಡ್ಯ ಜಿಲ್ಲೆಗೆ ಹೆಚ್ಚು ಅನುಕೂಲವಿದೆ. ರಾಮನಗರ, ಚನ್ನಪಟ್ಟಣದವರ ಋಣ ಬೇಡ, ಕನಿಷ್ಠ ಮಂಡ್ಯದವರ ಋಣವನ್ನಾದರೂ ತೀರಿಸಲಿ ಎಂದರು. ಕೇಂದ್ರ ಸಚಿವರಾಗಿ ಒಂದೇ ಒಂದು ಕೈಗಾರಿಕೆ ತರಲಿಲ್ಲ. ಮಂಡ್ಯ ಅಥವಾ ಮದ್ದೂರು ಬಳಿ 5 ಸಾವಿರ ಎಕರೆ ಜಾಗ ಕೊಡಿಸುತ್ತೇನೆ, ಅವರು ಕೈಗಾರಿಕೆ ಸ್ಥಾಪಿಸಲಿ. ಜಾಗ ಕೊಡಿಸದಿದ್ದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸವಾಲು ಹಾಕಿದರು. ಹಳ್ಳಿಹಳ್ಳಿಗೆ ಹೋಗಿ ಕೆಲಸ ಮಾಡುವುದೇ ಅಭಿವೃದ್ಧಿ, ಟಿವಿ ಮುಂದೆ ಭಾಷಣ ಮಾಡಿ ಕೇವಲ ಡವ್ ಮಾಡಿಕೊಂಡು ಹೋಗುವುದಲ್ಲ ಎಂದು ಟೀಕಿಸಿದರು.
ಇದನ್ನೂ ಓದಿ : ಭಾರತ–ನೇಪಾಳ ಸ್ನೇಹಕ್ಕೆ ಹೊಸ ರೆಕ್ಕೆ: ‘ಸಂಬಂಧಗಳು ಮತ್ತಷ್ಟು ಎತ್ತರಕ್ಕೆ ಹಾರಲಿವೆ’ ಎಂದ ನಮೋ
ಈಗ ಗ್ಯಾರಂಟಿ ವಿರುದ್ಧ ಅಭಿವೃದ್ಧಿ ಎಂಬ ಚರ್ಚೆಯನ್ನು ರಾಮನಗರದ ನೆಲದಲ್ಲಿ ಮತ್ತೆ ಮುನ್ನೆಲೆಗೆ ತಂದಿದೆ. ಮೇಕೆದಾಟು ಮತ್ತು ಕೈಗಾರಿಕೆ ವಿಚಾರದಲ್ಲಿ ಡಿಕೆ ಸುರೇಶ್ ಹಾಕಿದ ಸವಾಲು ಕುಮಾರಸ್ವಾಮಿ ಅವರ ಕೇಂದ್ರ ಸಚಿವ ಸ್ಥಾನದ ಕಾರ್ಯ ವೈಖರಿ ಬಗ್ಗೆ ಪ್ರಶ್ನೆ ಎತ್ತಿದೆ. ರಾಮನಗರ, ಮಂಡ್ಯ ಭಾಗದಲ್ಲಿ ಎರಡೂ ಕುಟುಂಬಗಳ ನಡುವಿನ ಪ್ರಭಾವದ ಹೋರಾಟದ ಹಿನ್ನೆಲೆಯಲ್ಲಿ ಈ ಹೇಳಿಕೆಗಳು ಮಹತ್ವ ಪಡೆದಿವೆ. ಮುಂದಿನ ದಿನಗಳಲ್ಲಿ ಗ್ಯಾರಂಟಿಗಳ ಫಲಾನುಭವಿಗಳು ಮತ್ತು ಸ್ಥಳೀಯ ಅಭಿವೃದ್ಧಿ ಕಾಮಗಾರಿಗಳೇ ಮತದಾರರ ತೀರ್ಮಾನಕ್ಕೆ ಮಾನದಂಡವಾಗಲಿವೆ.




