ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿಗಳಾಗಿದ್ದ ಶಿಶಿರ್ ಶಾಸ್ತ್ರಿ ಮತ್ತು ಐಶ್ವರ್ಯಾ ಸಿಂಧೋಗಿ (Shishir Shastry-Aishwarya Sindhogi) ತಮ್ಮ ಆಟದಿಂದ ಜನಮನ ಗೆದ್ದಿದ್ದರು. ದೊಡ್ಮನೆಯಲ್ಲಿ ಒಳ್ಳೆಯ ಗೆಳೆಯರಾಗಿ ಪರಿಚಯವಾದ ಈ ಜೋಡಿ ಇದೀಗ ಬಾಳ ಸಂಗಾತಿಗಳಾಗಲಿದ್ದಾರೆ.
ಇಂದು (ನವೆಂಬರ್ 22) ಬೆಂಗಳೂರಿನಲ್ಲಿ ಈ ಜೋಡಿಯ ನಿಶ್ಚಿತಾರ್ಥ ನೆರವೇರಿದೆ. ಕುಟುಂಬಸ್ಥರು, ಆಪ್ತರು ಮತ್ತು ಕಿರುತೆರೆ ಸ್ನೇಹಿತರ ಸಮ್ಮುಖದಲ್ಲಿ ಇಬ್ಬರೂ ಉಂಗುರ ಬದಲಾಯಿಸಿಕೊಂಡಿದ್ದಾರೆ.
ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ನವಜೋಡಿಯ ಫೋಟೋ ಮತ್ತು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಇವರ ಪ್ರೇಮಕಥೆಯ ಕುತೂಹಲಕಾರಿ ವಿವರ ಇಲ್ಲಿದೆ.
ಸ್ನೇಹ ಪ್ರೀತಿಯಾಗಿ ಬದಲಾಗಿದ್ದು ಹೇಗೆ?
ಬಿಗ್ ಬಾಸ್ ಮನೆಯಲ್ಲಿ ಶುರುವಾದ ಪರಿಚಯ, ಶೋ ಮುಗಿದ ನಂತರವೂ ಮುಂದುವರಿಯಿತು. ಒಟ್ಟಿಗೆ ಕೆಲಸ ಮಾಡುವ ಮೂಲಕ ಇಬ್ಬರ ನಡುವೆ ಗಾಢವಾದ ಸ್ನೇಹ ಬೆಳೆಯಿತು.
ಬಳಿಕ ಆ ಸ್ನೇಹ ಪ್ರೀತಿಯಾಗಿ ತಿರುಗಿ ಈಗ ದಾಂಪತ್ಯದ ಹೊಸ್ತಿಲಿಗೆ ತಲುಪಿದೆ. ನಿಶ್ಚಿತಾರ್ಥದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಶಿಶಿರ್ ತಮ್ಮ ಪ್ರೀತಿಯ ಪಯಣವನ್ನು ಹಂಚಿಕೊಂಡಿದ್ದಾರೆ.
ಕೆಲಸದ ಮೂಲಕ ಆದ ಪರಿಚಯ ಸ್ನೇಹವಾಗಿ, ಪರಸ್ಪರ ಗೌರವಕ್ಕೆ ದಾರಿ ಮಾಡಿತು ಎಂದು ಶಿಶಿರ್ ಹೇಳಿದ್ದಾರೆ. ಅಲ್ಲದೆ ಮೊದಲು ಪ್ರಪೋಸ್ ಮಾಡಿದ್ದು ಐಶ್ವರ್ಯಾ ಎಂಬ ಗುಟ್ಟನ್ನೂ ಅವರು ಬಿಚ್ಚಿಟ್ಟಿದ್ದಾರೆ.
ಶಿಶಿರ್ ಗುಣಗಳಿಗೆ ಮನಸೋತ ಐಶ್ವರ್ಯಾ
ಈ ಬಗ್ಗೆ ಐಶ್ವರ್ಯಾ ಸಿಂಧೋಗಿ ಕೂಡ ಸಂತಸ ಹಂಚಿಕೊಂಡಿದ್ದಾರೆ. ನಾವು ಮದುವೆಯಾಗುತ್ತೇವೆ ಎಂದು ಊಹಿಸಿರಲಿಲ್ಲ, ನಾವು ಯೋಚಿಸುವ ಮುನ್ನವೇ ಜನ ಆ ಬಗ್ಗೆ ಮಾತನಾಡುತ್ತಿದ್ದರು ಎಂದಿದ್ದಾರೆ.
ಆರಂಭದಲ್ಲಿ ಪ್ರೀತಿ ಇರಲಿಲ್ಲ, ಆದರೆ ಶಿಶಿರ್ ಅವರ ಮಾನವೀಯ ಗುಣಗಳ ಬಗ್ಗೆ ಗೌರವವಿತ್ತು. ತಮ್ಮ ಬಗ್ಗೆ ಅವರು ತೋರಿದ ಕಾಳಜಿಯೇ ತಮ್ಮನ್ನು ಗೆದ್ದಿತು ಎಂದು ಐಶ್ವರ್ಯಾ ಹೇಳಿದ್ದಾರೆ.
ನಿಶ್ಚಿತಾರ್ಥಕ್ಕೂ ಮುನ್ನ ಈ ಜೋಡಿ ಚಿತ್ರರಂಗದ ಗಣ್ಯರು ಹಾಗೂ ರಾಜಕೀಯ ನಾಯಕರನ್ನು ಭೇಟಿಯಾಗಿ ಆಹ್ವಾನ ಪತ್ರಿಕೆ ನೀಡಿತ್ತು.
Shishir Shastry-Aishwarya Sindhogi: ಟ್ರೋಲರ್‌ಗಳಿಗೆ ತಿರುಗೇಟು ನೀಡಿದ್ದ ‘ಐಶಿರ್’ ಜೋಡಿ
ಕೆಲವು ದಿನಗಳ ಹಿಂದೆ ಕ್ರಿಯೇಟಿವ್ ವಿಡಿಯೋ ಮೂಲಕ ನಿಶ್ಚಿತಾರ್ಥದ ಸುದ್ದಿಯನ್ನು ಈ ಜೋಡಿ ಅಧಿಕೃತವಾಗಿ ಪ್ರಕಟಿಸಿತ್ತು. ಈ ವೇಳೆ ಟ್ರೋಲರ್‌ಗಳಿಗೂ ಹಾಸ್ಯಭರಿತವಾಗಿ ಉತ್ತರ ನೀಡಿತ್ತು.
ಕೆಲವೇ ದಿನಗಳಲ್ಲಿ ಬ್ರೇಕಪ್ ಆಗುತ್ತದೆ ಎನ್ನುತ್ತಿದ್ದವರಿಗೆ ನಗುತ್ತಲೇ ತಿರುಗೇಟು ಕೊಟ್ಟಿದ್ದರು. ತಾವು ಅಣ್ಣ-ತಂಗಿ ಅಥವಾ ಬೆಸ್ಟ್ ಫ್ರೆಂಡ್ಸ್ ಅಲ್ಲ, ಬದಲಿಗೆ ಜೀವನದ ಪಯಣವನ್ನು ಒಟ್ಟಿಗೆ ಆರಂಭಿಸುತ್ತಿದ್ದೇವೆ ಎಂದಿದ್ದರು.
ಅಭಿಮಾನಿಗಳು ಪ್ರೀತಿಯಿಂದ ಕರೆಯುತ್ತಿದ್ದ ‘ಐಶಿರ್’ ಇನ್ನು ಕೇವಲ ಹ್ಯಾಶ್ಟ್ಯಾಗ್ ಆಗಿ ಉಳಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಇದೀಗ ಬಿಗ್ ಬಾಸ್ ಸಹಸ್ಪರ್ಧಿಗಳು, ಕಿರುತೆರೆ ಹಾಗೂ ಚಂದನವನದ ಗಣ್ಯರು ಮತ್ತು ಅಭಿಮಾನಿಗಳು ನವಜೋಡಿಗೆ ಶುಭ ಹಾರೈಸಿದ್ದಾರೆ.




