☔ Weather
Bengaluru: ☁️ 21°C | AQI 60
Mysore: ☁️ 22°C | AQI 62
Mangalore: ☁️ 26°C | AQI 70
Bengaluru: ☁️ 21°C | AQI 60

DK SHIVAKUMAR: ಮೋದಿ ಭೇಟಿಗೆ ಸಮಯ ಕೋರಿದ ಡಿಕೆಶಿ – ಕೇಂದ್ರದ ಮುಂದೆ ಬರ ಪರಿಹಾರ ಸೇರಿ ಹಲವು ಪ್ರಸ್ತಾವನೆ

Image of DK Shivakumar with PM Modi

ನವದೆಹಲಿ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರು ಬರ ಪರಿಸ್ಥಿತಿ, ನೀರಾವರಿ ಯೋಜನೆಗಳ ವಿಳಂಬ ಮತ್ತು ಬೆಂಗಳೂರು ಮೂಲಸೌಕರ್ಯ ಸಮಸ್ಯೆಗಳ ಪರಿಹಾರಕ್ಕಾಗಿ ದೆಹಲಿಯಲ್ಲಿ ಕೇಂದ್ರ ಸರ್ಕಾರದ ಮೊರೆ ಹೋಗಿದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾದ ಅವರು ಬೆಂಗಳೂರಿನ ಇಬ್ಬಲೂರು ಫೈರಿಂಗ್ ರೇಂಜ್ ಬಳಿಯ ರಕ್ಷಣಾ ಇಲಾಖೆಯ 730 ಎಕರೆ ಜಾಗವನ್ನು ಲಾಲ್‌ಬಾಗ್ ಮತ್ತು ಕಬ್ಬನ್ ಪಾರ್ಕ್ ಮಾದರಿಯಲ್ಲಿ ದೊಡ್ಡ ಸಾರ್ವಜನಿಕ ಉದ್ಯಾನವನವಾಗಿ ಅಭಿವೃದ್ಧಿಪಡಿಸಲು ಅವಕಾಶ ನೀಡುವಂತೆ ಕೋರಿದ್ದಾರೆ. ಇದರೊಂದಿಗೆ ಮೇಕ್ರಿ ಸರ್ಕಲ್ ರಸ್ತೆ ವಿಸ್ತರಣೆ ಮತ್ತು ಸರ್ಜಾಪುರ ರಸ್ತೆ ಅಗಲೀಕರಣಕ್ಕೆ ರಕ್ಷಣಾ ಜಮೀನು ಬಿಟ್ಟುಕೊಡುವಂತೆ, ರಕ್ಷಣಾ ಪ್ರದೇಶದಲ್ಲಿರುವ ಕೊಳಗೇರಿ ಅಭಿವೃದ್ಧಿಗೆ ಸಹಕರಿಸುವಂತೆ ಮನವಿ ಮಾಡಿದ್ದಾರೆ. ಅವಳಿ ಸುರಂಗ ಯೋಜನೆಗೆ ಅಗತ್ಯವಿರುವ ಹೆಬ್ಬಾಳ ಡಿಫೆನ್ಸ್ ಫಾರ್ಮ್‌ನ 2.039 ಎಕರೆಗೆ ವಿಧಿಸಿರುವ ಲೈಸೆನ್ಸ್ ಶುಲ್ಕವನ್ನು ಮೌಲ್ಯದ ಶೇಕಡಾ 2ಕ್ಕೆ ಇಳಿಸುವಂತೆ ಮತ್ತು ವಿಮಾನ ನಿಲ್ದಾಣಗಳ ಸುತ್ತ ಕಟ್ಟಡ ನಿರ್ಮಾಣ ನಿಯಮ ಸಡಿಲಿಸುವಂತೆ ಕೇಳಿದ್ದಾರೆ.

ಇದನ್ನೂ ಓದಿ : ರೈತರ ವಿಚಾರದಲ್ಲಿ ಬಿಜೆಪಿ ಕಪಟ ನಾಟಕ – ಸರ್ವಪಕ್ಷ ಸಭೆಗೆ ಗೈರಾದವರಿಗೆ ಸಿಎಂ ತರಾಟೆ

ಇನ್ನು ಜಲಶಕ್ತಿ ಸಚಿವರ ಭೇಟಿ ವೇಳೆ ಮೇಕೆದಾಟು ಯೋಜನೆಯ ಡಿಪಿಆರ್ ಅನುಮೋದನೆ ಮತ್ತು ಇತರೆ ಅನುಮತಿಗಳನ್ನು ತ್ವರಿತವಾಗಿ ನೀಡುವಂತೆ ಒತ್ತಾಯಿಸಿದ್ದಾರೆ. ಕೃಷ್ಣಾ ಮೇಲ್ದಂಡೆ ಯೋಜನೆಯ ಅಧಿಸೂಚನೆಗಾಗಿ ಸುಪ್ರೀಂ ಕೋರ್ಟ್‌ನಲ್ಲಿ ಮಧ್ಯಂತರ ಅರ್ಜಿ ಸಲ್ಲಿಸುವ ವೇಳೆ ಕೇಂದ್ರದ ಬೆಂಬಲ ಬೇಕು ಎಂದು ತಿಳಿಸಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆಯನ್ನು ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಗೆ ಸೇರಿಸಿ ಅನುದಾನ ನೀಡುವಂತೆ, ಕಾವೇರಿ ಸೇರಿ ರಾಜ್ಯದ ನದಿ ನೀರಿನ ನ್ಯಾಯಯುತ ಪಾಲು ಬಳಕೆಗೆ ಕೇಂದ್ರ ಮಧ್ಯಸ್ಥಿಕೆ ವಹಿಸುವಂತೆ ಕೋರಿದ್ದಾರೆ. ರಾಜ್ಯದ ಸುಮಾರು 200 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಇದ್ದು ಮೊದಲ ಹಂತದಲ್ಲಿ 3700 ಕೋಟಿ ರೂಪಾಯಿ ಪರಿಹಾರ ಬಿಡುಗಡೆಗೆ ಪ್ರಧಾನಿ ಅವರ ಭೇಟಿಗೆ ಸಮಯ ಕೇಳಿದ್ದಾರೆ. ಕಸ್ತೂರಿ ರಂಗನ್ ವರದಿ ಜಾರಿಯಿಂದ ಪಶ್ಚಿಮಘಟ್ಟ ಜನರಿಗೆ ಆಗುವ ತೊಂದರೆ ಬಗ್ಗೆಯೂ ಪ್ರಧಾನಿಗೆ ವಿವರಿಸಲು ಉದ್ದೇಶಿಸಿದ್ದಾರೆ.

ಕೇಂದ್ರದ ಮೇಲೆ ಒತ್ತಡ ತಂತ್ರ !

ರಾಜ್ಯದಲ್ಲಿ ಬರಗಾಲದಿಂದ ತತ್ತರಿಸಿರುವ ರೈತ ಸಮುದಾಯಕ್ಕೆ ತಕ್ಷಣದ ಆರ್ಥಿಕ ನೆರವು ಅಗತ್ಯವಾಗಿದ್ದರೆ, ಬೆಂಗಳೂರಿನ ದಟ್ಟಣೆ ಮತ್ತು ಹಸಿರು ಕೊರತೆಗೆ ರಕ್ಷಣಾ ಇಲಾಖೆಯ ಜಮೀನು ಬಳಕೆಯೇ ಪ್ರಮುಖ ಅಡಚಣೆಯಾಗಿದೆ. ಮೇಕೆದಾಟು, ಭದ್ರಾ ಮತ್ತು ಕೃಷ್ಣಾ ಯೋಜನೆಗಳು ವರ್ಷಗಳಿಂದ ಕೇಂದ್ರದ ಅನುಮತಿ ಮತ್ತು ಅನುದಾನದ ವಿಳಂಬದಿಂದ ನನೆಗುದಿಗೆ ಬಿದ್ದಿವೆ. ಹೀಗಾಗಿ ಒಂದೇ ಸಲಕ್ಕೆ ನೀರಾವರಿ, ನಗರಾಭಿವೃದ್ಧಿ ಮತ್ತು ಪರಿಸರ ವಿಷಯಗಳನ್ನು ಒಟ್ಟಿಗೆ ಮುಂದಿಡುವ ಮೂಲಕ ರಾಜ್ಯ ಸರ್ಕಾರ ಕೇಂದ್ರದ ಮೇಲೆ ಒತ್ತಡ ಹೇರಲು ಮುಂದಾಗಿದೆ.