☔ Weather
Bengaluru: 🌤️ 26°C | AQI 58
Mysore: ☁️ 28°C | AQI 70
Mangalore: 🌤️ 29°C | AQI 97
Bengaluru: 🌤️ 26°C | AQI 58

RSS : ಬಾಂಗ್ಲಾ, ಫ್ರಾನ್ಸ್ ರೀತಿ ಭಾರತ ಅಸ್ಥಿರಗೊಳಿಸುವ ಯತ್ನ: ಮೋಹನ್ ಭಾಗವತ್ ಎಚ್ಚರಿಕೆ

RSS chief Mohan bhagwat

ಮಹಾರಾಷ್ಟ್ರ: ನಾಗಪುರದಲ್ಲಿ ವಿಜಯದಶಮಿ ಉತ್ಸವದಲ್ಲಿ ಆರ್‌ಎಸ್‌ಎಸ್ (RSS) ಮುಖ್ಯಸ್ಥ ಮೋಹನ್ ಭಾಗವತ್ ಅವರು ದೇಶದಲ್ಲಿ ಸರ್ಕಾರವನ್ನು ಅಸ್ಥಿರಗೊಳಿಸುವ ಪಿತೂರಿ ನಡೆಯುತ್ತಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಬಾಂಗ್ಲಾದೇಶ ಮತ್ತು ಫ್ರಾನ್ಸ್‌ನಲ್ಲಿ ಇತ್ತೀಚೆಗೆ ಕಂಡುಬಂದ ಆಡಳಿತ ಬದಲಾವಣೆಯ ಮಾದರಿಯಲ್ಲೇ ಭಾರತದಲ್ಲೂ ವ್ಯವಸ್ಥೆಯನ್ನು ಅಲ್ಲಾಡಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಭಾಗವತ್ ಹೇಳಿದ್ದಾರೆ. ದೇಶದ ಒಳಗೆ ಮತ್ತು ಹೊರಗೆ ಕೆಲವು ಶಕ್ತಿಗಳು ಉದ್ದೇಶಪೂರ್ವಕವಾಗಿ ಅಶಾಂತಿ ಹರಡಲು ಮತ್ತು ವಿವಾದಗಳನ್ನು ಸೃಷ್ಟಿಸಲು ಕೆಲಸ ಮಾಡುತ್ತಿವೆ. ಯಾವುದೇ ಸಮಸ್ಯೆಗಳಿದ್ದರೂ ಅದನ್ನು ಬಗೆಹರಿಸಲು ಪ್ರತಿಭಟನೆ ನಡೆಸುವ ಮಾರ್ಗ ಕಾನೂನುಬದ್ಧವಾಗಿ ಮತ್ತು ಶಾಂತಿಯುತವಾಗಿ ಇರಬೇಕು, ಹಿಂಸೆ ಮತ್ತು ಅರಾಜಕತೆಯ ದಾರಿಯನ್ನು ತುಳಿಯಬಾರದು ಎಂದು ಅವರು ಪ್ರತಿಪಾದಿಸಿದ್ದಾರೆ.

ಹಿಂಸಾತ್ಮಕ ಕ್ರಾಂತಿಯಿಂದ ಏನೂ ಸಾಧ್ಯವಿಲ್ಲ.. !

ಇತಿಹಾಸವನ್ನು ನೋಡಿದರೆ ಹಿಂಸಾತ್ಮಕ ಕ್ರಾಂತಿಗಳು ತಮ್ಮ ಗುರಿಯನ್ನು ಎಂದಿಗೂ ತಲುಪಿಲ್ಲ, ಅವು ದೇಶದಲ್ಲಿ ಅವ್ಯವಸ್ಥೆಯನ್ನು ಮಾತ್ರ ತಂದಿವೆ ಎಂದು ಅವರು ಹೇಳಿದ್ದಾರೆ. ಇಂತಹ ಅರಾಜಕ ಪರಿಸ್ಥಿತಿಯು ಆಂತರಿಕ ಭದ್ರತೆಗೆ ದೊಡ್ಡ ಸವಾಲಾಗುವುದಲ್ಲದೆ, ಹೊರಗಿನ ಶಕ್ತಿಗಳು ಭಾರತದ ಆಂತರಿಕ ವಿಚಾರಗಳಲ್ಲಿ ಮೂಗು ತೂರಿಸಲು ಅವಕಾಶ ನೀಡುತ್ತದೆ. ಈ ಹಿನ್ನೆಲೆಯಲ್ಲಿ ಯುವಕರು ಮತ್ತು ನಾಗರಿಕರು ಯಾವುದೇ ಪ್ರಚೋದನೆಗೆ ಬಲಿಯಾಗದೆ ಅತ್ಯಂತ ಜಾಗರೂಕರಾಗಿರಬೇಕು. ಸಮಾಜದಲ್ಲಿ ಭಿನ್ನಮತ ಸಹಜ, ಆದರೆ ಅದನ್ನು ಕಾನೂನಿನ ಚೌಕಟ್ಟಿನಲ್ಲಿ ವ್ಯಕ್ತಪಡಿಸಬೇಕು, ಸಮಾಜವನ್ನು ವಿಭಜಿಸುವ ಮತ್ತು ಭಾವನೆಗಳನ್ನು ಕೆರಳಿಸುವ ಪ್ರಯತ್ನಗಳು ಸಲ್ಲದು ಎಂದು ಭಾಗವತ್ ಕರೆ ನೀಡಿದ್ದಾರೆ.

ಇದನ್ನೂ ಓದಿ: ಮಹಿಳಾ ಸಚಿವ ಸ್ಥಾನಕ್ಕೆ ಲಾಬಿ ಜೋರು – ಡಿಕೆಶಿ Vs ಸಿದ್ದು ಬಣದಲ್ಲಿ ತೀವ್ರ ಪೈಪೋಟಿ

ಈ ಹೇಳಿಕೆಯ ಹಿಂದಿನ ವಿಶ್ಲೇಷಣೆ ಗಮನಿಸಿದರೆ, ಇದು ಕೇವಲ ಒಂದು ಎಚ್ಚರಿಕೆಯಲ್ಲ, ಜಾಗತಿಕ ರಾಜಕೀಯ ಬೆಳವಣಿಗೆಗಳ ಕುರಿತಾದ ಆರ್‌ಎಸ್‌ಎಸ್‌ನ ಮೌಲ್ಯಮಾಪನವಾಗಿದೆ. ಕಳೆದ ಎರಡು ವರ್ಷಗಳಲ್ಲಿ ಶ್ರೀಲಂಕಾ, ಬಾಂಗ್ಲಾದೇಶ, ನೇಪಾಳ ಮತ್ತು ಫ್ರಾನ್ಸ್‌ನಲ್ಲಿ ಜನಾಕ್ರೋಶದ ಹೆಸರಿನಲ್ಲಿ ನಡೆದ ಪ್ರತಿಭಟನೆಗಳು ಅಂತಿಮವಾಗಿ ಸರ್ಕಾರಗಳ ಪತನಕ್ಕೆ ಕಾರಣವಾದವು. ಈ ಬೆಳವಣಿಗೆಗಳ ಹಿಂದೆ ಕೇವಲ ಜನರ ಸ್ವಾಭಾವಿಕ ಆಕ್ರೋಶವಲ್ಲ, ಬದಲಾಗಿ ಸಂಘಟಿತ ಜಾಲಗಳು, ಸಾಮಾಜಿಕ ಜಾಲತಾಣಗಳ ಮೂಲಕ ತಪ್ಪು ಮಾಹಿತಿ ಹರಡುವಿಕೆ ಮತ್ತು ಬಾಹ್ಯ ಹಣಕಾಸಿನ ನೆರವು ಇದೆ ಎಂಬ ಅನುಮಾನ ವ್ಯಾಪಕವಾಗಿದೆ.

ಭಾರತದಂತಹ ವೈವಿಧ್ಯಮಯ ಮತ್ತು ದೊಡ್ಡ ಪ್ರಜಾಪ್ರಭುತ್ವದಲ್ಲಿ ಸಣ್ಣ ವಿವಾದವನ್ನು ದೊಡ್ಡದಾಗಿ ತೋರಿಸಿ, ಯುವಜನರಲ್ಲಿ ಆಕ್ರೋಶ ತುಂಬಿ, ಬೀದಿ ಹೋರಾಟವನ್ನು ಅರಾಜಕತೆಯತ್ತ ತಳ್ಳುವ ಪ್ರಯೋಗಗಳು ನಡೆಯಬಹುದು ಎಂಬುದು ಸಂಘದ ಆತಂಕ. ಭಾಗವತ್ ಅವರು ಪ್ರತಿಭಟನೆಯ ಹಕ್ಕನ್ನು ನಿರಾಕರಿಸುತ್ತಿಲ್ಲ, ಬದಲಾಗಿ ಅದರ ಸ್ವರೂಪದ ಬಗ್ಗೆ ಪ್ರಶ್ನೆ ಎತ್ತುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಅಸಮಾಧಾನ ವ್ಯಕ್ತಪಡಿಸುವುದು ಹಕ್ಕು, ಆದರೆ ಅದನ್ನು ಹಿಂಸೆಯಾಗಿ ಪರಿವರ್ತಿಸಿದಾಗ ರಾಜ್ಯದ ಸ್ಥಿರತೆಯೇ ಅಪಾಯಕ್ಕೆ ಸಿಲುಕುತ್ತದೆ. ಅಂತಹ ಸಂದರ್ಭದಲ್ಲಿ ಪ್ರಜಾಪ್ರಭುತ್ವದ ಸಂಸ್ಥೆಗಳು ದುರ್ಬಲಗೊಂಡು, ವಿದೇಶಿ ಶಕ್ತಿಗಳ ಹಸ್ತಕ್ಷೇಪಕ್ಕೆ ದಾರಿ ಮಾಡಿಕೊಡುತ್ತದೆ ಎಂಬುದು ಅವರ ವಾದದ ಕೇಂದ್ರಬಿಂದು.