ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿವಾದಾತ್ಮಕ ನಡೆ ಹಾಗೂ ಎಸ್‌ಐಆರ್ (SIR) ಪ್ರಕ್ರಿಯೆಗಳನ್ನು ರಾಹುಲ್ ಗಾಂಧಿ (Rahul Gandhi) ತೀವ್ರವಾಗಿ ಖಂಡಿಸಿದ್ದು, ವಿರೋಧ ಪಕ್ಷಗಳ ಒಕ್ಕೂಟವಾದ ‘ಇಂಡಿಯಾ’ ಬ್ಲಾಕ್ ಮುಖಂಡರು ರಾಜಧಾನಿಯಲ್ಲಿ ನಡೆಸುತ್ತಿರುವ ಉಗ್ರ ಪ್ರತಿಭಟನೆ ಹೊಸ ರೂಪ ಪಡೆದುಕೊಂಡಿದೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಈ ಆಂದೋಲನವನ್ನು ಮಹಾದೇವ ಶಿವನ ತಾಂಡವ ನೃತ್ಯಕ್ಕೆ ಹೋಲಿಸಿದ್ದು, ಈ ಬೃಹತ್ ಹೋರಾಟಕ್ಕೆ ಯಾವುದೇ ಪೂರ್ವಯೋಜಿತ ತಂತ್ರಗಾರಿಕೆಯ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಚುನಾವಣಾ ಆಯೋಗದ ನಿರ್ಧಾರಗಳ ಬಗ್ಗೆ ಸಾರ್ವಜನಿಕವಾಗಿ ಕೇಳಿಬರುತ್ತಿರುವ ಗಂಭೀರ ಆರೋಪಗಳು ಮತ್ತು ವಿರೋಧ ಪಕ್ಷಗಳ ನಿರಂತರ ಆಕ್ರೋಶ ದೇಶದ ರಾಜಕೀಯ ವಲಯದಲ್ಲಿ ತೀವ್ರ ಅಲ್ಲೋಲಕಲ್ಲೋಲ ಸೃಷ್ಟಿಸಿದ್ದು, ಆಡಳಿತ ಪಕ್ಷದ ವಿರುದ್ಧದ ಸಮರವು ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ.
ಇದನ್ನೂ ಓದಿ: ದೆಹಲಿ ಪೊಲೀಸರಿಗೆ 24 ಗಂಟೆ ಡೆಡ್ ಲೈನ್ – ಸಿಜೆಪಿಯಿಂದ ವಾರ್ನಿಂಗ್ !
ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿ, ತಮ್ಮ ಹೋರಾಟದ ಸರಣಿಯನ್ನು ವಿವರಿಸುತ್ತಾ ಶಿವನ ಬಾರಾತ್ ಅಥವಾ ಮೆರವಣಿಗೆಯನ್ನು ಉದಾಹರಿಸಿದ್ದಾರೆ. ಶಿವನ ತಾಂಡವದಲ್ಲಿ ಯಾವುದೇ ನಿರ್ದಿಷ್ಟ ರೂಪುರೇಷೆಗಳು ಅಥವಾ ಪೂರ್ವಯೋಜನೆಗಳು ಇರುವುದಿಲ್ಲ ಎಂದಿರುವ ಅವರು, ಇಂದು ತಾವು ಸುಪ್ರೀಂ ಕೋರ್ಟ್ ಇಂದು ಕದ ತಟ್ಟುತ್ತಿದ್ದರೆ ನಾಳೆ ಮತ್ತೊಂದು ರೀತಿಯ ಹೆಜ್ಜೆ ಇಡಲಾಗುವುದು ಎಂದು ತಿಳಿಸಿದ್ದಾರೆ. ವಿರೋಧ ಪಕ್ಷಗಳು ಹಮ್ಮಿಕೊಳ್ಳುವ ಪ್ರತಿಭಟನೆಗಳು ಯಾವುದೇ ಕಟ್ಟುನಿಟ್ಟಾದ ಚೌಕಟ್ಟಿಗೆ ಸೀಮಿತವಾಗಿಲ್ಲ ಬದಲಿಗೆ ಇದೊಂದು ಸ್ವಾಭಾವಿಕ ಹಾಗೂ ನಿರಂತರ ಜನಪ್ರವಾಹವಾಗಿದ್ದು, ನ್ಯಾಯಯುತ ಹೋರಾಟದಲ್ಲಿ ಪಾಲ್ಗೊಳ್ಳಲು ಬಯಸುವ ಪ್ರತಿಯೊಬ್ಬ ನಾಗರಿಕನಿಗೂ ಮುಕ್ತ ಅವಕಾಶವಿದೆ ಎಂದು ಘೋಷಿಸಿದ್ದಾರೆ.
ಆಂತರಿಕ ಆಕ್ಷೇಪಣೆಗಳು & ಸಾರ್ವಜನಿಕ ಅಪನಂಬಿಕೆಗಳು !
ಅಲ್ಲದೆ, ಚುನಾವಣಾ ಆಯುಕ್ತರ ಕಾರ್ಯವೈಖರಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ಅವರು, ಈ ವಿವಾದದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾಂಸ್ಥಿಕ ಸ್ವಾಯತ್ತತೆ ಮತ್ತು ಪಾರದರ್ಶಕತೆ ಎಂಬುದು ಚುನಾವಣಾ ಆಯೋಗದಂತಹ ಸಂಸ್ಥೆಗಳ ಮೂಲಾಧಾರವಾಗಿರಬೇಕು. ಆದರೆ ಪ್ರಸ್ತುತ ವಿದ್ಯಮಾನಗಳಲ್ಲಿ ಚುನಾವಣಾ ಆಯೋಗದ ನಿರ್ಣಯಗಳ ವಿರುದ್ಧ ಆಂತರಿಕ ಆಕ್ಷೇಪಣೆಗಳು ಹಾಗೂ ಸಾರ್ವಜನಿಕ ಅಪನಂಬಿಕೆಗಳು ಭುಗಿಲೆದ್ದಿರುವುದು ದೇಶದ ಪ್ರಜಾಪ್ರಭುತ್ವದ ಆರೋಗ್ಯದ ದೃಷ್ಟಿಯಿಂದ ಗಂಭೀರ ಆತಂಕಕಾರಿ ಬೆಳವಣಿಗೆಯಾಗಿದೆ. ವಿರೋಧ ಪಕ್ಷಗಳು ಇದನ್ನು ಕೇವಲ ರಾಜಕೀಯ ವಿವಾದವನ್ನಾಗಿ ನೋಡದೆ, ಸಾಂವಿಧಾನಿಕ ಮೌಲ್ಯಗಳ ರಕ್ಷಣೆಗಾಗಿ ನಡೆಸುತ್ತಿರುವ ಅನಿವಾರ್ಯ ಧರ್ಮಯುದ್ಧದ ರೂಪದಲ್ಲಿ ಬಿಂಬಿಸುತ್ತಿವೆ. ಸರ್ಕಾರದ ಪ್ರಮುಖ ಆಡಳಿತಾತ್ಮಕ ತೀರ್ಮಾನಗಳ ಬಗ್ಗೆ ನೇರ ಪ್ರಶ್ನೆಗಳು ಎದುರಾಗುತ್ತಿರುವ ಈ ಸಂದರ್ಭದಲ್ಲಿ, ಆಡಳಿತ ಮತ್ತು ಪ್ರತಿಪಕ್ಷಗಳ ನಡುವಿನ ಸಂಘರ್ಷ ಮುಂಬರುವ ದಿನಗಳಲ್ಲಿ ರಾಷ್ಟ್ರ ರಾಜಕಾರಣದ ದಿಕ್ಕನ್ನೇ ಬದಲಿಸುವ ಸಾಧ್ಯತೆ ಬಾಗರ್ ಚರ್ಚೆ ಹುಟ್ಟುಹಾಕಿದೆ.




