☔ Weather
Bengaluru: ☀️ 19°C | AQI 88
Mysore: 🌤️ 20°C | AQI 88
Mangalore: ☀️ 24°C | AQI 132
Bengaluru: ☀️ 19°C | AQI 88
☔ Weather
Bengaluru: ☀️ 19°C | AQI 88
Mysore: 🌤️ 20°C | AQI 88
Mangalore: ☀️ 24°C | AQI 132
Bengaluru: ☀️ 19°C | AQI 88

STING : ಸ್ಟಿಂಗ್ ಆಪರೇಷನ್ ಹಿಂದೆ ರಾಜಕೀಯ ಸಂಚು – ಸರ್ಕಾರಕ್ಕೆ ಡ್ಯಾಮೇಜ್ : ಪ್ರಿಯಾಂಕ್ ಖರ್ಗೆ

Image of Priyank Kharge about Sting
ಸ್ಟಿಂಗ್ ಆಪರೇಷನ್ (Sting) ಪ್ರಕರಣದಿಂದ ಸರ್ಕಾರಕ್ಕೆ ಸಾಕಷ್ಟು ಹಾನಿಯಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಒಪ್ಪಿಕೊಂಡಿದ್ದಾರೆ.

ಮುಖ್ಯಾಂಶಗಳು

  • ಸ್ಟಿಂಗ್ ಪ್ರಕರಣ ಸರ್ಕಾರಕ್ಕೆ ಮುಜುಗರ
  • ಡ್ಯಾಮೇಜ್ ಒಪ್ಪಿಕೊಂಡ ಸಚಿವ ಪ್ರಿಯಾಂಕ್
ಬೆಂಗಳೂರು: ಸ್ಟಿಂಗ್ ಆಪರೇಷನ್ (Sting) ಪ್ರಕರಣದಿಂದ ಸರ್ಕಾರಕ್ಕೆ ಸಾಕಷ್ಟು ಹಾನಿಯಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಒಪ್ಪಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಈ ಪ್ರಕರಣದ ತನಿಖೆಯನ್ನು ಇನ್ನೊಂದು ವಾರದೊಳಗೆ ಪೂರ್ಣಗೊಳಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ಎಸ್ಐಟಿ ತನಿಖೆ ಬೇಡ ಎಂಬುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಹೇಳಿದ್ದಾರೆ ಎಂದ ಅವರು, ಪ್ರಸ್ತುತ ತನಿಖೆ ಸಂಪೂರ್ಣ ಪಾರದರ್ಶಕವಾಗಿ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಸ್ಟಿಂಗ್ ಮಾಡಿದವರು ಯಾರು, ಅದನ್ನು ಯಾಕೆ ಮಾಡಿದರು, ಎಲ್ಲಿ ಮಾಡಿದರು, ಅದಕ್ಕೆ ಪ್ರೋತ್ಸಾಹ ನೀಡಿದವರು ಯಾರು ಮತ್ತು ವಿಡಿಯೋ ಅಪ್ಲೋಡ್ ಮಾಡಿದವರು ಯಾರು ಎಂಬ ಎಲ್ಲಾ ವಿವರಗಳು ಶೀಘ್ರದಲ್ಲೇ ಬೆಳಕಿಗೆ ಬರಲಿವೆ ಎಂದು ಹೇಳಿದ್ದಾರೆ. ಈ ತನಿಖೆಯ ಹೊಣೆಯನ್ನು ಸಿದ್ದರಾಮಯ್ಯ ಅವರು ತಮಗೆ ವಹಿಸಿದ್ದಾರೆ ಎಂದ ಖರ್ಗೆ, ಸಿದ್ದರಾಮಯ್ಯ ಅವರ ಘನತೆಗಿಂತ ದೊಡ್ಡದಾದದ್ದು ಬೇರೇನೂ ಇಲ್ಲ ಎಂದು ಹೇಳಿದ್ದಾರೆ. ತಾವು ಮೊದಲೇ ಈ ಪ್ರಕರಣವನ್ನು ಕಟ್ಟುಕಥೆ ಮತ್ತು ಸುಳ್ಳು ಪ್ರಕರಣ ಎಂದು ಹೇಳಿದ್ದಾಗಿ ನೆನಪಿಸಿದ ಅವರು, ತಮ್ಮ ಹೇಳಿಕೆಗೆ ಪೂರಕವಾದ ಕೆಲವು ಮಾಹಿತಿಗಳು ತಮ್ಮ ಬಳಿ ಇವೆ ಎಂದೂ, ಅಗತ್ಯ ಬಿದ್ದರೆ ಪುರಾವೆಗಳನ್ನು ಒದಗಿಸುವುದಾಗಿ ಭರವಸೆ ನೀಡಿದ್ದಾರೆ. ಸ್ಟಿಂಗ್ ಹಿಂದೆ ಸೋಷ್ಟ ರಾಜಕೀಯ ಷಡ್ಯಂತ್ರ..!

ಈ ಸ್ಟಿಂಗ್ ಪ್ರಕರಣದ ಹಿಂದೆ ಸ್ಪಷ್ಟ ರಾಜಕೀಯ ಉದ್ದೇಶವಿದೆ ಎಂದು ಖರ್ಗೆ ಆರೋಪಿಸಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಕೆಟ್ಟ ಹೆಸರು ತರುವುದಕ್ಕಾಗಿಯೇ ಈ ಕಾರ್ಯಾಚರಣೆಯನ್ನು ನಡೆಸಲಾಗಿದೆ ಎಂದ ಅವರು, ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರ ಪ್ರತಿಷ್ಠೆಗೆ ಧಕ್ಕೆ ತರಲು ಪ್ರಯತ್ನ ನಡೆದಿದೆ ಎಂದು ಹೇಳಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಮತ್ತು ಕಿರಿಯ ಪತ್ರಕರ್ತರನ್ನು ವಿಚಾರಣೆಗೆ ಕರೆಸಲಾಗಿದೆ. ಅನುಮಾನಕ್ಕೆ ಒಳಗಾದವರು ಮತ್ತು ಪ್ರಕರಣಕ್ಕೆ ಸಂಬಂಧಿಸಿದ ಎಲ್ಲರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದ್ದು, ವಿಚಾರಣೆಯ ಸಂಪೂರ್ಣ ಪ್ರಕ್ರಿಯೆಯನ್ನು ವಿಡಿಯೋ ರೆಕಾರ್ಡಿಂಗ್ ಮಾಡಲಾಗಿದೆ. ಸಂಗ್ರಹಿಸಲಾದ ಸಾಕ್ಷ್ಯಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಅಲ್ಲಿನ ಪ್ರಕ್ರಿಯೆಗಳಿಗೆ ಸ್ವಲ್ಪ ಸಮಯ ಬೇಕಾಗುತ್ತದೆ ಎಂದು ಅವರು ವಿವರಿಸಿದ್ದಾರೆ. ಆರೋಪ ಮಾಡುತ್ತಿರುವವರು ತನಿಖೆಗೆ ಸಹಕರಿಸಬೇಕು ಎಂದು ಆಗ್ರಹಿಸಿದ ಖರ್ಗೆ, ನೋಟಿಸ್ ನೀಡಿದರೂ ಕೆಲವರು ವಿಚಾರಣೆಗೆ ಹಾಜರಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಚ್ಚಿಡಲು ಏನೂ ಇಲ್ಲದಿದ್ದರೆ ವಿಚಾರಣೆಯಿಂದ ಯಾಕೆ ದೂರ ಉಳಿಯಬೇಕು ಎಂದು ಪ್ರಶ್ನಿಸಿದ ಅವರು, ಸಂಬಂಧಪಟ್ಟ ವ್ಯಕ್ತಿಗಳಿಗೆ ಕುಮಾರಸ್ವಾಮಿ ಅವರು ರಕ್ಷಣೆ ನೀಡುತ್ತಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ : ಮೆಟಾ ಗ್ಲಾಸ್ ರಹಸ್ಯ ಬಿಚ್ಚಿಟ್ಟ ಸಿಎಂ ಡಿಕೆ – ಸ್ಟಿಂಗ್ ಪ್ರಕರಣದಲ್ಲಿ ಮತ್ತೆ ಸಂಚಲನ ಈ ಪ್ರಕರಣ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ವರ್ಚಸ್ಸು ಮತ್ತು ವಿರೋಧ ಪಕ್ಷಗಳ ರಾಜಕೀಯ ತಂತ್ರಗಳ ನಡುವಿನ ಹೋರಾಟವಾಗಿ ಬದಲಾಗಿದೆ. ಹೀಗಾಗಿ ಇದ್ರಿಂದ ಸರ್ಕಾರಕ್ಕೆ ಹಾನಿಯಾಗಿದೆ ಎಂದು ಸಚಿವರೇ ಒಪ್ಪಿಕೊಳ್ಳುತ್ತಿರುವುದು ಪ್ರಕರಣದ ಗಂಭೀರತೆಯನ್ನು ತೋರಿಸುತ್ತದೆ. ತನಿಖೆಯನ್ನು ತ್ವರಿತವಾಗಿ ಮುಗಿಸಿ ಸತ್ಯಾಂಶವನ್ನು ಜನರ ಮುಂದಿಡುವುದು ಸರ್ಕಾರದ ವಿಶ್ವಾಸಾರ್ಹತೆಗೆ ಅಗತ್ಯವಾಗಿದೆ. ಇಲ್ಲದಿದ್ದರೆ ಇದು ಮತ್ತೊಂದು ರಾಜಕೀಯ ಆರೋಪ ಪ್ರತ್ಯಾರೋಪದ ಪ್ರಕರಣವಾಗಿ ಮಾತ್ರ ಉಳಿದುಬಿಡುತ್ತದೆ. ತನಿಖೆ ಪಾರದರ್ಶಕವಾಗಿದೆ ಎಂದು ಹೇಳುವುದಕ್ಕಿಂತ, ಅದರ ಫಲಿತಾಂಶವೇ ಸರ್ಕಾರಕ್ಕೆ ಉತ್ತರ ನೀಡಬೇಕಾಗಿದೆ. ಆರೋಪಿಗಳ ಸಹಕಾರ ಮತ್ತು ವೈಜ್ಞಾನಿಕ ಸಾಕ್ಷ್ಯಗಳು ಈ ಪ್ರಕರಣದ ಭವಿಷ್ಯವನ್ನು ನಿರ್ಧರಿಸಲಿವೆ.