☔ Weather
Bengaluru: ☁️ 22°C | AQI 58
Mysore: ☁️ 24°C | AQI 62
Mangalore: ☁️ 28°C | AQI 81
Bengaluru: ☁️ 22°C | AQI 58

PRADEEP ESHWAR : ಚಿಕ್ಕಬಳ್ಳಾಪುರ ಕಾಂಗ್ರೆಸ್ ನಲ್ಲಿ ಬಹಿರಂಗ ಜಟಾಪಟಿ – 30 ನಾಯಕರಿಗೆ ಕೋಟಿ ಕೊಟ್ಟಿದ್ದೇನೆ ಎಂದ ಪ್ರದೀಪ್ ಈಶ್ವರ್

Image of Pradeep Eshwar

ಚಿಕ್ಕಬಳ್ಳಾಪುರ : ಕಾಂಗ್ರೆಸ್ ನಲ್ಲಿ ಆಂತರಿಕ ಕಲಹ ಬೀದಿಗೆ ಬಂದಿದೆ. ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಮತ್ತು ಸ್ಥಳೀಯ ನಾಯಕರ ನಡುವೆ ಬಹಳ ದಿನಗಳಿಂದ ನಡೆಯುತ್ತಿದ್ದ ಮುಸುಕಿನ ಗುದ್ದಾಟ ಈಗ ಬಹಿರಂಗವಾಗಿದೆ. ಹಲವು ಸ್ಥಳೀಯ ಮುಖಂಡರು ಮುಂದಿನ ಚುನಾವಣೆಯಲ್ಲಿ ಪ್ರದೀಪ್ ಈಶ್ವರ್ ಅವರಿಗೆ ಟಿಕೆಟ್ ನೀಡಬಾರದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಮಾಡಿದ್ದರು. ಶಾಸಕರು ಸಹ ಚಿಂತಾಮಣಿ ಶಾಸಕ ಎಂ.ಸಿ. ಸುಧಾಕರ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ವೇದಿಕೆಯಲ್ಲಿ ಮಾತನಾಡಿದ ಪ್ರದೀಪ್ ಈಶ್ವರ್, ತಾವು ಸುಮಾರು 30 ನಾಯಕರಿಗೆ ಕೋಟಿ ಕೋಟಿ ಹಣ ಕೊಟ್ಟು ಸುಸ್ತಾಗಿದ್ದೇನೆ, ಪಕ್ಷಕ್ಕಾಗಿ ಕೇಳಿದರೆ ಕೊಡುತ್ತೇನೆ ಆದರೆ ವೈಯಕ್ತಿಕ ಕಷ್ಟಕ್ಕೆ ಕೇಳಬೇಡಿ, ಪಕ್ಕಕ್ಕೆ ಕರೆದು 10 ಲಕ್ಷ ಕೇಳುತ್ತಾರೆ, ಒಂದು ಕರೆ ಸ್ವೀಕರಿಸಿದರೆ 10 ಲಕ್ಷ ಕೊಡಬೇಕು ಎಂದು ಆರೋಪಿಸಿದ್ದಾರೆ. ಮಂಚೇನಹಳ್ಳಿ ಪ್ರಕಾಶ್ ಅವರ ಪ್ರವಾಸಕ್ಕೆ, ಶಿರಡಿ ಪ್ರವಾಸಕ್ಕೆ ಹೋಗಿ ಬರಲು ತಾವೇ ವಿಮಾನ ಟಿಕೆಟ್ ಕೊಟ್ಟಿದ್ದಾಗಿ ಹೇಳಿದ್ದಾರೆ.

ಪರ್ದೀದ್ ವಿರುದ್ಧ ಸ್ವಪಕ್ಷೀಯರೇ ಗರಂ !

ಈ ಹೇಳಿಕೆ ನಂತರ ವಿವಾದ ಮತ್ತಷ್ಟು ದೊಡ್ಡದಾಗಿದೆ. ಎಂ.ಸಿ. ಸುಧಾಕರ್ ಬೆಂಬಲಿಗರು ಪ್ರದೀಪ್ ಈಶ್ವರ್ ಅವರನ್ನು ಪಕ್ಷದಿಂದ ಅಮಾನತು ಮಾಡಬೇಕು ಮತ್ತು ಪೊಲೀಸ್ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದ್ದಾರೆ. ಚಿಂತಾಮಣಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮೀನಾರಾಯಣ ಅವರು ಮುಂದಿನ ಬಾರಿ ಪ್ರದೀಪ್ ಈಶ್ವರ್ ಗೆ ಟಿಕೆಟ್ ನೀಡಬಾರದು ಎಂದು ಆಗ್ರಹಿಸಿದ್ದಾರೆ. ಕ್ಷೇತ್ರದಲ್ಲಿ ಜಾತಿ ಸಾಮರಸ್ಯವಿದೆ, ಪ್ರದೀಪ್ ಈಶ್ವರ್ ರಾಜಕೀಯ ಬೆಳವಣಿಗೆಯಲ್ಲಿ ಸುಧಾಕರ್ ಸಹಕಾರವಿದೆ ಎಂದು ಅವರು ಹೇಳಿದ್ದಾರೆ. ಇದಕ್ಕೂ ಮೊದಲು ಪ್ರದೀಪ್ ಈಶ್ವರ್ ಅವರು ಸುಧಾಕರ್ ಅವರ ಆಸ್ತಿ ವಿವರವನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸುವುದಾಗಿ ಹೇಳಿದ್ದರು. ಇಬ್ಬರ ಜಗಳ ಹಿರಿಯ ನಾಯಕರ ಗಮನಕ್ಕೆ ಹೋಗಿದ್ದು ಸಂಧಾನದ ಸಾಧ್ಯತೆ ಬಗ್ಗೆ ಚರ್ಚೆ ನಡೆಯುತ್ತಿದೆ.

ಇದನ್ನೂ ಓದಿ : ಇದು ತುರ್ತು ಪರಿಸ್ಥಿತಿಗಿಂತಲೂ ಕೆಟ್ಟ ಸನ್ನಿವೇಶ – ಕೇಜ್ರಿವಾಲ್ ಕೆಂಡ

ಈ ಬೆಳವಣಿಗೆ ಕಾಂಗ್ರೆಸ್ ಪಕ್ಷದ ಒಳಗಿನ ಹಣದ ರಾಜಕಾರಣ ಮತ್ತು ಟಿಕೆಟ್ ಹಂಚಿಕೆಯ ಒತ್ತಡವನ್ನು ಬಯಲು ಮಾಡಿದೆ. ಒಬ್ಬ ಹಾಲಿ ಶಾಸಕನೇ ತಮ್ಮ ಪಕ್ಷದ ನಾಯಕರು ಹಣಕ್ಕಾಗಿ ಪೀಡಿಸುತ್ತಿದ್ದಾರೆ ಎಂದು ಬಹಿರಂಗವಾಗಿ ಹೇಳುವುದು ಪಕ್ಷದ ಶಿಸ್ತಿಗೆ ಧಕ್ಕೆ ತರುವ ವಿಚಾರ. ಚುನಾವಣಾ ಖರ್ಚು ಮತ್ತು ಸ್ಥಳೀಯ ನಾಯಕರನ್ನು ನಿಭಾಯಿಸುವ ವೆಚ್ಚ ಎಷ್ಟು ದೊಡ್ಡದಾಗಿದೆ ಎಂಬುದನ್ನು ಇದು ತೋರಿಸುತ್ತದೆ. ಜೊತೆಗೆ ಚಿಕ್ಕಬಳ್ಳಾಪುರದಂತಹ ಸೂಕ್ಷ್ಮ ಕ್ಷೇತ್ರದಲ್ಲಿ ಇಂತಹ ಬಹಿರಂಗ ಜಗಳ ಮತದಾರರಲ್ಲಿ ಗೊಂದಲ ಮೂಡಿಸಿ ವಿರೋಧ ಪಕ್ಷಗಳಿಗೆ ಲಾಭವಾಗುವ ಸಾಧ್ಯತೆ ಇದೆ. ಹೈಕಮಾಂಡ್ ತಕ್ಷಣ ಮಧ್ಯಪ್ರವೇಶಿಸಿ ಎರಡೂ ಬಣಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿದ್ದರೆ ಈ ಭಿನ್ನಮತ ಲೋಕಸಭೆ ಮತ್ತು ಮುಂದಿನ ವಿಧಾನಸಭೆ ಚುನಾವಣೆ ಮೇಲೆ ನೇರ ಪರಿಣಾಮ ಬೀರಬಹುದು.