☔ Weather
Bengaluru: ☁️ 22°C | AQI 58
Mysore: ☁️ 24°C | AQI 62
Mangalore: ☁️ 28°C | AQI 81
Bengaluru: ☁️ 22°C | AQI 58

PM MODI : ದೀನ್‌ದಯಾಳ್ ಜಯಂತಿಯಲ್ಲಿ ಭಜನ್ ಕ್ಲಬ್ಬಿಂಗ್: ಜೆನ್ ಝೀ ಜೊತೆ ಮೋದಿ ಭಕ್ತಿ ಸಂಭ್ರಮ

Image of PM Modi

ನವದೆಹಲಿ: ಜೈಜೈ ರಾಮ್, ಜೈಶ್ರೀರಾಮ್ ಘೋಷಗಳ ನಡುವೆ ಜೆನ್ ಝೀ ಯುವಕರೊಂದಿಗೆ (Gen Z) ಪ್ರಧಾನಿ ಮೋದಿ (PM Modi) ಭಜನೆ ಮಾಡಿದ ದೃಶ್ಯ ನವದೆಹಲಿಯ ದೀನ್‌ದಯಾಳ್ ಉಪಾಧ್ಯಾಯ ಉದ್ಯಾನವನದಲ್ಲಿ ಕಂಡುಬಂತು. ಭಾರತೀಯ ಜನಸಂಘದ ಹಿರಿಯ ಚಿಂತಕ ಪಂಡಿತ್ ದೀನ್‌ದಯಾಳ್ ಉಪಾಧ್ಯಾಯ ಅವರ ಜಯಂತಿ ನಿಮಿತ್ತ ಆಯೋಜಿಸಿದ್ದ ವಿಶೇಷ ಭಜನ್ ಕ್ಲಬ್ಬಿಂಗ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡು ಯುವ ಪೀಳಿಗೆಯ ಜೊತೆ ಬೆರೆತರು. ಕಾರ್ಯಕ್ರಮ ಆರಂಭಕ್ಕೂ ಮುನ್ನ ಮೋದಿ ಅವರು ಉಪಾಧ್ಯಾಯ ಅವರ ಪ್ರತಿಮೆಗೆ ಗೌರವ ಸಲ್ಲಿಸಿ, ಅವರು ಪ್ರತಿಪಾದಿಸಿದ ಅಂತ್ಯೋದಯ ತತ್ವವೇ ದೇಶದ ಕಲ್ಯಾಣ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಮಾರ್ಗದರ್ಶಕ ಬೆಳಕು ಎಂದು ಬಣ್ಣಿಸಿದರು.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಶ್ರದ್ಧಾಂಜಲಿ ಸಂದೇಶ ಹಂಚಿಕೊಂಡ ಪ್ರಧಾನಿ, ಸಮಾಜದ ಕಟ್ಟಕಡೆಯ ವ್ಯಕ್ತಿಯ ಏಳಿಗೆಯಲ್ಲೇ ದೇಶದ ನಿಜವಾದ ಅಭಿವೃದ್ಧಿ ಅಡಗಿದೆ ಎಂಬ ಅವರ ಚಿಂತನೆಯನ್ನು ಶ್ಲಾಘಿಸಿದರು. ಪ್ರತಿಯೊಬ್ಬ ಪ್ರಜೆಯೂ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಾಮಾಜಿಕ ಹೊಣೆಗಾರಿಕೆ ನಿರ್ವಹಿಸಬೇಕು ಎಂದು ಕರೆ ನೀಡಿದ್ದು ಜೊತೆಗೆ ಅದೃಷ್ಟದ ಮೇಲೆ ಅವಲಂಬಿತವಾಗದೆ ನಿರಂತರ ಪರಿಶ್ರಮ ಮತ್ತು ಧೈರ್ಯವೇ ಯಶಸ್ಸಿಗೆ ದಾರಿ ಎನ್ನುವ ಸಂಸ್ಕೃತ ಸುಭಾಷಿತವನ್ನು ಉಲ್ಲೇಖಿಸಿದರು.

ಪಂಡಿತ್ ದೀನ್‌ದಯಾಳ್ ಉಪಾಧ್ಯಾ :

1916ರ ಸೆಪ್ಟೆಂಬರ್ 25ರಂದು ಜನಿಸಿದ ಪಂಡಿತ್ ದೀನ್‌ದಯಾಳ್ ಉಪಾಧ್ಯಾಯ ಅವರು ದೇಶದ ಪ್ರಭಾವಿ ರಾಜಕೀಯ ತತ್ವಜ್ಞಾನಿ, ಅರ್ಥ ಚಿಂತಕ ಮತ್ತು ಜನಸಂಘದ ಪ್ರಮುಖ ರೂವಾರಿಯಾಗಿದ್ದರು. ಏಕಾತ್ಮ ಮಾನವತಾವಾದ ಎಂಬ ಸೈದ್ಧಾಂತಿಕ ನೆಲೆಯನ್ನು ಹಾಕಿದ ಅವರು, ಹಿಂದೂತ್ವ ಮತ್ತು ರಾಷ್ಟ್ರೀಯತೆಯ ವಿಚಾರಗಳನ್ನು ಜನರಿಗೆ ತಲುಪಿಸಲು 1940ರ ದಶಕದಲ್ಲಿ ರಾಷ್ಟ್ರ ಧರ್ಮ ಮಾಸಪತ್ರಿಕೆ, ಪಾಂಚಜನ್ಯ ಮತ್ತು ಸ್ವದೇಶ್ ದಿನಪತ್ರಿಕೆಗಳನ್ನು ಆರಂಭಿಸಿದರು.

ಇದನ್ನೂ ಓದಿ : ಮುಖ್ಯ ಚುನಾವಣಾಧಿಕಾರಿ ಜ್ಞಾನೇಶ್ ಕುಮಾರ್‌ಗೆ ಪದ್ಮಭೂಷಣ ನೀಡಬೇಕು : ಬಂಗಾಳ ಬಿಜೆಪಿ ಅಧ್ಯಕ್ಷ

ಕಾನ್ಪುರದ ಸನಾತನ ಧರ್ಮ ಕಾಲೇಜಿನಲ್ಲಿ ವಿದ್ಯಾಭ್ಯಾಸ ನಡೆಸುತ್ತಿರುವಾಗಲೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಪರ್ಕಕ್ಕೆ ಬಂದು ಮುಂದೆ ಜನಸಂಘದ ಸಂಘಟನಾ ಶಕ್ತಿಯಾಗಿ ರೂಪುಗೊಂಡರು. 1967ರ ಡಿಸೆಂಬರ್ ನಲ್ಲಿ ಜನಸಂಘದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಪಕ್ಷಕ್ಕೆ ವೈಚಾರಿಕ ಚೌಕಟ್ಟು ಮತ್ತು ಬಲಿಷ್ಠ ಕಾರ್ಯಕರ್ತರ ಬಳಗವನ್ನು ಕಟ್ಟಿಕೊಟ್ಟರು. 1968ರ ಫೆಬ್ರವರಿ 11ರಂದು ಮೊಘಲ್ ಸರಾಯ್ ರೈಲು ನಿಲ್ದಾಣದ ಸಮೀಪ ಅನುಮಾನಾಸ್ಪದ ಸ್ಥಿತಿಯಲ್ಲಿ ಮೃತದೇಹವಾಗಿ ಪತ್ತೆಯಾದ ಅವರ ನೆನಪಿಗಾಗಿ ಆ ನಿಲ್ದಾಣಕ್ಕೆ ದೀನ್‌ದಯಾಳ್ ಉಪಾಧ್ಯಾಯ ಜಂಕ್ಷನ್ ಎಂದು ಮರುನಾಮಕರಣ ಮಾಡಲಾಗಿದೆ. ಸಾಮಾಜಿಕ ನ್ಯಾಯ, ಸ್ವಾವಲಂಬನೆ ಮತ್ತು ಏಕಾತ್ಮ ಮಾನವತಾವಾದಕ್ಕೆ ಸಂಬಂಧಿಸಿದ ಅವರ ತತ್ವಗಳು ಇಂದಿಗೂ ಭಾರತೀಯ ಜನತಾ ಪಕ್ಷದ ಸೈದ್ಧಾಂತಿಕ ಅಡಿಪಾಯವಾಗಿ ಉಳಿದಿವೆ.

ಭಜನ್ ಕ್ಲಬ್ಬಿಂಗ್ ಎಂಬ ಪರಿಕಲ್ಪನೆಯೇ ಸಂಪ್ರದಾಯ ಮತ್ತು ಆಧುನಿಕತೆಯ ಸಮ್ಮಿಲನಕ್ಕೆ ಸಾಕ್ಷಿಯಾಗಿದೆ. ಭಜನೆ ಎಂದರೆ ಸಾಮಾನ್ಯವಾಗಿ ದೇವಾಲಯ, ಆಶ್ರಮಗಳಿಗೆ ಸೀಮಿತ ಎಂಬ ಭಾವನೆ ಇರುವಾಗ ಅದನ್ನು ಕ್ಲಬ್ಬಿಂಗ್ ಸ್ವರೂಪದಲ್ಲಿ ಯುವಕರ ಮಧ್ಯೆ ತೆಗೆದುಕೊಂಡು ಹೋಗುವುದು ಹೊಸ ಪ್ರಯೋಗ. ಜೆನ್ ಝೀ ಪೀಳಿಗೆ ಸಾಮಾಜಿಕ ಜಾಲತಾಣ, ಸಂಗೀತ, ಫ್ಯಾಷನ್ ಮತ್ತು ವೈಯಕ್ತಿಕ ಅಭಿವ್ಯಕ್ತಿಗೆ ಹೆಚ್ಚು ಒತ್ತು ನೀಡುವ ಸಮುದಾಯ. ಇಂತಹ ವರ್ಗವನ್ನು ಭಜನೆ ಮೂಲಕ ತಲುಪುವ ಪ್ರಯತ್ನ ರಾಜಕೀಯಕ್ಕಿಂತ ಸಾಂಸ್ಕೃತಿಕ ಸಂವಹನದ ದೃಷ್ಟಿಯಿಂದ ಮಹತ್ವ ಪಡೆಯುತ್ತದೆ. ಪ್ರಧಾನಿ ಮೋದಿ ಅವರು ಈ ವೇದಿಕೆಯನ್ನು ಬಳಸಿಕೊಂಡು ದೀನ್‌ದಯಾಳ್ ಅವರ ಅಂತ್ಯೋದಯ ಮತ್ತು ಏಕಾತ್ಮ ಮಾನವತಾವಾದದಂತಹ ಗಂಭೀರ ತತ್ವಗಳನ್ನು ಭಕ್ತಿ ಸಂಗೀತದ ಲಯದಲ್ಲಿ ಯುವ ಮನಸ್ಸಿಗೆ ತಲುಪಿಸುವ ಪ್ರಯತ್ನ ಮಾಡಿದ್ದಾರೆ.