ಬೆಂಗಳೂರು : ಉಪಮುಖ್ಯಮಂತ್ರಿ ಜಿ ಪರಮೇಶ್ವರ್ (Parameshwar) ರಾಜ್ಯದಲ್ಲಿ ಚರ್ಚೆಯಲ್ಲಿರುವ ಸ್ಟಿಂಗ್ ರಾಜಕಾರಣದ ಬಗ್ಗೆ ಪ್ರತಿಕ್ರಿಯಿಸಿದ್ದು, ಸಿದ್ದರಾಮಯ್ಯ ಅವರ ವಿರುದ್ಧದ ದೂರಿಗೆ ಸಂಬಂಧಿಸಿದಂತೆ ಯಾರನ್ನಾದರೂ ಬಂಧಿಸಲಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ತನಿಖೆಯ ಪ್ರಗತಿ ಮತ್ತು ನಮ್ಮ ಕ್ರಮಗಳ ಬಗ್ಗೆ ಬಹಿರಂಗವಾಗಿ ಹೇಳಲು ಆಗುವುದಿಲ್ಲ, ಅಧಿಕೃತವಾಗಿ ಏನಾದರೂ ತಿಳಿಸಬೇಕಾದರೆ ತಾವೇ ನೇರವಾಗಿ ಬಂದು ಮಾಹಿತಿ ನೀಡುವುದಾಗಿ ಸ್ಪಷ್ಟಪಡಿಸಿದರು. ವಿಡಿಯೋ ತೋರಿಸಿ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಿದ್ದಾರೆ ಎಂಬ ಎಚ್ ಡಿ ಕುಮಾರಸ್ವಾಮಿ ಅವರ ಆರೋಪಕ್ಕೆ ಉತ್ತರಿಸಲು ನಿರಾಕರಿಸಿ, ಅವರ ಎಲ್ಲಾ ಆರೋಪಗಳಿಗೂ ತಾವು ಉತ್ತರಿಸಬೇಕಿಲ್ಲ ಎಂದು ಹೇಳಿದರು.
ಯಾರ ಹಿನ್ನಲೆ ಏನು ಅಂತ ಗೊತ್ತು..!
ಸ್ಟಿಂಗ್ ಕುರಿತು ಆರ್ ಅಶೋಕ್ ಅಥವಾ ಬಿ ವೈ ವಿಜಯೇಂದ್ರ ದೂರು ನೀಡಲಿ, ರಾಜ್ಯದಲ್ಲಿ ಸಮರ್ಥ ಗೃಹ ಸಚಿವರಿದ್ದಾರೆ, ತನಿಖೆ ಮಾಡುತ್ತೇವೆ, ಆದರೆ ಯಾವ ಸ್ಟಿಂಗ್ ಎಂಬುದರ ಬಗ್ಗೆ ಸ್ಪಷ್ಟತೆ ಬೇಕು ಎಂದು ಹೇಳಿದರು. ಐಟಿ ಮತ್ತು ಇಡಿ ದಾಳಿಗಳ ನಂತರ ಈಗ ಸ್ಟಿಂಗ್ ಕಾರ್ಯಾಚರಣೆ ಮೂಲಕ ಡಿಕೆ ಶಿವಕುಮಾರ್ ಸರ್ಕಾರವನ್ನು ಗುರಿಯಾಗಿಸಲಾಗುತ್ತಿದೆ, ಇದರ ಹಿಂದೆ ಯಾರಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಆರೋಪಿಸಿದರು. ಕುಮಾರಸ್ವಾಮಿ ಅವರು ತಮ್ಮ ಸರ್ಕಾರ ಉಳಿಸಿಕೊಳ್ಳಲು ಯಡಿಯೂರಪ್ಪ ಅವರ ಸ್ಟಿಂಗ್ ಮಾಡಿಸಿದ್ದು ಆಡಿಯೋ ಸದನದಲ್ಲಿ ಚರ್ಚೆಯಾಗಿತ್ತು, ಯಾರ ಹಿನ್ನೆಲೆ ಏನು ಎಂಬುದು ಕರ್ನಾಟಕದ ಜನರಿಗೆ ತಿಳಿದಿದೆ ಎಂದರು.
ಇದನ್ನೂ ಓದಿ : ಸಿದ್ದು ವಿರುದ್ಧ ಷಡ್ಯಂತ್ರ ಆರೋಪ, ಕುಮಾರಸ್ವಾಮಿ ವಿರುದ್ಧ ಕೆರಳಿದ ಪ್ರಿಯಾಂಕ್
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳ ಬಗ್ಗೆ ಮಾತನಾಡಿದ ಅವರು, ಯಾವ ಸಂತ್ರಸ್ತರೂ ಮುಂದೆ ಬಂದು ದೂರು ನೀಡುತ್ತಿಲ್ಲ, ಸ್ಟಿಂಗ್ ಮಾಡಿದವರೂ ಬಹಿರಂಗವಾಗಿ ಮಾತನಾಡುತ್ತಿಲ್ಲ, ಕೇವಲ ಕುಮಾರಸ್ವಾಮಿ ಅವರ ಪರವಾಗಿ ಪ್ರಚಾರ ನಡೆಯುತ್ತಿದೆ ಎಂದು ಟೀಕಿಸಿದರು. ಫೋನ್ ಟ್ಯಾಪಿಂಗ್ ಆರೋಪವನ್ನು ತಳ್ಳಿಹಾಕಿದ ಅವರು, ಇದು ಕುಮಾರಸ್ವಾಮಿ ಅವರ ಕಾಲದ ಅಭ್ಯಾಸ, ತಮ್ಮ ಅವಧಿಯಲ್ಲಿ ಅಂತಹ ಬೆಳವಣಿಗೆಗಳಿಲ್ಲ, ಅವರ ಅಧಿಕಾರದ ಅವಧಿಯಲ್ಲಿ ನಡೆದ ಫೋನ್ ಕದ್ದಾಲಿಕೆಗೆ ಬೇಕಾದರೆ ದಾಖಲೆಗಳನ್ನು ಒದಗಿಸುವುದಾಗಿ ಸವಾಲು ಹಾಕಿದರು. ಕುಮಾರಸ್ವಾಮಿ ಅವರು ತಮ್ಮ ಹುದ್ದೆಯ ಗೌರವಕ್ಕೆ ತಕ್ಕಂತೆ ಮಾತನಾಡಬೇಕು ಎಂದು ಎಚ್ಚರಿಕೆ ನೀಡಿದರು.
ಇದರ ಜೊತೆಗೆ ಬರಗಾಲ ನಿರ್ವಹಣೆ ಕುರಿತು ಮಾತನಾಡಿ, ಉಳಿದ ತಾಲೂಕುಗಳಲ್ಲಿ ಶೀಘ್ರದಲ್ಲೇ ಗ್ರೌಂಡ್ ಟ್ರೂಥಿಂಗ್ ಪ್ರಕ್ರಿಯೆ ಆರಂಭಿಸಿ ಒಂದು ವಾರದೊಳಗೆ ಅಂತಿಮ ಮೆಮೊರೆಂಡಮ್ ಸಿದ್ಧಪಡಿಸಲಾಗುವುದು, ಇದರಿಂದ ಒಟ್ಟು ನಷ್ಟದ ಅಂದಾಜು ಲಭ್ಯವಾಗಲಿದೆ ಎಂದು ತಿಳಿಸಿದರು. ಎನ್ ಡಿ ಆರ್ ಎಫ್ ಮಾರ್ಗಸೂಚಿ ಅನ್ವಯ ಕೇಂದ್ರದಿಂದ ಎಷ್ಟು ಪರಿಹಾರ ಕೇಳಬೇಕು ಎಂಬ ಬಗ್ಗೆ ಚರ್ಚಿಸಿ ಮುಖ್ಯಮಂತ್ರಿ, ತಾವು ಮತ್ತು ಇತರೆ ಸಚಿವರು ದೆಹಲಿಗೆ ತೆರಳಿ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು. ಈ ಹಿಂದೆ 7 ಸಾವಿರ ಕೋಟಿ ಮತ್ತು ಕಳೆದ ವರ್ಷ 18 ಸಾವಿರ ಕೋಟಿ ಕೇಳಲಾಗಿತ್ತು, ಈ ಬಾರಿ 226 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದ್ದು ನಷ್ಟ ಹೆಚ್ಚಿದೆ, ಎನ್ ಡಿ ಆರ್ ಎಫ್ ನಿಯಮ ಸಡಿಲಿಸುವಂತೆ ಮುಖ್ಯಮಂತ್ರಿ ಮತ್ತು ತಾವು ಕೇಂದ್ರ ಕೃಷಿ ಸಚಿವರಿಗೆ ಪತ್ರ ಬರೆದಿದ್ದು, ಪರಿಶೀಲಿಸುವ ಭರವಸೆ ಸಿಕ್ಕಿದೆ ಎಂದರು. ಮೀಸಲಾತಿ ವಿಷಯದಲ್ಲಿ ಸರ್ವಪಕ್ಷ ನಿಯೋಗವನ್ನು ದೆಹಲಿಗೆ ಕರೆದೊಯ್ಯುವ ಪ್ರಸ್ತಾವ ನಾಳಿನ ಸಂಪುಟ ಸಭೆಯಲ್ಲಿ ಬರಲಿದೆ, ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಅಥವಾ ಸಂವಿಧಾನದ 9ನೇ ಶೆಡ್ಯೂಲ್ ಗೆ ಸೇರಿಸುವಂತೆ ಕೇಂದ್ರಕ್ಕೆ ಮನವಿ ಮಾಡುವ ಬಗ್ಗೆ ಸಂಪುಟ ನಿರ್ಧಾರದ ನಂತರ ಮುಂದಿನ ಹೆಜ್ಜೆ ಇಡಲಾಗುವುದು ಎಂದು ವಿವರಿಸಿದರು.




