☔ Weather
Bengaluru: ☁️ 21°C | AQI 60
Mysore: ☁️ 22°C | AQI 62
Mangalore: ☁️ 26°C | AQI 70
Bengaluru: ☁️ 21°C | AQI 60

SIR : ತಾರಕಕ್ಕೇರಿದ SIR ವಿವಾದ – ಸರ್ಕಾರದ ವಿರುದ್ಧ ರಾಜ್ಯಪಾಲರಿಗೆ NDA ದೂರು

Image of SIR allegations By NDA

ಬೆಂಗಳೂರು : ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜ್ಯ ಸರ್ಕಾರ ಅಕ್ರಮ ಹಸ್ತಕ್ಷೇಪ ನಡೆಸುತ್ತಿದೆ ಎಂದು ಆರೋಪಿಸಿ NDA ನಾಯಕರು ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದಾರೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ನಿಯೋಗ ಲೋಕಭವನಕ್ಕೆ ತೆರಳಿ ರಾಜ್ಯಪಾಲರನ್ನು ಭೇಟಿಯಾಯಿತು. ಈ ತಂಡದಲ್ಲಿ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್, ವಿಧಾನ ಪರಿಷತ್ ವಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ, ಎಂಎಲ್ ಸಿಗಳಾದ ಭೋಜೇಗೌಡ, ಸರವಣ, ಶಾಸಕರಾದ ಶ್ರೀವತ್ಸ, ವಿಠಲ್ ಹಲಗೇಕರ್, ಸಂಸದ ಮಲ್ಲೇಶ್ ಬಾಬು ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

ಸರ್ಕಾರ ಅನಾವಶ್ಯಕ ಮೂಗು ತೂರಿಸಬಾರದು !

ಮತದಾರರ ಹೆಸರು ಸೇರ್ಪಡೆ ಮತ್ತು ತೆಗೆಯುವಿಕೆಗೆ ಬಳಕೆಯಾಗುವ ಫಾರ್ಮ್ 7 ವಿಚಾರದಲ್ಲಿ ಸರ್ಕಾರ ನೇರವಾಗಿ ಪ್ರಭಾವ ಬೀರುತ್ತಿದೆ ಎಂದು ನಾಯಕರು ರಾಜ್ಯಪಾಲರಿಗೆ ವಿವರಿಸಿದರು. ಚುನಾವಣಾ ಪ್ರಕ್ರಿಯೆಯಂತಹ ಸೂಕ್ಷ್ಮ ವಿಷಯದಲ್ಲಿ ಸರ್ಕಾರ ಮೂಗು ತೂರಿಸಬಾರದು ಎಂದು ಮನವಿ ಮಾಡಿದರು. ಇದೇ ವೇಳೆ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಬಿಜೆಪಿ ಕಾರ್ಯಕರ್ತರ ವಿರುದ್ಧ ರಾಜಕೀಯ ಪ್ರೇರಿತ ಎಫ್ಐಆರ್ ದಾಖಲಿಸಲಾಗುತ್ತಿದೆ ಎಂದು ಆರೋಪಿಸಿದರು. ಇತ್ತೀಚೆಗೆ ಚುನಾವಣಾ ಆಯೋಗದ ಕಚೇರಿ ಮುಂದೆ ಮುಖ್ಯಮಂತ್ರಿ ಮತ್ತು ಸಂಪುಟ ಸಚಿವರು ಪ್ರತಿಭಟನೆ ನಡೆಸಿದ್ದನ್ನು ಪ್ರಸ್ತಾಪಿಸಿ, ಸ್ವತಂತ್ರ ಸಂವಿಧಾನಿಕ ಸಂಸ್ಥೆಯ ವಿರುದ್ಧ ಬೀದಿಗಿಳಿದ ಮುಖ್ಯಮಂತ್ರಿ ಹಾಗೂ ಸಚಿವರ ಮೇಲೆ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು. ಚುನಾವಣಾ ವ್ಯವಸ್ಥೆ ಸ್ವತಂತ್ರವಾಗಿ ಮತ್ತು ಪಾರದರ್ಶಕವಾಗಿ ನಡೆಯುವಂತೆ ನೋಡಿಕೊಳ್ಳಬೇಕು ಎಂಬುದು ನಿಯೋಗದ ಪ್ರಮುಖ ಆಗ್ರಹವಾಗಿದೆ.

ಇದನ್ನೂ ಓದಿ : ಸಿಇಸಿ ಜ್ಞಾನೇಶ್ ಕುಮಾರ್ ವಜಾಕ್ಕೆ ಆಗ್ರಹ – ರಸ್ತೆಗಿಳಿದ ಇಂಡಿಯಾ ಮೈತ್ರಿಕೂಟ, ಧರಣಿ ಕುಳಿತ ರಾಹುಲ್

ಫಾರ್ಮ್ 7 ದುರ್ಬಳಕೆಯಾದರೆ ಅರ್ಹ ಮತದಾರರ ಹೆಸರು ಕಡಿತಗೊಳ್ಳುವ ಅಪಾಯವಿದ್ದು, ಇದು ನೇರವಾಗಿ ಪ್ರಜಾಪ್ರಭುತ್ವದ ಮೇಲೆ ಪರಿಣಾಮ ಬೀರುತ್ತದೆ. ಸರ್ಕಾರವೇ ಚುನಾವಣಾ ಆಯೋಗದ ಕೆಲಸದಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎಂಬ ಆರೋಪ ಮತ್ತು ಮುಖ್ಯಮಂತ್ರಿ ಹಂತದ ನಾಯಕರು ಆಯೋಗದ ವಿರುದ್ಧ ಪ್ರತಿಭಟನೆ ನಡೆಸಿರುವುದು ಅಪರೂಪದ ಬೆಳವಣಿಗೆಯಾಗಿದೆ. ಇತ್ತ ಕಾರ್ಯಕರ್ತರ ಮೇಲೆ ಎಫ್ಐಆರ್ ದಾಖಲಿಸುವ ಮೂಲಕ ವಿರೋಧ ಪಕ್ಷವನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ ಎಂಬ ದೂರು ರಾಜ್ಯ ರಾಜಕೀಯದಲ್ಲಿ ಪ್ರತೀಕಾರ ರಾಜಕಾರಣದ ಅನುಮಾನವನ್ನು ಹೆಚ್ಚಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯಪಾಲರ ಮಧ್ಯಪ್ರವೇಶ ಮತ್ತು ಚುನಾವಣಾ ಆಯೋಗದ ಸ್ವಾಯತ್ತತೆಯನ್ನು ಕಾಪಾಡುವ ಅಗತ್ಯ ಈಗ ಹೆಚ್ಚಾಗಿದೆ ಎಂಬಂತೆ ವಿಪಕ್ಷಗಳು ಬಿಂಬಿಸುತ್ತಿವೆ .