☔ Weather
Bengaluru: ☁️ 22°C | AQI 58
Mysore: ☁️ 24°C | AQI 62
Mangalore: ☁️ 28°C | AQI 81
Bengaluru: ☁️ 22°C | AQI 58

HD KUMARASWAMY: ಸ್ಟಿಂಗ್ ಆರೋಪಿ ಬಂಧನಕ್ಕೆ ಕುಮಾರಸ್ವಾಮಿ 48 ಗಂಟೆಗಳ ಗಡುವು

Image of HD Kumaraswamy

ಬೆಂಗಳೂರು : ರಾಜ್ಯದಲ್ಲಿ ತೀವ್ರ ರಾಜಕೀಯ ಬೆಳವಣಿಗೆಗೆ ಕಾರಣವಾಗಿರುವ ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಅವರು ರಾಜ್ಯ ಸರ್ಕಾರಕ್ಕೆ ಎರಡು ದಿನಗಳ ಗಡುವು ವಿಧಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿಯನ್ನು 48 ಗಂಟೆಯೊಳಗೆ ಬಂಧಿಸದಿದ್ದರೆ ರಾಜ್ಯಾದ್ಯಂತ ತೀವ್ರ ಪ್ರತಿಭಟನೆ ನಡೆಸುವುದಾಗಿ ಅವರು ಎಚ್ಚರಿಸಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಸಾಮಾಜಿಕ ಜಾಲತಾಣ ವಿಭಾಗದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದನ್ನು ಖಂಡಿಸಿ ನಗರ ಪೊಲೀಸ್ ಆಯುಕ್ತರ ಕಚೇರಿ ಎದುರು ಮೆಟ್ಟಿಲ ಮೇಲೆ ಧರಣಿ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ ದೂರಿನ ಆಧಾರದ ಮೇಲೆ ಶಂಕರ್ ಮತ್ತು ಮೋಹನ್ ಎಂಬ ಇಬ್ಬರು ಜೆಡಿಎಸ್ ಐಟಿ ಸೆಲ್ ಸದಸ್ಯರನ್ನು ಪೊಲೀಸರು ಕರೆದೊಯ್ದಿದ್ದರು. ಯಾವುದೇ ಮುನ್ಸೂಚನೆ ನೀಡದೆ ಅವರ ಮೊಬೈಲ್ ಸ್ಥಗಿತಗೊಳಿಸಿ ಕುಟುಂಬಕ್ಕೆ ಮಾಹಿತಿ ನೀಡದೆ ರಾತ್ರಿ ವೇಳೆ ಶೆಡ್ ಒಂದರಲ್ಲಿ ಇರಿಸಲಾಗಿತ್ತು ಎಂದು ಕುಮಾರಸ್ವಾಮಿ ಆರೋಪಿಸಿದರು. ಗೃಹ ಸಚಿವರು ನನ್ನ ಬಂಧನದ ಬಗ್ಗೆ ಮಾತನಾಡಿದ್ದರು, ಧೈರ್ಯ ಇದ್ದರೆ ನನ್ನನ್ನು ಬಂಧಿಸಿ ಎಂದು ಸವಾಲು ಹಾಕಿ ಕಚೇರಿಗೆ ಆಗಮಿಸಿದರು. ತನಿಖೆ ಪಾರದರ್ಶಕವಾಗಿ ನಡೆಯಬೇಕು ಎಂದು ಒತ್ತಾಯಿಸಿದ ಅವರು ಸುಳ್ಳು ಪತ್ತೆ ಪರೀಕ್ಷೆ ಮತ್ತು ಬ್ರೈನ್ ಮ್ಯಾಪಿಂಗ್ ಗೆ ತಾವು ಸಿದ್ಧ ಎಂದು ಹೇಳಿದರು. ಪ್ರಕರಣವನ್ನು ನಿಷ್ಪಕ್ಷಪಾತವಾಗಿ ಮತ್ತು ಪ್ರಾಮಾಣಿಕವಾಗಿ ತನಿಖೆ ನಡೆಸುವುದಾಗಿ ಆಯುಕ್ತರು ಭರವಸೆ ನೀಡಿದ ನಂತರ ಧರಣಿಯನ್ನು ಹಿಂಪಡೆದುಕೊಂಡರು. ಪೊಲೀಸ್ ಇಲಾಖೆ ವಿರುದ್ಧ ಹೋರಾಟವಿಲ್ಲ, ಸರ್ಕಾರದ ದುರುಪಯೋಗದ ವಿರುದ್ಧ ಸಮರ ಎಂದು ಸ್ಪಷ್ಟಪಡಿಸಿ ಗಡುವು ಮುಗಿದ ಬಳಿಕ ಮುಂದಿನ ಹೋರಾಟದ ಸ್ವರೂಪ ತಿಳಿಸುವುದಾಗಿ ಹೇಳಿದರು.

ಆಡಳಿತ v/s ಪ್ರತಿಪಕ್ಷ ಸಮರ..?!

ಈ ಬೆಳವಣಿಗೆ ರಾಜ್ಯ ರಾಜಕಾರಣದಲ್ಲಿ ಅಧಿಕಾರ ಮತ್ತು ಪ್ರತಿಪಕ್ಷಗಳ ನಡುವಿನ ಸಂಘರ್ಷ ಮತ್ತಷ್ಟು ತೀವ್ರಗೊಳ್ಳುತ್ತಿರುವುದನ್ನು ಸೂಚಿಸುತ್ತದೆ. ಸ್ಟಿಂಗ್ ಆಪರೇಷನ್ ನಂತಹ ಸೂಕ್ಷ್ಮ ವಿಷಯದಲ್ಲಿ ಆರೋಪ-ಪ್ರತ್ಯಾರೋಪಗಳು ಸಾಮಾನ್ಯವಾಗಿದ್ದರೂ, ಸಾಮಾಜಿಕ ಜಾಲತಾಣ ಕಾರ್ಯಕರ್ತರ ಬಂಧನ ಮತ್ತು ಅವರನ್ನು ವಶಕ್ಕೆ ಪಡೆಯುವ ವಿಧಾನದ ಬಗ್ಗೆ ಪ್ರಶ್ನೆಗಳು ಎದ್ದಿವೆ. ನೋಟಿಸ್ ನೀಡದೆ ವಶಕ್ಕೆ ಪಡೆಯುವುದು ಮತ್ತು ಕುಟುಂಬಕ್ಕೆ ಮಾಹಿತಿ ರವಾನಿಸದಿರುವುದು ಕಾನೂನು ಪ್ರಕ್ರಿಯೆಯ ಪಾರದರ್ಶಕತೆಗೆ ಧಕ್ಕೆ ತರುತ್ತದೆ ಎಂಬ ವಾದ ಕೇಳಿಬರುತ್ತಿದೆ. ಮತ್ತೊಂದೆಡೆ, ಪ್ರತಿಪಕ್ಷದ ನಾಯಕರು ತಾವೇ ಖುದ್ದು ಪೊಲೀಸ್ ಕಚೇರಿ ಮೆಟ್ಟಿಲ ಮೇಲೆ ಧರಣಿ ಕುಳಿತುಕೊಳ್ಳುವುದು ರಾಜಕೀಯ ಸಂದೇಶ ರವಾನಿಸುವ ತಂತ್ರವಾಗಿಯೂ ಕಾಣುತ್ತಿದೆ. ಸರ್ಕಾರ ವಿರೋಧ ಪಕ್ಷಗಳನ್ನು ಗುರಿಯಾಗಿಸಿಕೊಂಡಿದೆ ಎಂಬ ಆರೋಪವನ್ನು ಕುಮಾರಸ್ವಾಮಿ ಪದೇ ಪದೇ ಮಾಡುತ್ತಿದ್ದು, ಈ ಪ್ರಕರಣವನ್ನು ಅದಕ್ಕೆ ಉದಾಹರಣೆಯಾಗಿ ಬಿಂಬಿಸುತ್ತಿದ್ದಾರೆ.

ಇದನ್ನೂ ಓದಿ : ತಾಕತ್ತಿದ್ದರೆ ನನ್ನನ್ನು ಬಂಧಿಸಿ ನೋಡಿ – ಕುಮಾರಸ್ವಾಮಿ ಅಬ್ಬರಕ್ಕೆ ಕೈಮುಗಿದ ಸಿಎಂ

ಈ ತನಿಖೆಗೆ ತಾವು ಯಾವುದೇ ವೈಜ್ಞಾನಿಕ ಪರೀಕ್ಷೆಗೆ ಸಿದ್ಧ ಎಂದು ಕುಮಾರಸ್ವಾಮಿ ಹೇಳುವ ಮೂಲಕ ತಮ್ಮ ಮೇಲಿನ ಆರೋಪವನ್ನು ತಳ್ಳಿಹಾಕುವ ಪ್ರಯತ್ನ ಮಾಡಿದ್ದಾರೆ. ಇದೇ ವೇಳೆ ಪೊಲೀಸ್ ಆಯುಕ್ತರು ನೀಡಿರುವ ಭರವಸೆ ತನಿಖೆಯ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳುವಲ್ಲಿ ನಿರ್ಣಾಯಕವಾಗಿದೆ. 48 ಗಂಟೆಗಳ ಗಡುವು ರಾಜಕೀಯ ಒತ್ತಡದ ಅಸ್ತ್ರವಾಗಿ ಬಳಕೆಯಾಗಿದ್ದು, ಒಂದು ವೇಳೆ ಆರೋಪಿ ಬಂಧನವಾಗದಿದ್ದರೆ ಜೆಡಿಎಸ್ ರಾಜ್ಯವ್ಯಾಪಿ ಹೋರಾಟಕ್ಕೆ ಮುಂದಾಗುವ ಸಾಧ್ಯತೆ ಇದೆ. ಇದು ಕಾನೂನು ಸುವ್ಯವಸ್ಥೆ ವಿಚಾರವನ್ನು ರಾಜಕೀಯ ಪ್ರತಿಷ್ಠೆಯ ಪ್ರಶ್ನೆಯಾಗಿ ಪರಿವರ್ತಿಸುವ ಅಪಾಯವನ್ನು ಹೊಂದಿದೆ.