ಬೆಂಗಳೂರು: ಚುನಾವಣಾ ಆಯೋಗವ ರಾಜ್ಯದಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಮುಗಿಸಿ ಅಂತಿಮ ಮತದಾರರ ಪಟ್ಟಿಯನ್ನು ತನ್ನ ಅಧಿಕೃತ ಜಾಲತಾಣದಲ್ಲಿ ಬಿಡುಗಡೆ ಮಾಡಿದೆ. ಈ ಪರಿಷ್ಕರಣೆಗೂ ಮುನ್ನ ರಾಜ್ಯದಲ್ಲಿ 5 ಕೋಟಿ 54 ಲಕ್ಷದ 32 ಸಾವಿರದ 314 ಮತದಾರರಿದ್ದರು. ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಈ ಸಂಖ್ಯೆ 4 ಕೋಟಿ 55 ಲಕ್ಷದ 11ಕ್ಕೆ ಇಳಿದಿದ್ದು, ಒಟ್ಟು 99 ಲಕ್ಷದ 32 ಸಾವಿರದ 303 ಹೆಸರುಗಳು ಪಟ್ಟಿಯಿಂದ ತೆಗೆದುಹಾಕಲ್ಪಟ್ಟಿವೆ. ಅಂತಿಮ ಪಟ್ಟಿಯಲ್ಲಿ 2 ಕೋಟಿ 25 ಲಕ್ಷದ 50 ಸಾವಿರದ 493 ಪುರುಷರು, 2 ಕೋಟಿ 29 ಲಕ್ಷದ 12 ಸಾವಿರದ 355 ಮಹಿಳೆಯರು, 2841 ತೃತೀಯ ಲಿಂಗಿಗಳು, 44 ಸಾವಿರದ 322 ಸೇವಾ ಮತದಾರರು, 3252 ಅನಿವಾಸಿ ಭಾರತೀಯ ಮತದಾರರು ಇದ್ದಾರೆ. ಇದರ ಜೊತೆಗೆ 5 ಲಕ್ಷದ 65 ಸಾವಿರದ 340 ವಿಶೇಷಚೇತನರು, 6 ಲಕ್ಷದ 83 ಸಾವಿರದ 364 ಯುವ ಮತದಾರರು ಹಾಗೂ 85 ವರ್ಷ ಮೇಲ್ಪಟ್ಟ 3 ಲಕ್ಷದ 92 ಸಾವಿರದ 134 ಹಿರಿಯ ನಾಗರಿಕರು ಸೇರಿದ್ದಾರೆ.
ನಿಮ್ಮ ಹೆಸರು ಕಡ್ಡಾಯವಾಗಿ ಪರಿಶೀಲಿಸಿ ..!
ಪ್ರತಿಯೊಬ್ಬ ಮತದಾರನೂ ತನ್ನ ಹೆಸರು ಅಂತಿಮ ಪಟ್ಟಿಯಲ್ಲಿದೆಯೇ ಎಂಬುದನ್ನು ಕಡ್ಡಾಯವಾಗಿ ಪರಿಶೀಲಿಸಿಕೊಳ್ಳಬೇಕು. ಇದಕ್ಕಾಗಿ voters.eci.gov.in ಜಾಲತಾಣಕ್ಕೆ ಭೇಟಿ ನೀಡಬಹುದು ಅಥವಾ ವೋಟರ್ ಹೆಲ್ಪ್‌ಲೈನ್ ಮೊಬೈಲ್ ಆ್ಯಪ್ ಬಳಸಬಹುದು. ಒಂದು ವೇಳೆ ಪಟ್ಟಿಯಲ್ಲಿ ಹೆಸರು ಕಾಣದಿದ್ದರೆ ಗಾಬರಿಯಾಗುವ ಅಗತ್ಯವಿಲ್ಲ. ಚುನಾವಣಾ ಆಯೋಗವು ನಿರಂತರ ನವೀಕರಣ ವ್ಯವಸ್ಥೆಯನ್ನು ಜಾರಿಯಲ್ಲಿ ಇಟ್ಟಿದೆ. ಅರ್ಹ ಮತದಾರರು ಆನ್‌ಲೈನ್‌ನಲ್ಲಿ ಫಾರಂ 6 ಭರ್ತಿ ಮಾಡಿ ಹೆಸರು ಸೇರಿಸಲು ಅರ್ಜಿ ಹಾಕಬಹುದು. ಇಲ್ಲದಿದ್ದರೆ ತಮ್ಮ ಬೂತ್ ಮಟ್ಟದ ಅಧಿಕಾರಿ ಅಥವಾ ತಾಲ್ಲೂಕು ಕಚೇರಿಗೆ ಹೋಗಿ ಫಾರಂ 6 ಪಡೆದು ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬಹುದು.
ಇದನ್ನೂ ಓದಿ : ಎಸ್‌ಐಆರ್ ವಿವಾದದ ನಡುವೆ ರಾಹುಲ್ ಗಾಂಧಿ ಶಿವನಾಮ ಸ್ಮರಣೆ, ತಾಂಡವದ ಎಚ್ಚರಿಕೆ
ಒಂದೇ ಬಾರಿಗೆ ಸುಮಾರು ಒಂದು ಕೋಟಿ ಹೆಸರುಗಳು ಕಡಿತವಾಗಿರುವುದು ರಾಜ್ಯದ ರಾಜಕೀಯ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಮೃತರು, ಸ್ಥಳಾಂತರಗೊಂಡವರು ಮತ್ತು ನಕಲಿ ಹೆಸರುಗಳು ತೆರವಾಗಿರುವುದು ಪಟ್ಟಿಯನ್ನು ಶುದ್ಧಗೊಳಿಸಿದೆ ಎಂಬುದು ಆಯೋಗದ ವಾದವಾದರೂ, ಅರ್ಹ ಮತದಾರರ ಹೆಸರುಗಳು ತಪ್ಪಾಗಿ ಕಡಿತವಾಗಿಲ್ಲವೇ ಎಂಬ ಆತಂಕವೂ ಜನರಲ್ಲಿದೆ. ಅದರಲ್ಲೂ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ಈ ಪರಿಷ್ಕರಣೆ ಮತದಾನದ ಹಕ್ಕಿನ ಮೇಲೆ ನೇರ ಪರಿಣಾಮ ಬೀರುತ್ತದೆ. ಹೀಗಾಗಿ ಪ್ರತಿಯೊಬ್ಬರೂ ತಮ್ಮ ಹಕ್ಕನ್ನು ಉಳಿಸಿಕೊಳ್ಳಲು ಈಗಲೇ ಹೆಸರು ಪರಿಶೀಲಿಸಿ, ತಪ್ಪಿದ್ದರೆ ತಕ್ಷಣ ಸರಿಪಡಿಸಿಕೊಳ್ಳುವುದು ಅತ್ಯಗತ್ಯವಾಗಿದೆ.




