☔ Weather
Bengaluru: ☁️ 22°C | AQI 58
Mysore: ☁️ 24°C | AQI 62
Mangalore: ☁️ 28°C | AQI 81
Bengaluru: ☁️ 22°C | AQI 58

DK SHIVAKUMAR: ಡಿಕೆಶಿ ವಿರುದ್ಧವೂ ನಡೆದಿತ್ತು ಸ್ಟಿಂಗ್ ಆಪರೇಷನ್ – 5 ಲಕ್ಷ ಲಂಚದ ಹಿಡನ್ ಕ್ಯಾಮೆರಾ ಟ್ರ್ಯಾಪ್..?

Image of CM DK Shivakumar

ಬೆಂಗಳೂರು : ಸ್ಟಿಂಗ್ ಆಪರೇಷನ್ ಕುರಿತ ಚರ್ಚೆ ಮತ್ತೆ ಬಿರುಸುಗೊಂಡಿರುವ ಸಂದರ್ಭದಲ್ಲೇ ಡಿ.ಕೆ. ಶಿವಕುಮಾರ್(DK Shivakumar) ಅವರಿಗೆ ಸಂಬಂಧಿಸಿದ ಹಳೆಯ ಪ್ರಕರಣವೊಂದು ಸಾಮಾಜಿಕ ಜಾಲತಾಣದಲ್ಲಿ ಮತ್ತೆ ವೈರಲ್ ಆಗುತ್ತಿದೆ. ಅವರು ಇಂಧನ ಸಚಿವರಾಗಿದ್ದಾಗ ಅವರನ್ನು ಗುರಿಯಾಗಿಸಿಕೊಂಡು ನಡೆಸಲು ಯತ್ನಿಸಿದ ಸ್ಟಿಂಗ್ ಕಾರ್ಯಾಚರಣೆಯೊಂದು ವಿಫಲವಾಗಿ, ಯತ್ನಕ್ಕೆ ಬಂದವರೇ ಸಿಕ್ಕಿಬಿದ್ದಿದ್ದ ಘಟನೆ ಇದು. ಯೋಜನೆಗೆ ಅನುಮತಿ ಕೊಡಿಸುವ ನೆಪದಲ್ಲಿ ಬಂದು ಲಂಚ ನೀಡಲು ಮುಂದಾದವರನ್ನು ಸಚಿವರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಹೈಡ್ರಾಮಾ ಅಂದು ನಡೆದಿತ್ತು.

ಪೊಲೀಸರಿಗೆ ರಹಸ್ಯ ಮಾಹಿತಿ ರವಾನೆ..!

ಈ ಘಟನೆ ನಡೆದಿದ್ದು ಸದಾಶಿವನಗರದ ನಿವಾಸದಲ್ಲಿ. ತಾವು ಖಾಸಗಿ ವಿದ್ಯುತ್ ಕಂಪನಿಯ ಪ್ರತಿನಿಧಿಗಳು ಎಂದು ಹೇಳಿಕೊಂಡು ಮಹಿಳೆ ಸೇರಿದಂತೆ ಇಬ್ಬರು ವ್ಯಕ್ತಿಗಳು ಸಚಿವರನ್ನು ಭೇಟಿಯಾಗಲು ಬಂದಿದ್ದರು. ಕೋಟ್ಯಂತರ ರೂಪಾಯಿ ಮೌಲ್ಯದ ವಿದ್ಯುತ್ ಯೋಜನೆಗಳಿಗೆ ಅನುಮೋದನೆ ಬೇಕು ಎಂಬ ಕಾರಣ ನೀಡಿ ಏಕಾಂತದಲ್ಲಿ ಮಾತನಾಡಲು ಸಮಯ ಕೇಳಿದ್ದರು. ಅವರ ನಡೆ-ನುಡಿಯ ಬಗ್ಗೆ ಅನುಮಾನಗೊಂಡಿದ್ದ ಡಿ.ಕೆ. ಶಿವಕುಮಾರ್ ಅವರು ಕೂಡಲೇ ತಮ್ಮ ಸಿಬ್ಬಂದಿ ಮತ್ತು ಸ್ಥಳೀಯ ಪೊಲೀಸರಿಗೆ ರಹಸ್ಯ ಮಾಹಿತಿ ರವಾನಿಸಿದ್ದರು. ನಿವಾಸದ ಸಿಸಿಟಿವಿ ಕ್ಯಾಮೆರಾಗಳನ್ನು ಸಕ್ರಿಯಗೊಳಿಸಿ ನಿಗಾ ಇಡಲಾಗಿತ್ತು.

ಈ ವೇಳೆ ಅವರು 5 ಲಕ್ಷ ರೂಪಾಯಿ ನಗದನ್ನು ಲಂಚವಾಗಿ ನೀಡಲು ಮುಂದಾದ ಕ್ಷಣದಲ್ಲೇ ಸಚಿವರು ಮತ್ತು ಸಿಬ್ಬಂದಿ ಇಬ್ಬರನ್ನೂ ರೆಡ್ ಹ್ಯಾಂಡ್ ಆಗಿ ಹಿಡಿದು ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದ್ದರು. ಪೊಲೀಸರ ಪ್ರಾಥಮಿಕ ವಿಚಾರಣೆಯಲ್ಲಿ ಅವರ ಉದ್ದೇಶ ಬಯಲಾಗಿತ್ತು. ಹಿಡನ್ ಕ್ಯಾಮೆರಾ ಬಳಸಿ ಸಚಿವರನ್ನು ಬಲೆಗೆ ಬೀಳಿಸಿ ಸ್ಟಿಂಗ್ ಮಾಡುವುದು ಅವರ ಯೋಜನೆಯಾಗಿತ್ತು. ಆದರೆ ಸಚಿವರ ಜಾಗರೂಕತೆಯಿಂದಾಗಿ ತಿರುಗುಬಾಣವಾಗಿ ಅವರ ಪ್ಲಾನ್ ಸಂಪೂರ್ಣ ವಿಫಲವಾಯಿತು. ಇದೀಗ ರಾಜ್ಯದಲ್ಲಿ ಮತ್ತೆ ಸ್ಟಿಂಗ್ ಮತ್ತು ಬ್ಲ್ಯಾಕ್ ಮೇಲ್ ಆರೋಪಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಈ ಹಳೆಯ ವಿಫಲ ಯತ್ನದ ಸುದ್ದಿ ಮತ್ತೆ ಚರ್ಚೆಗೆ ಬಂದಿದೆ.

ಇದನ್ನೂ ಓದಿ : ಸ್ಟಿಂಗ್ ಆಪರೇಷನ್ ರಾಜ್ಯ ರಾಜಕಾರಣಕ್ಕೆ ಅಂಟಿದ ಶಾಪ : ಎಂ ಬಿ ಪಾಟೀಲ್ ಕಿಡಿ

ಕರ್ನಾಟಕ ರಾಜಕಾರಣದಲ್ಲಿ ಸ್ಟಿಂಗ್ ಆಪರೇಷನ್ ಎಂಬುದು ಹೊಸ ಅಸ್ತ್ರವಲ್ಲ. ಹಲವು ಬಾರಿ ಅಧಿಕಾರ, ಹಣ ಮತ್ತು ಬ್ಲ್ಯಾಕ್ ಮೇಲ್ ಉದ್ದೇಶದಿಂದ ಇಂತಹ ಕಾರ್ಯಾಚರಣೆಗಳು ನಡೆದಿವೆ. ಕೆಲವು ಪ್ರಕರಣಗಳಲ್ಲಿ ನಿಜವಾದ ಭ್ರಷ್ಟಾಚಾರವನ್ನು ಬಯಲಿಗೆಳೆದ ಉದಾಹರಣೆಗಳಿದ್ದರೂ, ಹೆಚ್ಚಿನವು ವೈಯಕ್ತಿಕ ಪ್ರತಿಷ್ಠೆ ಹಾಳುಮಾಡುವ ಮತ್ತು ರಾಜಕೀಯ ಲಾಭ ಪಡೆಯುವ ಉದ್ದೇಶದಿಂದಲೇ ನಡೆದಿವೆ ಎಂಬ ಆರೋಪವಿದೆ. ಈ ಹಿನ್ನೆಲೆಯಲ್ಲಿ ಡಿ.ಕೆ. ಶಿವಕುಮಾರ್ ಪ್ರಕರಣವು ರಾಜಕಾರಣಿಗಳಿಗೆ ಒಂದು ಪಾಠದಂತಿದೆ. ಯಾವುದೇ ಅಪರಿಚಿತರು ದೊಡ್ಡ ಯೋಜನೆಯ ಹೆಸರಿನಲ್ಲಿ ಏಕಾಂತ ಭೇಟಿ ಕೇಳಿದಾಗ ಅನುಮಾನಿಸುವುದು, ಸಿಬ್ಬಂದಿಗೆ ಮಾಹಿತಿ ನೀಡುವುದು ಮತ್ತು ತಾಂತ್ರಿಕ ವ್ಯವಸ್ಥೆಯಾದ ಸಿಸಿಟಿವಿಯನ್ನು ಬಳಸಿಕೊಳ್ಳುವುದು ಎಷ್ಟು ಮುಖ್ಯ ಎಂಬುದನ್ನು ಇದು ತೋರಿಸುತ್ತದೆ.

ಇಂದು ಹಿಡನ್ ಕ್ಯಾಮೆರಾ ಮತ್ತು ಮೊಬೈಲ್ ರೆಕಾರ್ಡಿಂಗ್ ಅತ್ಯಂತ ಸುಲಭವಾಗಿ ಲಭ್ಯವಿರುವ ಕಾಲದಲ್ಲಿ ಸಾರ್ವಜನಿಕ ವ್ಯಕ್ತಿಗಳು ಇನ್ನಷ್ಟು ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಸ್ಟಿಂಗ್ ಹೆಸರಿನಲ್ಲಿ ನಡೆಯುವ ಸುಲಿಗೆ ದಂಧೆಗೆ ಕಡಿವಾಣ ಹಾಕಲು ಕಾನೂನು ಕ್ರಮವೂ ಬಿಗಿಯಾಗಬೇಕು. ಕೇವಲ ಸುದ್ದಿ ಮಾಡುವ ಉದ್ದೇಶದಿಂದ ನಕಲಿ ದಾಖಲೆ ಸೃಷ್ಟಿಸಿ, ಕಂಪನಿಯ ಹೆಸರಿನಲ್ಲಿ ಬಂದು ಬಲೆಗೆ ಬೀಳಿಸುವ ಪ್ರವೃತ್ತಿ ಹೆಚ್ಚುತ್ತಿರುವುದು ಕಳವಳಕಾರಿಯಾಗಿದೆ. ಇಂತಹ ಪ್ರಕರಣಗಳಲ್ಲಿ ಪೊಲೀಸರು ತಕ್ಷಣ ಕ್ರಮ ತೆಗೆದುಕೊಂಡು ಹಿಂದಿರುವ ಜಾಲವನ್ನು ಪತ್ತೆಹಚ್ಚಬೇಕು. ಇಲ್ಲದಿದ್ದರೆ ರಾಜಕೀಯ ವ್ಯವಸ್ಥೆಯ ಮೇಲಿನ ಜನರ ನಂಬಿಕೆಯೇ ಕುಸಿಯುತ್ತದೆ. ಡಿಕೆಶಿ ಪ್ರಕರಣದಲ್ಲಿ ಸಚಿವರೇ ಖುದ್ದಾಗಿ ಮುನ್ನೆಚ್ಚರಿಕೆ ವಹಿಸಿ ತಮ್ಮ ಮೇಲಿನ ಆರೋಪಕ್ಕೆ ತಾವೇ ಸಾಕ್ಷಿ ಸಮೇತ ಉತ್ತರ ಕೊಟ್ಟಿದ್ದು, ಇದೇ ರೀತಿಯ ಯತ್ನಗಳಿಗೆ ಒಂದು ಎಚ್ಚರಿಕೆಯ ಸಂದೇಶವಾಗಿದೆ.