☔ Weather
Bengaluru: ☁️ 24°C | AQI 118
Mysore: 🌤️ 25°C | AQI 144
Mangalore: 🌤️ 29°C | AQI 144
Bengaluru: ☁️ 24°C | AQI 118
☔ Weather
Bengaluru: ☁️ 24°C | AQI 118
Mysore: 🌤️ 25°C | AQI 144
Mangalore: 🌤️ 29°C | AQI 144
Bengaluru: ☁️ 24°C | AQI 118

RAHUL GANDHI : ಎಸ್‌ಐಆರ್ ವಿವಾದದ ನಡುವೆ ರಾಹುಲ್ ಗಾಂಧಿ ಶಿವನಾಮ ಸ್ಮರಣೆ, ತಾಂಡವದ ಎಚ್ಚರಿಕೆ

Image of Rahul Gandhi
ರಾಹುಲ್ ಗಾಂಧಿ (Rahul Gandhi) ಇಂದು ಸಾಮಾಜಿಕ ಜಾಲತಾಣದಲ್ಲಿ ಭಗವಾನ್ ಶಿವನ ಚಿತ್ರವನ್ನು ಹಂಚಿಕೊಂಡು ಸತ್ಯಂ ಶಿವಂ ಸುಂದರಂ ಎಂದು ಬರೆದಿದ್ದಾರೆ.

ಮುಖ್ಯಾಂಶಗಳು

  • ರಾಹುಲ್ ಗಾಂಧಿ ಶಿವನಾಮ ಸ್ಮರಣೆ..!
  • ಸತ್ಯಕ್ಕಾಗಿ ರುದ್ರ ತಾಂಡವದ ಎಚ್ಚರಿಕೆ
  • ಸುಪ್ರೀಂ ಕೋರ್ಟ್ ನಲ್ಲಿ ಇಂದು ನಿರ್ಧಾರ

ನವದೆಹಲಿ : ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಇಂದು ಸಾಮಾಜಿಕ ಜಾಲತಾಣದಲ್ಲಿ ಭಗವಾನ್ ಶಿವನ ಚಿತ್ರವನ್ನು ಹಂಚಿಕೊಂಡು ಸತ್ಯಂ ಶಿವಂ ಸುಂದರಂ ಎಂದು ಬರೆದಿದ್ದಾರೆ. ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ವಿಚಾರದಲ್ಲಿ ಕೇಂದ್ರ ಚುನಾವಣಾ ಆಯೋಗದ ಜತೆ ನಡೆಯುತ್ತಿರುವ ತೀವ್ರ ಮುಖಾಮುಖಿಯ ನಡುವೆಯೇ ಅವರು ಈ ಪೋಸ್ಟ್ ಹಾಕಿದ್ದಾರೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ನಿರ್ಧಾರಗಳನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಕೈಗೆತ್ತಿಕೊಳ್ಳುವ ಸಮಯದಲ್ಲೇ ಈ ಬೆಳವಣಿಗೆ ನಡೆದಿರುವುದು ಗಮನ ಸೆಳೆದಿದೆ. ಚುನಾವಣಾ ಪ್ರಕ್ರಿಯೆಯಲ್ಲಿ ಅಕ್ರಮ ನಡೆಯುತ್ತಿದೆ ಎಂದು ಆರೋಪಿಸುತ್ತಿರುವ ರಾಹುಲ್ ಗಾಂಧಿ, ಮತಗಳ ಕಳವು ತಡೆಯಬೇಕು ಎಂದು ಆಗ್ರಹಿಸಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಮನವಿ ಸಲ್ಲಿಸಲು ವಿರೋಧ ಪಕ್ಷಗಳು, ನಾಗರಿಕ ಸಮಾಜ ಮತ್ತು ಸಾರ್ವಜನಿಕರು ಒಟ್ಟಾಗಿ ಪ್ರತಿಭಟನಾ ಮೆರವಣಿಗೆ ನಡೆಸಬೇಕು ಎಂದು ಕರೆ ನೀಡಿದ್ದರು.

ಶಿವನ ತಾಂಡವದ ಎಚ್ಚರಿಕೆ ..!

ಎಸ್‌ಐಆರ್ ಪ್ರಕ್ರಿಯೆಯನ್ನು ತಕ್ಷಣ ನಿಲ್ಲಿಸಬೇಕು ಮತ್ತು ಮುಖ್ಯ ಚುನಾವಣಾ ಆಯುಕ್ತರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿರುವ ಅವರು, ವಿರೋಧ ಪಕ್ಷಗಳ ಈ ಹೋರಾಟವನ್ನು ಶಿವನ ತಾಂಡವ ನೃತ್ಯಕ್ಕೆ ಹೋಲಿಸಿ ಪ್ರತಿಭಟನೆ ಮುಂದುವರಿಯಲಿದೆ ಎಂದು ಎಚ್ಚರಿಸಿದ್ದಾರೆ. ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಇಂಡಿಯಾ ಮೈತ್ರಿಕೂಟದ ಇತರ ನಾಯಕರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಎಸ್‌ಐಆರ್ ಜಾರಿ ವೇಳೆ ಆಯೋಗ ತನ್ನ ಸಾಮೂಹಿಕ ಅಧಿಕಾರಗಳನ್ನು ದುರುಪಯೋಗಪಡಿಸಿಕೊಂಡು ಏಕಪಕ್ಷೀಯ ನಿರ್ಧಾರ ಕೈಗೊಂಡಿದೆ ಎಂದು ಆರೋಪಿಸಿದ್ದಾರೆ. ಮತದಾರರ ನೋಂದಣಿಯ ಫಾರ್ಮ್ 6 ರಲ್ಲಿನ ಬದಲಾವಣೆಗಳು, ಚುನಾವಣಾ ದತ್ತಾಂಶದ ಕಾರ್ಯವೈಖರಿ ಮತ್ತು ಸೂಕ್ತ ನೋಟಿಸ್ ನೀಡದೆ ಮತದಾರರ ಹೆಸರುಗಳನ್ನು ಕೈಬಿಟ್ಟಿರುವುದನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ. ಆದರೆ ಈ ಆರೋಪಗಳನ್ನು ಆಯೋಗ ಸುಪ್ರೀಂ ಕೋರ್ಟ್‌ನಲ್ಲಿ ಬಲವಾಗಿ ನಿರಾಕರಿಸಿದ್ದು, ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದ ಮೂರೂ ಆದೇಶಗಳನ್ನು ಆಯೋಗದ ಮೂವರೂ ಸದಸ್ಯರು ಸರ್ವಾನುಮತದಿಂದ ತೆಗೆದುಕೊಂಡಿದ್ದಾರೆ ಎಂದು ಸ್ಪಷ್ಟಪಡಿಸಿದೆ.

ಇದನ್ನೂ ಓದಿ : ಕಬ್ಬು ಬೆಳೆಗಾರರಿಗೆ ಶಾಶ್ವತ ಪರಿಹಾರ ಹುಡುಕಬೇಕು : ಸಿಎಂ ಡಿ.ಕೆ.ಶಿವಕುಮಾರ್

ಈ ಪ್ರಕರಣ ಈಗ ಕೇವಲ ಕಾನೂನು ಹೋರಾಟವಾಗಿ ಉಳಿದಿಲ್ಲ, ಅದು ರಾಜಕೀಯ ಕದನವಾಗಿ ಬದಲಾಗಿದೆ. ಸುಪ್ರೀಂ ಕೋರ್ಟ್ ವಿಚಾರಣೆಗೆ ಕೆಲವೇ ಗಂಟೆಗಳ ಮೊದಲು ಶಿವನ ಚಿತ್ರದೊಂದಿಗೆ ಸತ್ಯಂ ಶಿವಂ ಸುಂದರಂ ಎಂದು ಬರೆಯುವ ಮೂಲಕ ರಾಹುಲ್ ಗಾಂಧಿ ತಮ್ಮ ಹೋರಾಟಕ್ಕೆ ಸತ್ಯ ಮತ್ತು ನ್ಯಾಯದ ಆಧ್ಯಾತ್ಮಿಕ ಆಯಾಮ ನೀಡಲು ಪ್ರಯತ್ನಿಸಿದ್ದಾರೆ. ತಾಂಡವದ ಉಲ್ಲೇಖದ ಮೂಲಕ ಪ್ರತಿಭಟನೆಗೆ ತೀವ್ರತೆ ಹೆಚ್ಚಿಸಿರುವ ಅವರು, ಮತದಾರರ ಹಕ್ಕುಗಳ ರಕ್ಷಣೆ ಎಂಬ ವಿಷಯವನ್ನು ಜನರ ಭಾವನೆಗಳ ಜತೆಗೆ ಬೆಸೆಯಲು ಹೊರಟಿದ್ದಾರೆ. ಇತ್ತ ಆಯೋಗ ಸರ್ವಾನುಮತದ ನಿರ್ಧಾರ ಎಂದು ವಾದಿಸುತ್ತಿರುವುದರಿಂದ ನ್ಯಾಯಾಲಯದ ತೀರ್ಪು ಪರಿಷ್ಕರಣಾ ಪ್ರಕ್ರಿಯೆಯ ಕಾನೂನುಬದ್ಧತೆಯ ಜತೆಗೆ ಚುನಾವಣಾ ವ್ಯವಸ್ಥೆಯ ಮೇಲಿನ ಜನರ ನಂಬಿಕೆಯ ಮೇಲೂ ನಿರ್ಣಾಯಕ ಪರಿಣಾಮ ಬೀರಲಿದೆ.