ಬೆಂಗಳೂರು : ರಾಜ್ಯದ ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಹುಟ್ಟಿಸಿರುವ ವಿಧಾನ ಪರಿಷತ್ತಿನ (Legislative council) 4 ಸ್ಥಾನಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಇಂದು ಬೆಳಿಗ್ಗೆ ಎಂಟು ಗಂಟೆಗೆ ಆರಂಭವಾಗಿದೆ. ಎರಡು ಪದವೀಧರ ಕ್ಷೇತ್ರಗಳು ಹಾಗೂ ಎರಡು ಶಿಕ್ಷಕರ ಕ್ಷೇತ್ರಗಳು ಈ ಚುನಾವಣೆಯ ವ್ಯಾಪ್ತಿಗೆ ಬರುತ್ತವೆ. ಒಟ್ಟು 43 ಅಭ್ಯರ್ಥಿಗಳು ಕಣದಲ್ಲಿದ್ದು, ಅವರ ರಾಜಕೀಯ ಭವಿಷ್ಯ ಇಂದೇ ನಿರ್ಧಾರವಾಗಲಿದೆ. ಆಡಳಿತ ಪಕ್ಷ ಕಾಂಗ್ರೆಸ್ ಮತ್ತು ಬಿಜೆಪಿ ಜೊತೆಗಿನ ಜೆಡಿಎಸ್ ಮೈತ್ರಿಕೂಟದ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿತ್ತು. ಮತ ಎಣಿಕೆಗೆ ಚುನಾವಣಾ ಆಯೋಗ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಎಣಿಕೆ ಕೇಂದ್ರಗಳಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದೆ.
ಆದ್ಯತೆ ಮತಗಳ ಆಧಾರದ ಮೇಲೆ ಎಣಿಕೆ.! ಬೆಳಿಗ್ಗೆಯಿಂದ ಆರಂಭವಾಗಿರುವ ಎಣಿಕೆ ಪ್ರಕ್ರಿಯೆಯಲ್ಲಿ ಮೊದಲ ಹಂತದ ಒಲವುಗಳು ಮಧ್ಯಾಹ್ನದ ಹೊತ್ತಿಗೆ ಹೊರಬೀಳಲಿವೆ. ಈ ಕ್ಷೇತ್ರಗಳಲ್ಲಿ ಆದ್ಯತೆಯ ಮತಗಳ ಆಧಾರದ ಮೇಲೆ ಎಣಿಕೆ ನಡೆಯುವುದರಿಂದ ಸಂಪೂರ್ಣ ಫಲಿತಾಂಶ ಹೊರಬರಲು ಸಂಜೆಯವರೆಗೆ ಕಾಯಬೇಕಾಗುತ್ತದೆ. ಪ್ರಚಾರದ ಅವಧಿಯಲ್ಲಿ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ಓಡಾಡಿದ್ದ ಪಕ್ಷಗಳ ನಾಯಕರು ಮತ್ತು ಅಭ್ಯರ್ಥಿಗಳು ಈಗ ಫಲಿತಾಂಶಕ್ಕಾಗಿ ಆತಂಕದಿಂದ ಕಾಯುತ್ತಿದ್ದಾರೆ. ಮತದಾರರಾದ ಶಿಕ್ಷಕರು ಮತ್ತು ಪದವೀಧರರು ನೀಡಿರುವ ತೀರ್ಪು ಇಂದು ಸಂಜೆಯೊಳಗೆ ಸ್ಪಷ್ಟವಾಗಲಿದೆ. ಇದನ್ನೂ ಓದಿ : ತಂದೆಯ ಹೇಳಿಕೆಗೆ ಮಗನ ಬೆಂಬಲ, ಬಿಜೆಪಿ ವಿರುದ್ಧ ಪ್ರಿಯಾಂಕ್ ಖರ್ಗೆ ತಿರುಗೇಟುಈ ಚುನಾವಣೆ ಕೇವಲ ನಾಲ್ಕು ಸ್ಥಾನಗಳಿಗೆ ಸೀಮಿತವಾಗಿದ್ದರೂ, ಇದರ ಫಲಿತಾಂಶ, ರಾಜಕೀಯ ಸಂದೇಶ ಬಹಳ ದೊಡ್ಡದಾಗಿದೆ. ಪದವೀಧರರು ಮತ್ತು ಶಿಕ್ಷಕರು ಸಮಾಜದಲ್ಲಿ ಪ್ರಜ್ಞಾವಂತ ಮತದಾರರು ಎಂಬ ಹಣೆಪಟ್ಟಿ ಹೊಂದಿರುವುದರಿಂದ, ಇಲ್ಲಿನ ಫಲಿತಾಂಶವನ್ನು ಮುಂದಿನ ದೊಡ್ಡ ಚುನಾವಣೆಗಳಿಗೆ ದಿಕ್ಸೂಚಿ ಎಂದು ಪರಿಗಣಿಸಲಾಗುತ್ತದೆ. ಆಡಳಿತ ಪಕ್ಷಕ್ಕೆ ಇದು ತನ್ನ ಆಡಳಿತದ ಬಗ್ಗೆ ಜನಾಭಿಪ್ರಾಯದ ಪರೀಕ್ಷೆಯಾದರೆ, ವಿರೋಧ ಪಕ್ಷಗಳ ಮೈತ್ರಿಕೂಟಕ್ಕೆ ಇದು ಒಗ್ಗಟ್ಟಿನ ಶಕ್ತಿ ಸಾಬೀತುಪಡಿಸುವ ಅವಕಾಶವಾಗಿದೆ. ಆದ್ಯತೆಯ ಮತದಾನ ಪದ್ಧತಿಯಲ್ಲಿ ಗೆಲುವಿಗೆ ಕೇವಲ ಜನಪ್ರಿಯತೆ ಸಾಲದು, ಅಭ್ಯರ್ಥಿಯ ವೈಯಕ್ತಿಕ ವರ್ಚಸ್ಸು ಮತ್ತು ಸಂಘಟನಾತ್ಮಕ ಜಾಲವೂ ನಿರ್ಣಾಯಕವಾಗುತ್ತದೆ. ಹೀಗಾಗಿ ಇಂದಿನ ಫಲಿತಾಂಶ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಲಿದೆ.




