ಬಿಹಾರ : ಪಾಟ್ನಾದಲ್ಲಿ ನಡೆದ ಬಿಹಾರದ ಮೊದಲ ಮುಖ್ಯಮಂತ್ರಿ ಡಾ. ಶ್ರೀ ಕೃಷ್ಣ ಸಿಂಗ್ ಅವರ 139ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjuna Kharge) ಅವರ ಮಾತುಗಳು ಇದೀಗ ದೇಶದ ರಾಜಕೀಯದಲ್ಲಿ ದೊಡ್ಡ ಕೋಲಾಹಲ ಸೃಷ್ಟಿಸಿವೆ. ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಬಗ್ಗೆ ಮಾತನಾಡುತ್ತಿದ್ದ ಅವರು, ತಪ್ಪು ಮಾಡಿದವರನ್ನು ಜೈಲಿಗೆ ಕಳುಹಿಸುವುದಾಗಿ ಎಚ್ಚರಿಸುತ್ತಿದ್ದರು. ಆ ಸಂದರ್ಭದಲ್ಲಿ ಸಭೆಯಲ್ಲಿ ಇದ್ದ ಒಬ್ಬ ವ್ಯಕ್ತಿ ಪ್ರಧಾನಿ ಅವರು ಅಧಿಕಾರದಿಂದ ಎಲ್ಲೂ ಹೋಗುವುದಿಲ್ಲ ಎಂದು ಕೂಗಿದಾಗ, ಖರ್ಗೆ ಕೂಡಲೇ ಪ್ರತಿಕ್ರಿಯಿಸಿ ಮೋದಿ ಮಾತ್ರವಲ್ಲ, ಅವರ ತಂದೆಯವರೂ ಅಧಿಕಾರದಿಂದ ಕೆಳಗಿಳಿಯುತ್ತಾರೆ ಎಂಬ ಅರ್ಥದಲ್ಲಿ ಮಾತನಾಡಿದರು. ಈ ಮಾತು ಹೊರಬೀಳುತ್ತಿದ್ದಂತೆ ಬಿಜೆಪಿ ನಾಯಕರು ತೀವ್ರವಾಗಿ ಪ್ರತಿಕ್ರಿಯಿಸಿ ಖರ್ಗೆ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ.
ರಾಜಕೀಯ ಶಿಷ್ಟಾಚಾರ ಮಿತಿ ಮೀರಿದೆ..!
ಈ ಹೇಳಿಕೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜಕೀಯ ಶಿಷ್ಟಾಚಾರದ ಎಲ್ಲ ಮಿತಿಗಳನ್ನು ಮೀರಿದ ಮಾತು ಎಂದು ಖಂಡಿಸಿದ್ದು, ದಿವಂಗತ ತಂದೆಯವರನ್ನು ಎಳೆದು ತರುವುದು ಆಕ್ಷೇಪಾರ್ಹ ಎಂದು ಹೇಳಿದ್ದಾರೆ. ಕಾಂಗ್ರೆಸ್ ಈ ಹಿಂದೆಯೂ ಮೋದಿ ಮತ್ತು ಅವರ ಕುಟುಂಬದ ಬಗ್ಗೆ ಅವಹೇಳನಕಾರಿ ಮಾತುಗಳನ್ನು ಬಳಸಿದೆ ಎಂದು ಅವರು ಆರೋಪಿಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬೀನ್ ಇದನ್ನು ಕಾಂಗ್ರೆಸ್ ನ ಸೈದ್ಧಾಂತಿಕ ದಿವಾಳಿತನ ಎಂದು ಕರೆದರೆ, ಕೇಂದ್ರ ಸಚಿವ ಜೆ.ಪಿ. ನಡ್ಡಾ, ಸ್ಮೃತಿ ಇರಾನಿ, ದೇವೇಂದ್ರ ಫಡಣವೀಸ್ ಮತ್ತು ಸಂಬಿತ್ ಪಾತ್ರ ಅವರು ಕೂಡ ಖರ್ಗೆ ಮಾತನ್ನು ಹತಾಶೆಯ ಪ್ರತೀಕ ಎಂದು ಟೀಕಿಸಿದ್ದಾರೆ. ಇತ್ತ ಕಾಂಗ್ರೆಸ್ ನಾಯಕರು ಖರ್ಗೆ ಅವರನ್ನು ಸಮರ್ಥಿಸಿಕೊಂಡಿದ್ದು, ಭಾಷಣಕ್ಕೆ ಅಡ್ಡಿಪಡಿಸಿದ ವ್ಯಕ್ತಿಗೆ ಅವರು ತಕ್ಷಣ ಪ್ರತಿಕ್ರಿಯೆ ನೀಡಿದ್ದರು ಎಂದು ಭೂಪೇಶ್ ಬಘೇಲ್, ಪವನ್ ಖೇರಾ, ಹುಸೇನ್ ದಳವಾಯಿ ಮತ್ತು ಅಭಿಷೇಕ್ ಮನು ಸಿಂಘ್ವಿ ಅವರು ವಾದಿಸಿದ್ದಾರೆ. ಮೋದಿ ಅವರೂ ಹಿಂದೆ ವಿರೋಧಿಗಳ ವಿರುದ್ಧ ವೈಯಕ್ತಿಕ ಮಾತುಗಳನ್ನು ಬಳಸಿದ್ದಾರೆ ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.
ಇದನ್ನೂ ಓದಿ : ಪಾಕಿಸ್ತಾನವೇ ನಮಗೆ ರಕ್ಷಣೆ ಎಂದ ಫಾರೂಕ್, ದೇಶದ್ರೋಹ ಪ್ರಕರಣಕ್ಕೆ ಬಿಜೆಪಿ ಆಗ್ರಹ
ಬಿಹಾರ ಚುನಾವಣೆಯ ಹೊಸ್ತಿಲಲ್ಲಿ ನಡೆದಿರುವ ಈ ಘಟನೆ, ಎರಡೂ ಪಕ್ಷಗಳ ಚುನಾವಣಾ ತಂತ್ರದ ಭಾಗವಾಗಿ ಬದಲಾಗಿದೆ. ಬಿಜೆಪಿಗೆ ಇದು ಕಾಂಗ್ರೆಸ್ ನ್ನು ಸಂಸ್ಕಾರಹೀನ ಪಕ್ಷ ಎಂದು ಬಿಂಬಿಸಿ ಮತದಾರರ ಅನುಕಂಪ ಗಳಿಸಲು ಸಿಕ್ಕ ಅವಕಾಶವಾದರೆ, ಕಾಂಗ್ರೆಸ್ ಗೆ ಇದು ಮತದಾರರ ಪಟ್ಟಿ ಪರಿಷ್ಕರಣೆಯಂತಹ ಗಂಭೀರ ವಿಚಾರದಿಂದ ಗಮನ ಬೇರೆಡೆ ಸರಿಯಬಾರದು ಎಂಬ ಸವಾಲಾಗಿದೆ. ನಾಯಕರ ಮಾತಿನ ಭರದಲ್ಲಿ ಕುಟುಂಬದ ವ್ಯಕ್ತಿಗಳನ್ನು ಎಳೆದು ತರುವುದು ರಾಜಕೀಯ ಚರ್ಚೆಯ ಮಟ್ಟವನ್ನು ಕುಸಿಯುವಂತೆ ಮಾಡುತ್ತದೆ. ಅಭಿವೃದ್ಧಿ, ಉದ್ಯೋಗ ಮತ್ತು ಆಡಳಿತದ ವೈಫಲ್ಯಗಳ ಬಗ್ಗೆ ನಡೆಯಬೇಕಾದ ಚರ್ಚೆಗಳು ಇಂತಹ ವೈಯಕ್ತಿಕ ಕೆಸರೆರಚಾಟದಲ್ಲಿ ಮುಳುಗಿ ಹೋಗುವುದು ಪ್ರಜಾಪ್ರಭುತ್ವಕ್ಕೆ ಒಳ್ಳೆಯ ಲಕ್ಷಣವಲ್ಲ. ಎರಡೂ ಕಡೆಯ ನಾಯಕರು ಮಾತಿನ ಮೇಲೆ ಹಿಡಿತ ಸಾಧಿಸದಿದ್ದರೆ, ಚುನಾವಣಾ ಕಣ ಇನ್ನಷ್ಟು ಕಲುಷಿತಗೊಳ್ಳುವ ಅಪಾಯವಿದೆ.




