ಬೆಂಗಳೂರು : ಕರ್ನಾಟಕ ಬಿಜೆಪಿಯಲ್ಲಿ (BJP) ಹೊರಹಾಕಲ್ಪಟ್ಟ ನಾಯಕರನ್ನು ಮರಳಿ ಪಕ್ಷಕ್ಕೆ ಸೇರಿಸಿಕೊಳ್ಳುವ ವಿಚಾರ ಇದೀಗ ಮತ್ತೆ ಬಿಸಿ ಚರ್ಚೆಗೆ ಗ್ರಾಸವಾಗಿದೆ. ವಿಪಕ್ಷ ನಾಯಕ ಆರ್. ಅಶೋಕ್ ಅವರು ದೆಹಲಿಗೆ ತೆರಳಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿರುವುದು, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ದೆಹಲಿ ಪ್ರವಾಸ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿರುವುದು ಹಾಗೂ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಪರ ಕಾರ್ಯಕರ್ತರು ಮುಂದಿನ ಮುಖ್ಯಮಂತ್ರಿ ಎಂದು ಘೋಷಣೆ ಕೂಗಿರುವುದು ಈ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ನವೆಂಬರ್ ನಲ್ಲಿ ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾಗಿ ಮೂರು ವರ್ಷ ಪೂರೈಸಲಿದ್ದಾರೆ. ಈ ಸಂದರ್ಭದಲ್ಲಿ ಅಶೋಕ್ ದೆಹಲಿಗೆ ಹೋಗಿ ಮೂರು ತಿಂಗಳಿಗೊಮ್ಮೆ ವರದಿ ನೀಡುವ ಭೇಟಿ ಎಂದು ಹೇಳಿದ್ದರೂ ಆಂತರಿಕ ವಿಷಯಗಳು ಚರ್ಚೆಯಾಗಿವೆಯೇ ಎಂಬ ಪ್ರಶ್ನೆ ಮೂಡಿದೆ. ಆದರೆ ಶಾ ಜೊತೆಗಿನ ಮಾತುಕತೆಯ ವಿವರವನ್ನು ಅಶೋಕ್ ಬಹಿರಂಗಪಡಿಸಿಲ್ಲ.
ವಿ. ಸೋಮಣ್ಣ ಮನೆಗೆ ಯತ್ನಾಳ್ ಭೇಟಿ..!
ರಾಣಿ ಚೆನ್ನಮ್ಮ ಕಾರ್ಯಕ್ರಮಕ್ಕೆ ದೆಹಲಿಗೆ ಹೋಗಿದ್ದ ಯತ್ನಾಳ್, ಕೇಂದ್ರ ಸಚಿವ ವಿ. ಸೋಮಣ್ಣ ಅವರ ಮನೆಗೆ ಭೇಟಿ ನೀಡಿದ್ದರು. ದೆಹಲಿಯಲ್ಲಿ ಆತ್ಮೀಯರನ್ನು ಭೇಟಿಯಾದೆನೇ ಹೊರತು ಪಕ್ಷ ಸೇರ್ಪಡೆ ಬಗ್ಗೆ ಯಾರೊಂದಿಗೂ ಮಾತನಾಡಿಲ್ಲ, ವಿಜಯೇಂದ್ರ ಅವರನ್ನು ಭೇಟಿಯಾದಾಗಲೂ ಈ ವಿಷಯ ಪ್ರಸ್ತಾಪವಾಗಿಲ್ಲ, ಯಾರೂ ತಮ್ಮನ್ನು ಪಕ್ಷಕ್ಕೆ ಆಹ್ವಾನಿಸಿಲ್ಲ ಎಂದು ಯತ್ನಾಳ್ ಸ್ಪಷ್ಟಪಡಿಸಿದ್ದಾರೆ. ಇತ್ತ ನವರಾತ್ರಿ ಕಾರ್ಯಕ್ರಮದಲ್ಲಿ ಯಡಿಯೂರಪ್ಪ ಮತ್ತು ಈಶ್ವರಪ್ಪ ಒಟ್ಟಿಗೆ ಕಾಣಿಸಿಕೊಂಡಿದ್ದು ಗಮನ ಸೆಳೆದಿದ್ದು, ಅದಕ್ಕೂ ಮುನ್ನ ಈಶ್ವರಪ್ಪ ಅವರ ಪುತ್ರ ಕಾಂತೇಶ್ ಜೊತೆ ವಿಜಯೇಂದ್ರ ಮಾತುಕತೆ ನಡೆಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ದೊಡ್ಡಬಳ್ಳಾಪುರ ಕಾರ್ಯಕ್ರಮದಲ್ಲಿ ವಿಜಯೇಂದ್ರ ಅವರೇ ಮುಂದಿನ ಮುಖ್ಯಮಂತ್ರಿ ಎಂದು ಕಾರ್ಯಕರ್ತರು ಘೋಷಿಸಿದ್ದು ನಾಯಕತ್ವದ ಚರ್ಚೆಗೆ ಹೊಸ ಆಯಾಮ ನೀಡಿದೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮುಂದಿನ ಏಪ್ರಿಲ್-ಮೇ ವೇಳೆಗೆ ಮರು ಸೇರ್ಪಡೆ ಪ್ರಕ್ರಿಯೆಗೆ ಅಂತಿಮ ರೂಪ ಸಿಗಬಹುದು ಎಂಬ ನಿರೀಕ್ಷೆ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ : 15 ಸಾವಿರದ ಸೆಕೆಂಡ್ ಹ್ಯಾಂಡ್ ಫೋನ್‌ನಲ್ಲಿ ಸ್ಟಿಂಗ್ ವಿಡಿಯೋ ಅಪ್‌ಲೋಡ್, ಬಯಲಾಯ್ತು ಕೃತ್ಯ
ಈ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಬಿಜೆಪಿ ಮುಂಬರುವ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಒಗ್ಗಟ್ಟಿನ ಸೂತ್ರ ಹುಡುಕುತ್ತಿರುವುದು ಸ್ಪಷ್ಟವಾಗುತ್ತದೆ. ಉಚ್ಛಾಟಿತ ನಾಯಕರಿಗೆ ಇರುವ ಸ್ವಂತ ಬಲ, ಅವರ ಸಮುದಾಯಗಳ ಮೇಲಿನ ಹಿಡಿತ ಮತ್ತು ಲಿಂಗಾಯತ ಮತಬ್ಯಾಂಕ್ ಮೇಲಿನ ಪ್ರಭಾವವನ್ನು ಪಕ್ಷ ನಿರ್ಲಕ್ಷ್ಯ ಮಾಡಲು ಸಾಧ್ಯವಿಲ್ಲ. ಹಾಗೆಯೇ ವಿಜಯೇಂದ್ರ ನಾಯಕತ್ವವನ್ನು ಗಟ್ಟಿಗೊಳಿಸಲು ಹಿರಿಯರ ಬೆಂಬಲ ಅನಿವಾರ್ಯ ಎಂಬ ಲೆಕ್ಕಾಚಾರವೂ ಇದೆ. ಆದರೆ ಮರು ಸೇರ್ಪಡೆಯಾದರೆ ಪಕ್ಷದ ಶಿಸ್ತಿಗೆ ಯಾವ ಸಂದೇಶ ಹೋಗುತ್ತದೆ, ಹಾಲಿ ನಾಯಕರ ಅಸಮಾಧಾನವನ್ನು ಹೇಗೆ ನಿಭಾಯಿಸಲಾಗುತ್ತದೆ ಎಂಬುದು ಹೈಕಮಾಂಡ್ ಮುಂದಿರುವ ದೊಡ್ಡ ಸವಾಲು.




