ಈ ಸ್ಟಿಂಗ್ ಪ್ರಕರಣದ ಹಿಂದೆ ಸ್ಪಷ್ಟ ರಾಜಕೀಯ ಉದ್ದೇಶವಿದೆ ಎಂದು ಖರ್ಗೆ ಆರೋಪಿಸಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಕೆಟ್ಟ ಹೆಸರು ತರುವುದಕ್ಕಾಗಿಯೇ ಈ ಕಾರ್ಯಾಚರಣೆಯನ್ನು ನಡೆಸಲಾಗಿದೆ ಎಂದ ಅವರು, ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರ ಪ್ರತಿಷ್ಠೆಗೆ ಧಕ್ಕೆ ತರಲು ಪ್ರಯತ್ನ ನಡೆದಿದೆ ಎಂದು ಹೇಳಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಮತ್ತು ಕಿರಿಯ ಪತ್ರಕರ್ತರನ್ನು ವಿಚಾರಣೆಗೆ ಕರೆಸಲಾಗಿದೆ. ಅನುಮಾನಕ್ಕೆ ಒಳಗಾದವರು ಮತ್ತು ಪ್ರಕರಣಕ್ಕೆ ಸಂಬಂಧಿಸಿದ ಎಲ್ಲರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದ್ದು, ವಿಚಾರಣೆಯ ಸಂಪೂರ್ಣ ಪ್ರಕ್ರಿಯೆಯನ್ನು ವಿಡಿಯೋ ರೆಕಾರ್ಡಿಂಗ್ ಮಾಡಲಾಗಿದೆ. ಸಂಗ್ರಹಿಸಲಾದ ಸಾಕ್ಷ್ಯಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಅಲ್ಲಿನ ಪ್ರಕ್ರಿಯೆಗಳಿಗೆ ಸ್ವಲ್ಪ ಸಮಯ ಬೇಕಾಗುತ್ತದೆ ಎಂದು ಅವರು ವಿವರಿಸಿದ್ದಾರೆ. ಆರೋಪ ಮಾಡುತ್ತಿರುವವರು ತನಿಖೆಗೆ ಸಹಕರಿಸಬೇಕು ಎಂದು ಆಗ್ರಹಿಸಿದ ಖರ್ಗೆ, ನೋಟಿಸ್ ನೀಡಿದರೂ ಕೆಲವರು ವಿಚಾರಣೆಗೆ ಹಾಜರಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಚ್ಚಿಡಲು ಏನೂ ಇಲ್ಲದಿದ್ದರೆ ವಿಚಾರಣೆಯಿಂದ ಯಾಕೆ ದೂರ ಉಳಿಯಬೇಕು ಎಂದು ಪ್ರಶ್ನಿಸಿದ ಅವರು, ಸಂಬಂಧಪಟ್ಟ ವ್ಯಕ್ತಿಗಳಿಗೆ ಕುಮಾರಸ್ವಾಮಿ ಅವರು ರಕ್ಷಣೆ ನೀಡುತ್ತಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ : ಮೆಟಾ ಗ್ಲಾಸ್ ರಹಸ್ಯ ಬಿಚ್ಚಿಟ್ಟ ಸಿಎಂ ಡಿಕೆ – ಸ್ಟಿಂಗ್ ಪ್ರಕರಣದಲ್ಲಿ ಮತ್ತೆ ಸಂಚಲನ ಈ ಪ್ರಕರಣ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ವರ್ಚಸ್ಸು ಮತ್ತು ವಿರೋಧ ಪಕ್ಷಗಳ ರಾಜಕೀಯ ತಂತ್ರಗಳ ನಡುವಿನ ಹೋರಾಟವಾಗಿ ಬದಲಾಗಿದೆ. ಹೀಗಾಗಿ ಇದ್ರಿಂದ ಸರ್ಕಾರಕ್ಕೆ ಹಾನಿಯಾಗಿದೆ ಎಂದು ಸಚಿವರೇ ಒಪ್ಪಿಕೊಳ್ಳುತ್ತಿರುವುದು ಪ್ರಕರಣದ ಗಂಭೀರತೆಯನ್ನು ತೋರಿಸುತ್ತದೆ. ತನಿಖೆಯನ್ನು ತ್ವರಿತವಾಗಿ ಮುಗಿಸಿ ಸತ್ಯಾಂಶವನ್ನು ಜನರ ಮುಂದಿಡುವುದು ಸರ್ಕಾರದ ವಿಶ್ವಾಸಾರ್ಹತೆಗೆ ಅಗತ್ಯವಾಗಿದೆ. ಇಲ್ಲದಿದ್ದರೆ ಇದು ಮತ್ತೊಂದು ರಾಜಕೀಯ ಆರೋಪ ಪ್ರತ್ಯಾರೋಪದ ಪ್ರಕರಣವಾಗಿ ಮಾತ್ರ ಉಳಿದುಬಿಡುತ್ತದೆ. ತನಿಖೆ ಪಾರದರ್ಶಕವಾಗಿದೆ ಎಂದು ಹೇಳುವುದಕ್ಕಿಂತ, ಅದರ ಫಲಿತಾಂಶವೇ ಸರ್ಕಾರಕ್ಕೆ ಉತ್ತರ ನೀಡಬೇಕಾಗಿದೆ. ಆರೋಪಿಗಳ ಸಹಕಾರ ಮತ್ತು ವೈಜ್ಞಾನಿಕ ಸಾಕ್ಷ್ಯಗಳು ಈ ಪ್ರಕರಣದ ಭವಿಷ್ಯವನ್ನು ನಿರ್ಧರಿಸಲಿವೆ.



