☔ Weather
Bengaluru: 🌧️ 25°C | AQI 50
Mysore: ☁️ 26°C | AQI 52
Mangalore: ⛈️ 28°C | AQI 59
Bengaluru: 🌧️ 25°C | AQI 50

LEGISLATIVE COUNCIL: ಪರಿಷತ್ ಕದನದಲ್ಲಿ ಕಾಂಗ್ರೆಸ್ vs ಎನ್‌ಡಿಎ: ಪದವೀಧರ & ಶಿಕ್ಷಕರ ಕ್ಷೇತ್ರಗಳಲ್ಲಿ ಇಂದು ಮತದಾನ

Image of Legislative council election

ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ತಿನ (Legislative council) ನಾಲ್ಕು ಸ್ಥಾನಗಳಿಗೆ ಇಂದು ಮತದಾನ ನಡೆಯುತ್ತಿದ್ದು, ಅಕ್ಟೋಬರ್ 27 ರಂದು ಮತ ಎಣಿಕೆ ನಡೆಯಲಿದೆ. ಎರಡು ಪದವೀಧರ ಕ್ಷೇತ್ರಗಳು ಮತ್ತು ಎರಡು ಶಿಕ್ಷಕರ ಕ್ಷೇತ್ರಗಳಿಗೆ ನಡೆಯುತ್ತಿರುವ ಈ ಚುನಾವಣೆಯಲ್ಲಿ ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಬಿಜೆಪಿಯ ಎಸ್.ವಿ.ಸಂಕನೂರ ಮತ್ತು ಕಾಂಗ್ರೆಸ್‌ನ ಮೋಹನ್ ಲಿಂಬಿಕಾಯಿ, ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿಯ ಕೆ.ಎಂ.ಸುರೇಶ್ ಮತ್ತು ಕಾಂಗ್ರೆಸ್‌ನ ಶಶಿ ಹುಲಿಕುಂಟೆಮಠ್, ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿಯ ಶಶಿಲ್ ನಮೋಶಿ ಮತ್ತು ಕಾಂಗ್ರೆಸ್‌ನ ಶರಣಪ್ಪ ಮಟ್ಟೂರ, ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್‌ನ ಎ.ಪಿ.ರಂಗನಾಥ್ ಮತ್ತು ಕಾಂಗ್ರೆಸ್‌ನ ಪುಟ್ಟಣ್ಣ ಕಣದಲ್ಲಿದ್ದಾರೆ. ಈ ನಾಲ್ಕು ಕ್ಷೇತ್ರಗಳ ಪೈಕಿ ಮೂರರಲ್ಲಿ ಈ ಹಿಂದೆ ಬಿಜೆಪಿ ಸದಸ್ಯರು ಇದ್ದರೆ, ಬೆಂಗಳೂರು ಶಿಕ್ಷಕರ ಕ್ಷೇತ್ರವನ್ನು ಮಾತ್ರ ಕಾಂಗ್ರೆಸ್‌ನ ಪುಟ್ಟಣ್ಣ ಪ್ರತಿನಿಧಿಸುತ್ತಿದ್ದರು. ಅಕ್ಟೋಬರ್ 31 ರಂದು ಚುನಾವಣಾ ಪ್ರಕ್ರಿಯೆ ಸಂಪೂರ್ಣವಾಗಿ ಅಂತ್ಯಗೊಳ್ಳಲಿದೆ.

ನಾಲ್ಕು ಸ್ಥಾನ ಗೆಲ್ಲಲು ಬಿಜೆಪಿ-ಜೆಡಿಎಸ್ ಕಸರತ್ತು..!

ಪ್ರಸ್ತುತ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟವು ತನ್ನ ಬಳಿ ಇರುವ ಮೂರು ಸ್ಥಾನಗಳನ್ನು ಉಳಿಸಿಕೊಳ್ಳುವುದರ ಜೊತೆಗೆ ಬೆಂಗಳೂರು ಶಿಕ್ಷಕರ ಕ್ಷೇತ್ರವನ್ನು ಕಾಂಗ್ರೆಸ್‌ನಿಂದ ಪಡೆಯಲು ವ್ಯಾಪಕ ಪ್ರಚಾರ ಮಾಡಿದೆ. ಬಿಜೆಪಿ ಮತ್ತು ಜೆಡಿಎಸ್ ನಾಯಕರು ಒಟ್ಟಾಗಿ ನಾಲ್ಕೂ ಸ್ಥಾನಗಳನ್ನು ಗೆಲ್ಲುವ ಗುರಿಯೊಂದಿಗೆ ಕಣಕ್ಕಿಳಿದಿದ್ದಾರೆ. ಮತ್ತೊಂದೆಡೆ ಆಡಳಿತಾರೂಢ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಮೊದಲೇ ಘೋಷಿಸಿ 17 ಜಿಲ್ಲೆಗಳಲ್ಲಿ ತಳಮಟ್ಟದ ಸಂಘಟನೆಯನ್ನು ಬಲಪಡಿಸಿ ಪ್ರಚಾರ ನಡೆಸಿದೆ. ಬೆಂಗಳೂರು ಶಿಕ್ಷಕರ ಕ್ಷೇತ್ರವನ್ನು ಉಳಿಸಿಕೊಳ್ಳುವುದರ ಜೊತೆಗೆ ವಿರೋಧ ಪಕ್ಷದ ಭದ್ರಕೋಟೆಗಳಲ್ಲೂ ಲಾಭ ಗಳಿಸಿ ಪರಿಷತ್ತಿನಲ್ಲಿ ತನ್ನ ಸಂಖ್ಯಾಬಲ ಹೆಚ್ಚಿಸಿಕೊಳ್ಳುವುದು ಕಾಂಗ್ರೆಸ್‌ನ ಲೆಕ್ಕಾಚಾರವಾಗಿದೆ. ಈ ಕ್ಷೇತ್ರಗಳಲ್ಲಿ ಸಾಂಪ್ರದಾಯಿಕವಾಗಿ ಬಿಜೆಪಿ ಮತ್ತು ಜೆಡಿಎಸ್ ಪ್ರಾಬಲ್ಯ ಹೊಂದಿದ್ದು, ಕಾಂಗ್ರೆಸ್ ಗೆಲ್ಲುವುದು ಅಪರೂಪ ಎಂಬ ಹಿನ್ನೆಲೆಯಲ್ಲಿ ಈ ಬಾರಿಯ ಸ್ಪರ್ಧೆ ಮಹತ್ವ ಪಡೆದಿದೆ.

ಇದನ್ನೂ ಓದಿ : ಆರ್‌ಎಸ್‌ಎಸ್ ಅಂದ್ರೆ ಪ್ರಿಯಾಂಕ್ ಖರ್ಗೆಗೆ ಅಲರ್ಜಿ – ಯತ್ನಾಳ್ ಸಿಡಿಮಿಡಿ

ಈ ಚುನಾವಣೆ ಕೇವಲ ನಾಲ್ಕು ಸ್ಥಾನಗಳಿಗಷ್ಟೇ ಸೀಮಿತವಾಗಿಲ್ಲ, ಇದು ರಾಜ್ಯ ರಾಜಕೀಯದ ಮುಂದಿನ ದಿಕ್ಕನ್ನು ಸೂಚಿಸುವ ಪರೀಕ್ಷೆಯಾಗಿದೆ. ಬಿಜೆಪಿ-ಜೆಡಿಎಸ್ ಮೈತ್ರಿ ಇನ್ನೂ ಮತದಾರರನ್ನು ಸೆಳೆಯುವ ಶಕ್ತಿಯನ್ನು ಉಳಿಸಿಕೊಂಡಿದೆಯೇ ಎಂಬುದನ್ನು ಈ ಚುನಾವಣೆ ತೋರಿಸಲಿದೆ. ಅದೇ ರೀತಿ ಆಂತರಿಕ ಸಮಸ್ಯೆಗಳ ನಡುವೆಯೂ ಕಾಂಗ್ರೆಸ್ ಎಷ್ಟು ಸಂಘಟಿತವಾಗಿ ಚುನಾವಣೆಯನ್ನು ಎದುರಿಸಬಲ್ಲದು ಎಂಬುದೂ ಬೆಳಕಿಗೆ ಬರಲಿದೆ. ಪದವೀಧರರು ಮತ್ತು ಶಿಕ್ಷಕರು ವಿದ್ಯಾವಂತ ಮತದಾರರಾಗಿರುವುದರಿಂದ ಅವರ ತೀರ್ಪು ಸರ್ಕಾರದ ಕಾರ್ಯವೈಖರಿಗೆ ಒಂದು ಸಂದೇಶವಾಗಲಿದೆ. ಬೆಂಗಳೂರು ಶಿಕ್ಷಕರ ಕ್ಷೇತ್ರದ ಫಲಿತಾಂಶ ಎರಡೂ ಬಣಗಳಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದು, ನಾಲ್ಕೂ ಸ್ಥಾನಗಳಲ್ಲಿ ಯಾರು ಗೆಲ್ಲುತ್ತಾರೆ ಎಂಬುದರ ಮೇಲೆ ಪರಿಷತ್ತಿನಲ್ಲಿ ಅಧಿಕಾರ ಸಮತೋಲನ ನಿರ್ಧಾರವಾಗಲಿದೆ.