☔ Weather
Bengaluru: ☁️ 22°C | AQI 58
Mysore: ☁️ 24°C | AQI 62
Mangalore: ☁️ 28°C | AQI 81
Bengaluru: ☁️ 22°C | AQI 58

STING : ಹೆಚ್.ಡಿ.ಕೆ ವಿರುದ್ಧ ಅಪಪ್ರಚಾರ, ರಾಕೇಶ್ ಶೆಟ್ಟಿ ಆರೋಪಕ್ಕೆ ಅನಿತಾ ಕುಮಾರಸ್ವಾಮಿ ಕೆಂಡ

Image of Anitha Kumaraswamy about Sting operation

ಬೆಂಗಳೂರು : ರಾಜ್ಯ ರಾಜಕಾರಣ ಸ್ಟಿಂಗ್ ವಿಚಾರದಲ್ಲಿ (Sting operation) ಬಿಸಿಯಾಗಿರುವ ಹೊತ್ತಿನಲ್ಲೇ ಖಾಸಗಿ ಸುದ್ದಿ ವಾಹಿನಿಯ ಮುಖ್ಯಸ್ಥ ರಾಕೇಶ್ ಶೆಟ್ಟಿ ಅವರು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಕುಟುಂಬದ ಮೇಲೆ ಮಾಡಿರುವ ಆರೋಪಗಳಿಗೆ ಅನಿತಾ ಕುಮಾರಸ್ವಾಮಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಪವಿತ್ರ ನವರಾತ್ರಿ ಹಬ್ಬದ ದಿನಗಳಲ್ಲಿ ತಮ್ಮ ವಿರುದ್ಧ ಮಾಡಲಾಗಿರುವ ಆರೋಪಗಳು ಸಂಪೂರ್ಣ ಸುಳ್ಳು, ಕಪೋಲಕಲ್ಪಿತ ಮತ್ತು ದುರುದ್ದೇಶದಿಂದ ಕೂಡಿವೆ ಎಂದು ಅವರು ಸರಣಿ ಟ್ವೀಟ್ ಗಳಲ್ಲಿ ಸ್ಪಷ್ಟಪಡಿಸಿದ್ದಾರೆ.

ನನ್ನ ಹೆಸರಿನಲ್ಲಿ 32 ಎಕರೆ ಜಮೀನಿದೆ..!

ತಮ್ಮ ಹೆಸರಿನಲ್ಲಿ ಇರುವುದು ಕೇವಲ 32 ಎಕರೆ ಜಮೀನು ಮಾತ್ರ, ಸಚಿವ ಎಂ ಬಿ ಪಾಟೀಲ್ ಅವರು ಹೇಳಿದಂತೆ 100 ಎಕರೆ ಅಲ್ಲ ಎಂದು ಅವರು ದಾಖಲೆ ಸಮೇತ ತಿರುಗೇಟು ನೀಡಿದ್ದಾರೆ. ರಾಜಕೀಯ ಲಾಭಕ್ಕಾಗಿ ತಮ್ಮ ಕುಟುಂಬದವರನ್ನು ಎಳೆದು ತಂದು ಅಪಪ್ರಚಾರ ಮಾಡುವುದು ಸರಿಯಲ್ಲ, ತಮ್ಮ ಸುದೀರ್ಘ ಸಾರ್ವಜನಿಕ ಬದುಕಿನಲ್ಲಿ ಕಳಂಕರಹಿತವಾಗಿ ಇದ್ದೇನೆ, ಧರ್ಮ ಮತ್ತು ಸತ್ಯದ ಸಂಕೇತವಾದ ನವರಾತ್ರಿ ಸಂದರ್ಭದಲ್ಲೇ ಇಂತಹ ಕೀಳು ಮಟ್ಟದ ನಿಂದನೆಗೆ ಇಳಿದಿರುವುದನ್ನು ತೀವ್ರವಾಗಿ ಖಂಡಿಸುತ್ತೇನೆ, ಸತ್ಯವನ್ನು ಎಂದಿಗೂ ಮುಚ್ಚಿಡಲು ಆಗುವುದಿಲ್ಲ ಎಂದು ಹೇಳಿದ್ದಾರೆ. ಜೊತೆಗೆ ವೈಯಕ್ತಿಕ ವಿಷಯಗಳನ್ನು ಚರ್ಚಿಸುವ ಹೀನ ಮಟ್ಟಕ್ಕೆ ಇಳಿಯಬಾರದು, ಒಂದು ವೇಳೆ ತಮ್ಮ ಮತ್ತು ತಮ್ಮ ಕುಟುಂಬದ ಬಗ್ಗೆ ಆಧಾರರಹಿತ ಆರೋಪಗಳನ್ನು ಮುಂದುವರಿಸಿದರೆ ಕಾನೂನು ಮಾರ್ಗದಲ್ಲಿ ಉತ್ತರ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಈ ಬೆಳವಣಿಗೆ ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಸುತ್ತಿನ ವಾಕ್ಸಮರಕ್ಕೆ ನಾಂದಿ ಹಾಡಿದೆ.

ಇದನ್ನೂ ಓದಿ : ಪೊಲೀಸ್ ಠಾಣೆಗಳ ಎದುರು ಜೆಡಿಎಸ್ ಧರಣಿಗೆ ಸಿದ್ಧತೆ, ಸರ್ಕಾರಕ್ಕೆ ಕುಮಾರಸ್ವಾಮಿ ಅಂತಿಮ ಎಚ್ಚರಿಕೆ

ರಾಜ್ಯದಲ್ಲಿ ಸ್ಟಿಂಗ್ ಆಪರೇಷನ್ ಈಗ ರಾಜಕೀಯ ಅಸ್ತ್ರವಾಗಿ ಬಳಕೆಯಾಗುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಒಂದು ಆರೋಪದ ಸತ್ಯಾಸತ್ಯತೆ ಹೊರಬರುವ ಮೊದಲೇ ಮತ್ತೊಂದು ಆರೋಪದ ಮೂಲಕ ವ್ಯಕ್ತಿಗತ ಚಾರಿತ್ರ್ಯಹನನಕ್ಕೆ ಯತ್ನಿಸುವ ಪ್ರವೃತ್ತಿ ಹೆಚ್ಚಾಗಿದೆ. ಅದರಲ್ಲೂ ಮಹಿಳಾ ರಾಜಕಾರಣಿಗಳನ್ನು ಗುರಿಯಾಗಿಸುವಾಗ ಅವರ ಆಸ್ತಿ, ಕುಟುಂಬದ ವಿಚಾರಗಳನ್ನು ಮುನ್ನೆಲೆಗೆ ತರುವುದು ರಾಜಕೀಯ ಸಂಸ್ಕೃತಿಯ ಕುಸಿತವನ್ನು ತೋರಿಸುತ್ತದೆ. ಅನಿತಾ ಕುಮಾರಸ್ವಾಮಿ ಅವರು ಚುನಾಯಿತ ಪ್ರತಿನಿಧಿಯಾಗಿ ಎರಡು ಬಾರಿ ಶಾಸಕಿಯಾಗಿ ಕೆಲಸ ಮಾಡಿದ್ದಾರೆ, ಅವರದೇ ಆದ ಆಸ್ತಿ ವಿವರಗಳನ್ನು ಚುನಾವಣಾ ಅಫಿಡವಿಟ್ ನಲ್ಲಿ ನೀಡಿದ್ದಾರೆ. ಅದನ್ನು ಮರೆಮಾಚಿ 100 ಎಕರೆ ಎಂದು ಬಿಂಬಿಸುವುದು ಸಾರ್ವಜನಿಕರಲ್ಲಿ ಗೊಂದಲ ಮೂಡಿಸುವ ತಂತ್ರದ ಭಾಗ ಎಂಬ ಆರೋಪ . ಇನ್ನೊಂದು ಕಡೆ ಮಾಧ್ಯಮ ಸಂಸ್ಥೆಯ ಮುಖ್ಯಸ್ಥರೊಬ್ಬರು ನೇರವಾಗಿ ಆರೋಪ ಮಾಡುವುದು ಮಾಧ್ಯಮ ಧರ್ಮಕ್ಕೂ ವಿರುದ್ಧವಾಗಿದೆ.

ಒಂದು ಸುದ್ದಿ ವಾಹಿನಿ ಸಾಕ್ಷ್ಯಾಧಾರ ಸಮೇತ ವರದಿ ಮಾಡಬೇಕೇ ಹೊರತು, ಹಬ್ಬದ ಸಂದರ್ಭದಲ್ಲಿ ಭಾವನಾತ್ಮಕ ವಿಚಾರಗಳನ್ನು ಕೆಣಕುವ ರೀತಿಯಲ್ಲಿ ಹೇಳಿಕೆ ನೀಡಬಾರದು. ಈ ಪ್ರಕರಣದಲ್ಲಿ ಕಾನೂನು ಹೋರಾಟದ ಎಚ್ಚರಿಕೆ ನೀಡಿರುವುದು ರಾಜಕಾರಣಿಗಳು ಈಗ ಮಾಧ್ಯಮ ಟ್ರಯಲ್ ಗೆ ಪರ್ಯಾಯವಾಗಿ ನ್ಯಾಯಾಲಯದ ಮೊರೆ ಹೋಗುವ ಸೂಚನೆಯಾಗಿದೆ. ಒಟ್ಟಾರೆ ಸ್ಟಿಂಗ್ ವಿವಾದ ಕೇವಲ ಒಂದು ಪಕ್ಷಕ್ಕೆ ಸೀಮಿತವಾಗದೆ, ರಾಜ್ಯದ ರಾಜಕಾರಣದಲ್ಲಿ ವೈಯಕ್ತಿಕ ದ್ವೇಷ, ಆಸ್ತಿ ವಿವಾದ ಮತ್ತು ಮಾಧ್ಯಮಗಳ ಪಾತ್ರ ಎಂಬ ಮೂರು ಆಯಾಮಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಇದರಿಂದ ಮತದಾರರಲ್ಲಿ ಗೊಂದಲ ಹೆಚ್ಚಾಗುತ್ತದೆಯೇ ಹೊರತು, ನಿಜವಾದ ಜನಪರ ವಿಷಯಗಳು ಹಿಂದೆ ಸರಿಯುತ್ತವೆ.