☔ Weather
Bengaluru: ☁️ 22°C | AQI 58
Mysore: ☁️ 24°C | AQI 62
Mangalore: ☁️ 28°C | AQI 81
Bengaluru: ☁️ 22°C | AQI 58

BJP : ಬದ್ಧ ವಿರೋಧಿಗಳ ಆತ್ಮೀಯ ಭೇಟಿ, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕಾಗಿ ವಿಜಯೇಂದ್ರ ತಂತ್ರ..?

Image of BJP leaders

ವಿಜಯಪುರ: ಕರ್ನಾಟಕ ಬಿಜೆಪಿಯಲ್ಲಿ (BJP) ನಾಯಕತ್ವ ಬದಲಾವಣೆಯ ಕೂಗು ಜೋರಾಗಿರುವ ಹೊತ್ತಿನಲ್ಲೇ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ಪಕ್ಷದಿಂದ ಉಚ್ಚಾಟಿತರಾಗಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಭೇಟಿ ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಬಹಿರಂಗವಾಗಿಯೇ ವಿಜಯೇಂದ್ರ ಅವರ ನಾಯಕತ್ವದ ವಿರುದ್ಧ ಹರಿಹಾಯುತ್ತಾ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬೇಕು ಎಂದು ಪಟ್ಟು ಹಿಡಿದಿದ್ದ ಯತ್ನಾಳ್ ಅವರನ್ನೇ ಈಗ ವಿಜಯೇಂದ್ರ ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆಯೇ ಎಂಬ ಮಾತುಗಳು ಪಕ್ಷದ ವಲಯದಲ್ಲಿ ಕೇಳಿಬರುತ್ತಿವೆ.

ನಾಯಕತ್ವ ಬದಲಾದರೆ ಮಾತ್ರ ಬಿಜೆಪಿಗೆ ವಾಪಸ್..!

ಇದಕ್ಕೂ ಮೊದಲು ಉಭಯ ನಾಯಕರ ನಡುವೆ ತೀವ್ರ ಭಿನ್ನಾಭಿಪ್ರಾಯವಿತ್ತು. ವಿಜಯೇಂದ್ರ ನೇತೃತ್ವದ ಬಗ್ಗೆ ನಿರಂತರ ಟೀಕೆ ಮಾಡಿದ್ದ ಯತ್ನಾಳ್, ನಾಯಕತ್ವ ಬದಲಾದರೆ ಮಾತ್ರ ಬಿಜೆಪಿಗೆ ಮರಳುವುದಾಗಿ ಹೇಳಿಕೆ ನೀಡಿದ್ದರು. ಆದರೆ ಇತ್ತೀಚಿನ ಭೇಟಿಯಲ್ಲಿ ವಿಜಯೇಂದ್ರ ಅವರು ಯತ್ನಾಳ್ ಅವರೊಂದಿಗೆ ಆತ್ಮೀಯವಾಗಿ ಸಂವಾದ ನಡೆಸಿ ಜೊತೆಯಲ್ಲಿ ಊಟ ಮಾಡಿದ್ದಾರೆ ಎಂದು ತಿಳಿದುಬಂದಿದೆ. ವಿಧಾನಸಭೆ ಅಧಿವೇಶನದ ವೇಳೆ ಎದುರಾದಾಗಲೆಲ್ಲಾ ವಿಜಯೇಂದ್ರ ಅವರೇ ಮುಂದೆ ಬಂದು ಮಾತನಾಡಿಸಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ. ನವೆಂಬರ್ 10ಕ್ಕೆ ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾಗಿ ಮೂರು ವರ್ಷ ಪೂರೈಸಲಿದ್ದು, ಈ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬದಲಾವಣೆ ನಿಶ್ಚಿತವೇ ಎಂಬ ಚರ್ಚೆ ನಡೆಯುತ್ತಿರುವಾಗ ಈ ಭೇಟಿಗೆ ಮಹತ್ವ ಬಂದಿದೆ. ಸದ್ಯ ಈ ಭೇಟಿ ಸೌಜನ್ಯದ್ದೋ ಅಥವಾ ರಾಜಕೀಯ ಲೆಕ್ಕಾಚಾರದ್ದೋ ಎಂಬ ಬಗ್ಗೆ ಇಬ್ಬರಿಂದಲೂ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.

ಇದನ್ನೂ ಓದಿ: ಜೋಷಿ ಸಂಧಾನ ಸಫಲ – ಕಬ್ಬು ಬೆಳೆಗಾರರ ಪಾದಯಾತ್ರೆಗೆ ಬ್ರೇಕ್

ಈ ಬೆಳವಣಿಗೆಯನ್ನು ರಾಜಕೀಯ ದೃಷ್ಟಿಕೋನದಿಂದ ನೋಡಿದರೆ ವಿಜಯೇಂದ್ರ ಅವರ ನಡೆ ಕಾರ್ಯತಂತ್ರದ ಭಾಗವಾಗಿ ಕಾಣುತ್ತದೆ. ಹೈಕಮಾಂಡ್ ಮಟ್ಟದಲ್ಲಿ ನಾಯಕತ್ವದ ಕುರಿತು ಅಂತಿಮ ತೀರ್ಮಾನಕ್ಕೆ ಬರುವ ಮುನ್ನ ಪಕ್ಷದೊಳಗಿನ ವಿರೋಧಿ ಬಣವನ್ನು ಸಮಾಧಾನಪಡಿಸುವುದು ಅನಿವಾರ್ಯ. ಯತ್ನಾಳ್ ಅವರು ಬಹಿರಂಗ ಟೀಕಾಕಾರರಾಗಿದ್ದರೂ ಉತ್ತರ ಕರ್ನಾಟಕ ಭಾಗದಲ್ಲಿ ತಮ್ಮದೇ ಆದ ಬೆಂಬಲ ಹೊಂದಿದ್ದಾರೆ ಮತ್ತು ಹಿಂದುತ್ವ ವಿಚಾರದಲ್ಲಿ ಗಟ್ಟಿ ನಿಲುವು ಹೊಂದಿರುವ ನಾಯಕ ಎಂಬ ಇಮೇಜ್ ಹೊಂದಿದ್ದಾರೆ. ಅವರನ್ನು ಪಕ್ಕಕ್ಕೆ ತಳ್ಳುವುದಕ್ಕಿಂತ ಜೊತೆಯಲ್ಲಿ ಇಟ್ಟುಕೊಳ್ಳುವುದು ವಿಜಯೇಂದ್ರ ಅವರಿಗೆ ನಾಯಕತ್ವದ ಸ್ಥಿರತೆಗೆ ಪೂರಕವಾಗಬಹುದು.

ಈ ಮೂಲಕ ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯುವ ಸಾಮರ್ಥ್ಯವಿದೆ ಎಂಬ ಸಂದೇಶವನ್ನು ದೆಹಲಿಗೆ ರವಾನಿಸಬಹುದು. ಮತ್ತೊಂದೆಡೆ ಯತ್ನಾಳ್ ಅವರಿಗೂ ಈ ಭೇಟಿ ಲಾಭದಾಯಕ ಎನ್ನಬಹುದು. ಪಕ್ಷದಿಂದ ಹೊರಗಿದ್ದು ಹೋರಾಟ ಮಾಡುವುದಕ್ಕಿಂತ ಒಳಗಿನಿಂದ ಒತ್ತಡ ಹೇರುವುದು ಹೆಚ್ಚು ಪರಿಣಾಮಕಾರಿ ಎಂಬ ಲೆಕ್ಕಾಚಾರ ಅವರದ್ದಾಗಿರಬಹುದು. ಬಿಜೆಪಿಯಲ್ಲಿ ಈಗ ವಿಜಯೇಂದ್ರ ವಿರೋಧಿ ಗುಂಪು ಚದುರಿದೆ, ಹಲವು ಹಿರಿಯ ನಾಯಕರು ಮೌನವಾಗಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ ನೇರ ಸಂಘರ್ಷಕ್ಕಿಂತ ಸಂಧಾನದ ದಾರಿ ಎರಡೂ ಕಡೆಯವರಿಗೆ ಅನುಕೂಲ ಎಂಬುದು ಬಿವೈವಿ ಲೆಕ್ಕಾಚಾರ ಇರಬಹುದು.

ಆದರೆ ಇದು ಶಾಶ್ವತ ಹೊಂದಾಣಿಕೆಯೋ ಅಥವಾ ತಾತ್ಕಾಲಿಕ ರಾಜಕೀಯ ನಾಟಕವೋ ಎಂಬುದು ಸ್ಪಷ್ಟವಾಗಬೇಕಿದೆ. ಒಂದು ವೇಳೆ ಹೈಕಮಾಂಡ್ ನಾಯಕತ್ವ ಬದಲಾವಣೆಗೆ ಮುಂದಾದರೆ ಈ ಭೇಟಿಯ ಲೆಕ್ಕಾಚಾರವೇ ಬದಲಾಗುತ್ತದೆ. ಇಲ್ಲದಿದ್ದರೆ ವಿಜಯೇಂದ್ರ ಅವರು ವಿರೋಧಿಗಳನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ತಮ್ಮ ಸ್ಥಾನ ಭದ್ರಪಡಿಸಿಕೊಳ್ಳುವ ಪ್ರಯತ್ನವಾಗಿ ಈ ಭೇಟಿಯನ್ನು ನೋಡಬೇಕಾಗುತ್ತದೆ.