☔ Weather
Bengaluru: ☁️ 22°C | AQI 58
Mysore: ☁️ 24°C | AQI 62
Mangalore: ☁️ 28°C | AQI 81
Bengaluru: ☁️ 22°C | AQI 58

FARMERS: ಜೋಷಿ ಸಂಧಾನ ಸಫಲ – ಕಬ್ಬು ಬೆಳೆಗಾರರ ಪಾದಯಾತ್ರೆಗೆ ಬ್ರೇಕ್

Image of farmers with Prahlad joshi

ಹುಬ್ಬಳ್ಳಿ : ಕಬ್ಬು ಬೆಳೆಗಾರರ (farmers) ಪಾದಯಾತ್ರೆ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ನೇತೃತ್ವದಲ್ಲಿ ನಡೆದ ಸಂಧಾನ ಸಭೆ ಯಶಸ್ವಿಯಾಗಿದೆ. ಹುಬ್ಬಳ್ಳಿಯ ಸರ್ಕ್ಯೂಟ್ ಹೌಸ್ ಐಬಿಯಲ್ಲಿ ಮಧ್ಯರಾತ್ರಿಯವರೆಗೂ ನಡೆದ ಈ ಮಹತ್ವದ ಸಭೆಯಲ್ಲಿ ಕಬ್ಬು ಬೆಳೆಗಾರರ ಪರವಾಗಿ ಚೂನಪ್ಪ ಪೂಜಾರಿ ಅವರ ನೇತೃತ್ವದ ಎಂಟು ಪ್ರಮುಖ ರೈತ ಮುಖಂಡರು ಪಾಲ್ಗೊಂಡು ತಮ್ಮ ಬೇಡಿಕೆ ಮತ್ತು ಸಮಸ್ಯೆಗಳನ್ನು ಸಚಿವರ ಮುಂದೆ ಪ್ರಸ್ತಾಪಿಸಿದರು. ಈ ಸಂದರ್ಭದಲ್ಲಿ ಸಂಸದ ಜಗದೀಶ್ ಶೆಟ್ಟರ್, ಶಾಸಕರಾದ ಮಹೇಶ್ ಟೆಂಗಿನಕಾಯಿ, ಸಿ.ಸಿ. ಪಾಟೀಲ್, ಧಾರವಾಡ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರು ಉಪಸ್ಥಿತರಿದ್ದು ಚರ್ಚೆಯಲ್ಲಿ ಭಾಗವಹಿಸಿದ್ದರು.

ಸಮಯಾವಕಾಶಕ್ಕಾಗಿ ರೈತರ ಬಳಿ ಮನವಿ !

ಈ ಸಭೆಯಲ್ಲಿ ರೈತರ ಬೇಡಿಕೆಗಳು ನ್ಯಾಯಯುತವಾಗಿದ್ದು ಅವುಗಳನ್ನು ಪರಿಶೀಲಿಸಿ ಈಡೇರಿಸಲು ಸ್ವಲ್ಪ ಸಮಯಾವಕಾಶ ನೀಡುವಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರು ಮನವಿ ಮಾಡಿದರು. ಸಚಿವರ ಈ ಮನವಿಗೆ ರೈತ ಮುಖಂಡರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದು, ಸದ್ಯಕ್ಕೆ ಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರಿಂದ ಸಂಧಾನ ಪ್ರಯತ್ನ ಫಲ ನೀಡಿದಂತಾಗಿದೆ. ಬೇಡಿಕೆ ಈಡೇರಿಕೆಗೆ ಕಾಲಾವಕಾಶ ನೀಡುವ ವಿಷಯದ ಬಗ್ಗೆ ಇತರ ರೈತರೊಂದಿಗೆ ಸಮಾಲೋಚನೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳಲು ಮುಖಂಡರು ತೀರ್ಮಾನಿಸಿದ್ದಾರೆ. ಹೀಗಾಗಿ ಇಂದು ಮತ್ತೊಂದು ಸುತ್ತಿನ ರೈತರ ಸಭೆ ನಡೆಯಲಿದ್ದು, ಪಾದಯಾತ್ರೆಯನ್ನು ಕೈಬಿಡುವ ಕುರಿತು ಅಂತಿಮ ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆ ಇದೆ.

ಇದನ್ನೂ ಓದಿ : ಮಗನಿಗಾಗಿ ಮೋದಿ ಎದುರು ದೇವೇಗೌಡರು ಕಣ್ಣೀರು, ಪ್ರಿಯಾಂಕ್ ವ್ಯಂಗ್ಯ

ಕಬ್ಬು ಬೆಳೆಗಾರರ ಹೋರಾಟ ಉತ್ತರ ಕರ್ನಾಟಕದ ರಾಜಕೀಯ ಮತ್ತು ಆರ್ಥಿಕ ನೆಲೆಯಲ್ಲಿ ಅತ್ಯಂತ ಸೂಕ್ಷ್ಮ ವಿಷಯವಾಗಿದೆ. ಪ್ರತಿ ವರ್ಷ ಕಟಾವು ಅವಧಿಯಲ್ಲಿ ಬೆಲೆ ನಿಗದಿ, ಕಬ್ಬು ಕಟಾವು ಮತ್ತು ಸಾಗಾಣಿಕೆ ದರ, ಕಾರ್ಖಾನೆಗಳಿಂದ ಬಾಕಿ ಹಣ ಪಾವತಿ ವಿಳಂಬದಂತಹ ಸಮಸ್ಯೆಗಳು ರೈತರನ್ನು ಕಂಗಾಲಾಗಿಸುತ್ತವೆ. ಸಕ್ಕರೆ ಕಾರ್ಖಾನೆಗಳು ಮತ್ತು ಸರ್ಕಾರದ ನಡುವೆ ಸಿಲುಕುವ ರೈತರಿಗೆ ತಕ್ಷಣದ ಭರವಸೆಗಿಂತ ಶಾಶ್ವತ ಪರಿಹಾರದ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಮಧ್ಯರಾತ್ರಿಯವರೆಗೂ ಕೇಂದ್ರ ಸಚಿವರೇ ಖುದ್ದು ಸಂಧಾನಕ್ಕೆ ಇಳಿದಿರುವುದು ಕೇಂದ್ರ ಸರ್ಕಾರಕ್ಕೆ ಈ ವಿಷಯದ ಗಂಭೀರತೆ ಅರಿವಾಗಿದೆ ಎಂಬುದನ್ನು ತೋರಿಸುತ್ತದೆ. ಚುನಾವಣಾ ದೃಷ್ಟಿಯಿಂದಲೂ ಧಾರವಾಡ, ಬೆಳಗಾವಿ, ಬಾಗಲಕೋಟೆ ಭಾಗದ ಕಬ್ಬು ಪಟ್ಟಿಯಲ್ಲಿ ರೈತರ ಅಸಮಾಧಾನ ದೊಡ್ಡ ಪರಿಣಾಮ ಬೀರುತ್ತದೆ. ಆದ್ದರಿಂದ ಸಮಯಾವಕಾಶ ಕೋರುವ ಮೂಲಕ ತಾತ್ಕಾಲಿಕವಾಗಿ ಪಾದಯಾತ್ರೆಯನ್ನು ತಡೆಯುವುದು ಸರ್ಕಾರಕ್ಕೆ ಅನುಕೂಲಕರ ತಂತ್ರವಾದರೂ, ರೈತರು ಈ ಬಾರಿ ಲಿಖಿತ ಭರವಸೆ ಮತ್ತು ಸ್ಪಷ್ಟ ಗಡುವನ್ನು ಅಪೇಕ್ಷಿಸುತ್ತಿದ್ದಾರೆ.

ಕೇವಲ ಸಂಧಾನ ಸಭೆ ಯಶಸ್ವಿ ಎನ್ನುವುದಕ್ಕಿಂತ, ಮುಂದಿನ ದಿನಗಳಲ್ಲಿ ಎಫ್ಆರ್ಪಿ ಜೊತೆಗೆ ಹೆಚ್ಚುವರಿ ದರ, ಕಟಾವು ಕೂಲಿ ವೈಜ್ಞಾನಿಕ ನಿಗದಿ ಮತ್ತು ಬಾಕಿ ಪಾವತಿಗೆ ಕಾನೂನು ಬಿಗಿ ಕ್ರಮಗಳಂತಹ ಪ್ರಾಯೋಗಿಕ ನಿರ್ಧಾರಗಳು ಬಂದರೆ ಮಾತ್ರ ಈ ಸಭೆಗೆ ಅರ್ಥ ಬರುತ್ತದೆ. ಇಲ್ಲದಿದ್ದರೆ ಇದು ಮತ್ತೊಂದು ಮುಂದೂಡುವ ತಂತ್ರವಾಗಿ ರೈತರಲ್ಲಿ ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಬಹುದು.