☔ Weather
Bengaluru: ☁️ 22°C | AQI 58
Mysore: ☁️ 24°C | AQI 62
Mangalore: ☁️ 28°C | AQI 81
Bengaluru: ☁️ 22°C | AQI 58

PRIYANK KHARGE : ದೆಹಲಿಯಲ್ಲಿ ಮಾಡಲು ಕೆಲಸವಿಲ್ಲ – RSS ಔಟ್ ಸೋರ್ಸ್ ಕುಮಾರಸ್ವಾಮಿ

Image of Priyank Kharge with HD Kumaraswamy

ಬೆಂಗಳೂರು : ಸ್ಟಿಂಗ್ ಆಪರೇಷನ್ ವಿವಾದದ ಹಿನ್ನೆಲೆಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಮತ್ತು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ನಡುವಿನ ವಾಕ್ಸಮರ ತೀವ್ರಗೊಂಡಿದೆ. ಮುಖ್ಯಮಂತ್ರಿ ಡಿಕೆ ಮತ್ತು ಪ್ರಿಯಾಂಕ್ ಖರ್ಗೆ ಅವರನ್ನು ಗುರಿಯಾಗಿಸಿ ಕುಮಾರಸ್ವಾಮಿ ಮಾಡಿದ್ದ ಟೀಕೆಗೆ ಪ್ರಿಯಾಂಕ್ ಖರ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ದೆಹಲಿಯಲ್ಲಿ ಕುಮಾರಸ್ವಾಮಿಗೆ ಯಾವುದೇ ಕೆಲಸವಿಲ್ಲ, ಕೇಂದ್ರ ಸಚಿವರಾಗಿ ಎರಡೂವರೆ ವರ್ಷವಾದರೂ ಯಾವುದೇ ಸಾಧನೆ ಮಾಡಿಲ್ಲ, ಡಿ ಕೆ ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾರೆ ಎಂಬ ಅಸೂಯೆಯಿಂದ ಮಾತನಾಡುತ್ತಿದ್ದಾರೆ ಎಂದು ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ತಪ್ಪು ಮಾಡಿದರೆ ಜೆಡಿಎಸ್ ಕಾರ್ಯಕರ್ತರಿಗೆ ವಿನಾಯಿತಿ ಇದೆಯೇ ಎಂದು ಪ್ರಶ್ನಿಸಿದ್ದಾರೆ.

ಆರ್.ಎಸ್.ಎಸ್ ನಿಂದ ಕುಮಾರಸ್ವಾಮಿ ಔಟ್ ಸೋರ್ಸ್ !

ಆರ್.ಎಸ್.ಎಸ್ ನವರು ಕುಮಾರಸ್ವಾಮಿ ಅವರನ್ನು ಔಟ್ ಸೋರ್ಸ್ ಮಾಡಿಕೊಂಡಿದ್ದಾರೆ, ಬಿಜೆಪಿಯಲ್ಲಿ ಸಮರ್ಥ ನಾಯಕ ಇಲ್ಲದ ಕಾರಣ ಅವರ ಮೂಲಕ ತಮ್ಮ ಮೇಲೆ ದಾಳಿ ಮಾಡಿಸಲಾಗುತ್ತಿದೆ ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ. ಐಟಿ, ಇಡಿ, ಸ್ಟಿಂಗ್ ಎಲ್ಲವೂ ಅವರ ರಾಜಕೀಯ ತಂತ್ರಗಳು ಎಂದು ಹೇಳಿರುವ ಅವರು, ಸಿದ್ದರಾಮಯ್ಯ ಅವರ ಬಗ್ಗೆ ತೋರಿಸುವ ಅರ್ಧದಷ್ಟು ಕಾಳಜಿಯನ್ನಾದರೂ ಹಾಸನದ ಹೆಣ್ಣುಮಕ್ಕಳ ವಿಚಾರದಲ್ಲಿ ಏಕೆ ತೋರಿಸುತ್ತಿಲ್ಲ ಎಂದು ಕುಮಾರಸ್ವಾಮಿ ಅವರನ್ನು ಪ್ರಶ್ನಿಸಿದ್ದಾರೆ. ಸಿದ್ದರಾಮಯ್ಯ ಮೇಲೆ ಈಗೇಕೆ ಇಲ್ಲದ ಕಾಳಜಿ ಎಂದು ಕೇಳಿರುವ ಖರ್ಗೆ, ತನಿಖೆ ಮಾಡಿ ಎಂದು ಮೊದಲು ಒತ್ತಾಯಿಸಿ ನಂತರ ತನಿಖೆಯಲ್ಲಿ ತಮ್ಮದೇ ಬಲಗೈ ಬಂಟನ ಹೆಸರು ಬಂದಾಗ ಹಿಂಜರಿದಿದ್ದಾರೆ ಎಂದು ಹೇಳಿದ್ದಾರೆ. ತನಗೆ ನೀತಿಪಾಠ ಹೇಳುವ ಅಗತ್ಯವಿಲ್ಲ, ನಿಮ್ಮ ಮನಸ್ಥಿತಿ ಏನೆಂದು ಗೊತ್ತಾಗುತ್ತಿದೆ ಎಂದು ಹೇಳಿರುವ ಖರ್ಗೆ, ನೀವು ಯಾರ ಜೊತೆ ಮೈತ್ರಿ ಮಾಡಿಕೊಂಡಿದ್ದೀರೋ ಅವರನ್ನೇ ಪ್ರಿಯಾಂಕ್ ಖರ್ಗೆ ಬಗ್ಗೆ ಕೇಳಿ, ಮುಂದೆ ಅಮಿತ್ ಶಾ ಕೂಡ ಪ್ರಿಯಾಂಕ್ ಖರ್ಗೆ ಉತ್ತಮ ಗೃಹ ಸಚಿವ ಎಂದು ಹೇಳುತ್ತಾರೆ ಎಂದು ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ : ಸಿದ್ದರಾಮಯ್ಯ ಪದಚ್ಯುತಿಗೆ ಸ್ಟಿಂಗ್ ಪಿತೂರಿ, ಡಿಕೆಶಿ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ

ಸ್ಟಿಂಗ್ ಗೆ ಸಾಕ್ಷಿ ಇದ್ದರೆ ನೀಡಿ ಎಂದರೆ ನೀಡುತ್ತಿಲ್ಲ, ಕಮಿಷನರ್ ಕಚೇರಿಗೆ ಸಾಕ್ಷಿ ಕೊಟ್ಟಿದ್ದರೆ ವಿಷಯ ಮುಗಿಯುತ್ತಿತ್ತು, ಕುಮಾರಸ್ವಾಮಿಗೆ ನಿರುದ್ಯೋಗ ಸಮಸ್ಯೆ ಕಾಡುತ್ತಿದೆ, ಅವರು ಗಾಳಿ ಬಂದ ಕಡೆ ಹೋಗುವ ವ್ಯಕ್ತಿ ಎಂದು ವಾಗ್ದಾಳಿ ನಡೆಸಿದ್ದಾರೆ.

ಈ ವಾಕ್ಸಮರ ರಾಜ್ಯ ರಾಜಕಾರಣದಲ್ಲಿ ಸಂಪೂರ್ಣ ಗಾಮಾ ಸೆಳೆದಿದೆ. ಸ್ಟಿಂಗ್ ಆಪರೇಷನ್ ವಿಚಾರ ಕೇವಲ ಒಂದು ಪ್ರಕರಣವಾಗಿ ಉಳಿದಿಲ್ಲ, ಅದು ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ನಡುವಿನ ಅಧಿಕಾರದ ಚದುರಂಗದಾಟವಾಗಿ ಬದಲಾಗಿದೆ. ಪ್ರಿಯಾಂಕ್ ಖರ್ಗೆ ಅವರನ್ನು ಗುರಿಯಾಗಿಸಿ ಕುಮಾರಸ್ವಾಮಿ ಮಾಡುತ್ತಿರುವ ಆರೋಪಗಳು ಮತ್ತು ಅದಕ್ಕೆ ಪ್ರತಿಯಾಗಿ ಪ್ರಿಯಾಂಕ್ ನೀಡುತ್ತಿರುವ ಉತ್ತರಗಳು ವೈಯಕ್ತಿಕ ದ್ವೇಷಕ್ಕಿಂತ ಹೆಚ್ಚಾಗಿ ರಾಜಕೀಯ ಅಸ್ತಿತ್ವದ ಹೋರಾಟವನ್ನು ತೋರಿಸುತ್ತಿವೆ. ಕೇಂದ್ರ ಸಚಿವ ಸ್ಥಾನದಲ್ಲಿದ್ದರೂ ರಾಜ್ಯ ರಾಜಕಾರಣದಲ್ಲಿ ಸಕ್ರಿಯವಾಗಿರಲು ಕುಮಾರಸ್ವಾಮಿ ಪ್ರಯತ್ನಿಸುತ್ತಿರುವುದು ಮತ್ತು ಬಿಜೆಪಿಗೆ ರಾಜ್ಯದಲ್ಲಿ ಪ್ರಬಲ ಮುಖವಿಲ್ಲದ ಕಾರಣ ಅವರನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಸರ್ಕಾರದ ಮೇಲೆ ಒತ್ತಡ ಹೇರುವ ತಂತ್ರ ನಡೆಯುತ್ತಿದೆ ಎಂಬುದು ಪ್ರಿಯಾಂಕ್ ಅವರ ವಾದದ ಹಿಂದಿನ ಲೆಕ್ಕಾಚಾರ. ಮತ್ತೊಂದೆಡೆ ಹಾಸನ ಪ್ರಕರಣವನ್ನು ಪ್ರಸ್ತಾಪಿಸಿ ಕುಮಾರಸ್ವಾಮಿ ಅವರ ನೈತಿಕತೆಯನ್ನು ಪ್ರಶ್ನಿಸುವ ಮೂಲಕ ಜೆಡಿಎಸ್ ನ ದೌರ್ಬಲ್ಯವನ್ನು ಎತ್ತಿ ತೋರಿಸುವ ಪ್ರಯತ್ನವೂ ಇದರಲ್ಲಿ ಅಡಗಿದೆ. ಐಟಿ, ಇಡಿ, ಸ್ಟಿಂಗ್ ಆಪರೇಷನ್ ಗಳನ್ನು ರಾಜಕೀಯ ಅಸ್ತ್ರಗಳಾಗಿ ಬಳಸಲಾಗುತ್ತಿದೆ ಎಂಬ ಆರೋಪ ಹೊಸದಲ್ಲ, ಆದರೆ ಈ ಬಾರಿ ತನಿಖೆಯ ದಿಕ್ಕು ತಮ್ಮ ಆಪ್ತರ ಕಡೆಗೆ ತಿರುಗುತ್ತಿದ್ದಂತೆ ಧೋರಣೆ ಬದಲಿಸಿರುವುದು ರಾಜಕೀಯ ಪಕ್ಷಗಳ ಆಯ್ಕೆಯ ನ್ಯಾಯದ ಪ್ರಶ್ನೆಯನ್ನು ಮುಂದಿಡುತ್ತದೆ. ಒಟ್ಟಾರೆ ಈ ಬೆಳವಣಿಗೆ ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವಿನ ಸಂಘರ್ಷವನ್ನು ಮತ್ತಷ್ಟು ತೀವ್ರಗೊಳಿಸುವ ಸಾಧ್ಯತೆ ಇದೆ.