☔ Weather
Bengaluru: ☁️ 22°C | AQI 58
Mysore: ☁️ 24°C | AQI 62
Mangalore: ☁️ 28°C | AQI 81
Bengaluru: ☁️ 22°C | AQI 58

INDIA : ‘ಇಂಡಿಯಾ’ ಒಕ್ಕೂಟದಿಂದ ಇಂದು ದಿಲ್ಲಿಯಲ್ಲಿ ಮತ್ತೆ ಬೃಹತ್ ಪ್ರತಿಭಟನೆ

Image of INDIA protest in Delhi

ನವದೆಹಲಿ: ದೇಶದ ಚುನಾವಣಾ ಆಯೋಗದ ಕಾರ್ಯಾಚರಣೆ ಶೈಲಿ, ಎಸ್‌ಐಆರ್ ಪ್ರಕ್ರಿಯೆ ಮತ್ತು ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಉದ್ಭವಿಸಿರುವ ಗಂಭೀರ ಸ್ವರೂಪದ ವಿವಾದಗಳ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳ ‘ಇಂಡಿಯಾ’ ಒಕ್ಕೂಟವು (INDIA) ಉಗ್ರ ಹೋರಾಟಕ್ಕೆ ಅಣಿಯಾಗಿದೆ. ಕೇಂದ್ರದ ಧೋರಣೆ ಹಾಗೂ ಆಯೋಗದ ಕ್ರಮಗಳ ವಿರುದ್ಧ ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಒಕ್ಕೂಟದ ಪ್ರಮುಖ ನಾಯಕರು, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧ ಇಂದು ರಾಷ್ಟ್ರ ರಾಜಧಾನಿಯಲ್ಲಿ ಬೃಹತ್ ಪ್ರೊಟೆಸ್ಟ್ ಹಮ್ಮಿಕೊಂಡಿದ್ದಾರೆ.

ಪ್ರಜಾಪ್ರಭುತ್ವದ ಮೂಲ ತತ್ವಗಳಿಗೆ ಧಕ್ಕೆ !

ಚುನಾವಣಾ ವ್ಯವಸ್ಥೆಯ ಪಾವಿತ್ರ್ಯತೆ ಹಾಗೂ ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯಲು ಈ ಹೊರಾಟ ಅನಿವಾರ್ಯ ಎಂಬ ನಿಲುವನ್ನು ವಿಪಕ್ಷಗಳು ತಳೆದಿವೆ.ಪ್ರಜಾಪ್ರಭುತ್ವದ ಮೂಲ ತತ್ವಗಳಿಗೆ ಧಕ್ಕೆ ತರುತ್ತಿರುವ ಈ ವಿವಾದಾತ್ಮಕ ಬೆಳವಣಿಗೆಗಳ ಕುರಿತು ವಿರೋಧ ಪಕ್ಷಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಇದರ ಮುಂದುವರಿದ ಭಾಗವಾಗಿ ಇಂದು ನಡೆಯಲಿರುವ ಪ್ರತಿಭಟನಾ ಧರಣಿಗೆ ವ್ಯಾಪಕ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚೆತ್ತುಕೊಂಡಿರುವ ಆಡಳಿತಗಾರರು, ಮುಖ್ಯ ಚುನಾವಣಾ ಆಯೋಗದ ಕಚೇರಿ ಸೇರಿದಂತೆ ಪ್ರಮುಖ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಭದ್ರತೆಯನ್ನು ನಿಯೋಜಿಸಿದ್ದಾರೆ.

ಇದನ್ನೂ ಓದಿ : ಬಿಜೆಪಿ-ಆರ್ಎಸ್ಎಸ್ ಹೇಡಿತನ ಬಯಲಾಗಿದೆ : ಖರ್ಗೆ

ಆಡಳಿತ ಪಕ್ಷದ ಕ್ರಮಗಳು ಮತ್ತು ಚುನಾವಣಾ ಸಂಸ್ಥೆಯ ಕಾರ್ಯವೈಖರಿಯನ್ನು ಬಲವಾಗಿ ಖಂಡಿಸಲು ದೇಶದ ಪ್ರಮುಖ ವಿಪಕ್ಷ ನಾಯಕರು ಈ ಸಭೆ ಹಾಗೂ ಪ್ರತಿಭಟನೆಯಲ್ಲಿ ಸಕ್ರಿಯವಾಗಿ ಭಾಗವಹಿಸಲಿದ್ದು, ಇದು ರಾಷ್ಟ್ರೀಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸುವ ನಿರೀಕ್ಷೆಯಿದೆ.
ದೇಶದ ಅತ್ಯುನ್ನತ ಸಾಂವಿಧಾನಿಕ ಸಂಸ್ಥೆಗಳು ನಿಷ್ಪಕ್ಷಪಾತವಾಗಿ ಮತ್ತು ಪಾರದರ್ಶಕವಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಯಾಗಿ ಉಳಿಯಲು ಸಾಧ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಚುನಾವಣಾ ಆಯೋಗದಂತಹ ಸ್ವಾಯತ್ತ ಸಂಸ್ಥೆಗಳ ಮೇಲೂ ರಾಜಕೀಯ ಒತ್ತಡದ ಆರೋಪಗಳು ಕೇಳಿಬರುತ್ತಿರುವುದು ಮತ್ತು ಪ್ರಮುಖ ನೀತಿ-ಪ್ರಕ್ರಿಯೆಗಳ ಬಗ್ಗೆ ವಿಪಕ್ಷಗಳ ತೀವ್ರ ಆಕ್ಷೇಪಗಳು ವ್ಯಕ್ತವಾಗುತ್ತಿರುವುದು ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಅಲುಗಾಡಿಸುತ್ತಿದೆ.

ಹೀಗಾಗಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವಿನ ಇಂತಹ ಸಂಘರ್ಷಗಳು ಕೇವಲ ರಾಜಕೀಯ ಪಟ್ಟುಗಳಿಗೆ ಸೀಮಿತವಾಗದೆ, ಜನಸಾಮಾನ್ಯರಲ್ಲಿ ಸಾಂವಿಧಾನಿಕ ಸಂಸ್ಥೆಗಳ ಮೇಲಿರುವ ವಿಶ್ವಾಸವನ್ನು ಉಳಿಸುವ ನಿಟ್ಟಿನಲ್ಲಿ ಆಯೋಗವು ಸಂಪೂರ್ಣ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವುದು ಅತ್ಯಂತ ಅವಶ್ಯಕವಾಗಿದೆ.