☔ Weather
Bengaluru: ☁️ 22°C | AQI 53
Mysore: ☁️ 22°C | AQI 55
Mangalore: ☁️ 26°C | AQI 87
Bengaluru: ☁️ 22°C | AQI 53

SIDDARAMAIAH: ಸಿದ್ದರಾಮಯ್ಯ – ಜಮೀರ್ ಭೇಟಿ: ಕಾಂಗ್ರೆಸ್ ಒಳಗೆ ಹೊಸ ಲೆಕ್ಕಾಚಾರ ಶುರು

Image of Siddaramaiah with Zameer Ahmed khan

ಬೆಂಗಳೂರು : ಸಚಿವ ಜಮೀರ್ ಅಹ್ಮದ್ ಖಾನ್ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದಾರೆ. ಈ ಭೇಟಿ ರಾಜ್ಯ ಕಾಂಗ್ರೆಸ್ ವಲಯದಲ್ಲಿ ಹೊಸ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಹುದ್ದೆಯಿಂದ ನಿರ್ಗಮಿಸಿದ ನಂತರ ಪಕ್ಷದ ಆಂತರಿಕ ವಲಯದಲ್ಲಿ ಹಲವು ರಾಜಕೀಯ ಬೆಳವಣಿಗೆಗಳು ನಡೆಯುತ್ತಿದ್ದು, ಆ ಹಿನ್ನೆಲೆಯಲ್ಲಿ ಈ ಭೇಟಿಗೆ ಮಹತ್ವ ಬಂದಿದೆ.

ಮುನಿಸು ಮರೆತ ಟಗರು !

ಸಿದ್ದರಾಮಯ್ಯ ಅವರಿಗೆ ಅತ್ಯಂತ ಆಪ್ತರಾಗಿದ್ದ ಕೆಲವು ನಾಯಕರು ಇತ್ತೀಚೆಗೆ ಅಂತರ ಕಾಯ್ದುಕೊಳ್ಳುತ್ತಿರುವ ಬೆಳವಣಿಗೆ ಗಮನ ಸೆಳೆಯುತ್ತಿದೆ. ಮೈಸೂರಿನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕ್ರಮಕ್ಕೆ ಸಚಿವ ಎಚ್.ಸಿ. ಮಹದೇವಪ್ಪ ಗೈರಾಗಿದ್ದು ಚರ್ಚೆಗೆ ಕಾರಣವಾಗಿತ್ತು. ಜೊತೆಗೆ ಸತೀಶ್ ಜಾರಕಿಹೊಳಿ ಅವರ ನಡೆಗಳು ಕೂಡ ಪಕ್ಷದ ಒಳಗಿನ ಲೆಕ್ಕಾಚಾರಗಳು ಬದಲಾಗುತ್ತಿವೆಯೇ ಎಂಬ ಪ್ರಶ್ನೆ ಹುಟ್ಟುಹಾಕಿವೆ. ಈ ಸಂದರ್ಭದಲ್ಲಿ ಜಮೀರ್ ಅವರು ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದು, ಇಬ್ಬರ ನಡುವೆ ಯಾವ ವಿಷಯಗಳ ಕುರಿತು ಮಾತುಕತೆ ನಡೆದಿದೆ ಎಂಬುದು ಅಧಿಕೃತವಾಗಿ ಬಹಿರಂಗವಾಗಿಲ್ಲವಾದರೂ, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಆಂತರಿಕ ರಾಜಕೀಯದ ಮೇಲೆ ಈ ಭೇಟಿ ಯಾವ ಪರಿಣಾಮ ಬೀರಲಿದೆ ಎಂಬ ಕುತೂಹಲ ರಾಜಕೀಯ ವಲಯದಲ್ಲಿ ಹೆಚ್ಚಾಗಿದೆ.

ಇದನ್ನೂ ಓದಿ: ಸತ್ಯ ನಮ್ಮ ಪರವಿದೆ, ನಾವು ಹೆದರಲ್ಲ : ದೆಹಲಿ ಪೊಲೀಸರ ಕ್ರಮಕ್ಕೆ ಡಿಕೆ ತೀವ್ರ ಖಂಡನೆ

ಸಿದ್ದರಾಮಯ್ಯ ಅವರು ಅಧಿಕಾರದಿಂದ ಕೆಳಗಿಳಿದ ನಂತರ ಕಾಂಗ್ರೆಸ್ ಹೈಕಮಾಂಡ್ ಹೊಸ ನಾಯಕತ್ವದ ಸಮೀಕರಣವನ್ನು ರೂಪಿಸುವ ಪ್ರಯತ್ನದಲ್ಲಿದೆ. ಆ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರ ಆಪ್ತ ಬಳಗವೇ ಒಡೆದಂತೆ ಕಾಣುತ್ತಿರುವುದು ಪಕ್ಷಕ್ಕೆ ಆಂತರಿಕವಾಗಿ ಹಿನ್ನಡೆ ತರಬಹುದು. ಮಹದೇವಪ್ಪ, ಜಾರಕಿಹೊಳಿ ಅವರಂತಹ ಪ್ರಮುಖ ಅಹಿಂದ ನಾಯಕರ ಅಂತರ ಸಿದ್ದರಾಮಯ್ಯ ಅವರ ಪ್ರಭಾವ ಕಡಿಮೆಯಾಗುತ್ತಿದೆಯೇ ಎಂಬ ಸಂದೇಶವನ್ನು ರವಾನಿಸುತ್ತದೆ. ಆದರೆ ಜಮೀರ್ ಅಹ್ಮದ್ ಖಾನ್ ಅವರು ಸಿದ್ದರಾಮಯ್ಯ ಅವರಿಗೆ ಆರಂಭದಿಂದಲೂ ನಿಷ್ಠರಾಗಿ ಗುರುತಿಸಿಕೊಂಡವರು. ಅವರ ಈ ಭೇಟಿ ಸಿದ್ದರಾಮಯ್ಯ ಅವರ ಬಣ ಇನ್ನೂ ಸಕ್ರಿಯವಾಗಿದೆ ಮತ್ತು ಮುಂದಿನ ರಾಜಕೀಯ ದಾಳಗಳಿಗೆ ಸಿದ್ಧತೆ ನಡೆಸುತ್ತಿದೆ ಎಂಬುದನ್ನು ಸೂಚಿಸುತ್ತದೆ.

ಕಾಂಗ್ರೆಸ್ ಒಳಗೆ ಸಿಎಂ ಬದಲಾವಣೆ, ಸಂಪುಟ ಪುನಾರಚನೆ ಮತ್ತು ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳ ಹಿನ್ನೆಲೆಯಲ್ಲಿ ಪ್ರತಿಯೊಂದು ಭೇಟಿಯೂ ತನ್ನದೇ ಆದ ರಾಜಕೀಯ ಅರ್ಥವನ್ನು ಪಡೆದುಕೊಳ್ಳುತ್ತದೆ. ಜಮೀರ್ ಅವರು ಅಲ್ಪಸಂಖ್ಯಾತ ಸಮುದಾಯದ ಪ್ರಬಲ ನಾಯಕರಾಗಿದ್ದು, ಸಿದ್ದರಾಮಯ್ಯ ಅವರ ಅಹಿಂದ ಮತಬ್ಯಾಂಕ್ ನಲ್ಲಿ ಅವರ ಪಾತ್ರ ಮಹತ್ವದ್ದು. ಹೀಗಾಗಿ ಈ ಭೇಟಿ ಕೇವಲ ವೈಯಕ್ತಿಕವಲ್ಲ, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಒಳಗೆ ನಡೆಯಬಹುದಾದ ಅಧಿಕಾರದ ಚದುರಂಗಾಟದ ಮುನ್ಸೂಚನೆಯೂ ಆಗಿರಬಹುದು.