ಪುರಸಭೆ ಖಜಾನೆ ಖಾಲಿಯಾಗಿದೆಯೇ? ಕೆ.ಆರ್.ಪೇಟೆ ಪುರಸಭೆ ನೀಡಿದ್ದ ಕೇವಲ 18 ಸಾವಿರ ರೂಪಾಯಿ ಚೆಕ್ ಬೌನ್ಸ್ ಆಗಿರುವುದು ರಾಜ್ಯದಲ್ಲಿ ಸರ್ಕಾರದ ಆರ್ಥಿಕ ಬಿಕ್ಕಟ್ಟಿನ ಚರ್ಚೆ ನಡುವೆಯೇ ಬೆಳಕಿಗೆ ಬಂದಿದೆ. ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಪುರಸಭೆಯ ಮುಖ್ಯಾಧಿಕಾರಿ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಜ್ಞಾನ ಭಾರತಿ ಪ್ರಕಾಶನ ಸಂಸ್ಥೆಗೆ ಜಾಹೀರಾತು ಮೊತ್ತದ ಬಾಕಿ ಪಾವತಿಗಾಗಿ 18,093/- ರೂಪಾಯಿ ಚೆಕ್ ನೀಡಿದ್ದರು. ಈ ಘಟನೆ ಆಡಳಿತ ವ್ಯವಸ್ಥೆಯ ಹಣಕಾಸು ಸ್ಥಿತಿಗೆ ಕನ್ನಡಿ ಹಿಡಿದಂತಾಗಿದೆ.
ಪ್ರಕಾಶನ ಸಂಸ್ಥೆ ಆ ಚೆಕ್ ಅನ್ನು ಬ್ಯಾಂಕಿಗೆ ಸಲ್ಲಿಸಿದಾಗ ಖಾತೆಯಲ್ಲಿ ಅಗತ್ಯ ಹಣವಿಲ್ಲದ ಕಾರಣ ಚೆಕ್ ವಾಪಸ್ ಬಂದಿದೆ. ಸಾರ್ವಜನಿಕ ಸೇವೆ ಮಾಡುವ ಸ್ಥಳೀಯ ಸಂಸ್ಥೆಯೊಂದು ಇಂತಹ ಸಣ್ಣ ಮೊತ್ತವನ್ನು ಕೂಡ ಪಾವತಿಸಲು ಸಾಧ್ಯವಾಗದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಇದು ಸರ್ಕಾರಿ ಕಚೇರಿಗಳ ಕಾರ್ಯನಿರ್ವಹಣೆ ಮತ್ತು ಹಣಕಾಸು ನಿರ್ವಹಣೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ರಾಜ್ಯದ ಖಜಾನೆ ಸ್ಥಿತಿ ಮತ್ತು ಅನುದಾನ ಬಳಕೆ ಬಗ್ಗೆ ಆರ್ಥಿಕ ಇಲಾಖೆ ಇತ್ತೀಚೆಗೆ ನೀಡಿದ್ದ ಎಚ್ಚರಿಕೆಗೆ ಈ ಬೆಳವಣಿಗೆ ಪುಷ್ಟಿ ನೀಡಿದೆ. ಸ್ಥಳೀಯ ಆಡಳಿತ ಸಂಸ್ಥೆಯ ಖಾತೆಯಲ್ಲೇ ನಗದು ಕೊರತೆ ಉಂಟಾಗಿರುವುದು ಪುರಸಭೆಯ ನಿರ್ವಹಣೆ ಮತ್ತು ಹಣಕಾಸು ಶಿಸ್ತಿನ ಬಗ್ಗೆ ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.
ಈ ಪ್ರಕರಣವನ್ನು ಕೇವಲ 18 ಸಾವಿರ ರೂಪಾಯಿ ಚೆಕ್ ಬೌನ್ಸ್ ಎಂಬ ಸಣ್ಣ ಘಟನೆಯಾಗಿ ನೋಡದೆ ರಾಜ್ಯದ ಸ್ಥಳೀಯ ಆಡಳಿತ ವ್ಯವಸ್ಥೆಯ ಆರ್ಥಿಕ ಬಿಕ್ಕಟ್ಟಿನ ಮುನ್ಸೂಚನೆ. ಸಾಮಾನ್ಯವಾಗಿ ಪುರಸಭೆಗಳು ತಮ್ಮ ಆಂತರಿಕ ಆದಾಯವಾದ ಆಸ್ತಿ ತೆರಿಗೆ, ನೀರಿನ ಶುಲ್ಕ, ವ್ಯಾಪಾರ ಪರವಾನಗಿ ಮತ್ತು ಮಾರುಕಟ್ಟೆ ಬಾಡಿಗೆಗಳಿಂದಲೇ ದಿನನಿತ್ಯದ ಖರ್ಚುಗಳನ್ನು ನಿಭಾಯಿಸಬೇಕು, ಆದರೆ ಬಹುತೇಕ ಪುರಸಭೆಗಳಲ್ಲಿ ತೆರಿಗೆ ಸಂಗ್ರಹ ಅತ್ಯಂತ ಕಡಿಮೆ ಇದ್ದು ಶೇಕಡಾ ಎಂಬತ್ತಕ್ಕಿಂತ ಹೆಚ್ಚು ಅನುದಾನಕ್ಕಾಗಿ ರಾಜ್ಯ ಸರ್ಕಾರವನ್ನೇ ಅವಲಂಬಿಸಿವೆ.
ರಾಜ್ಯದಲ್ಲಿ ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕಾಗಿ ಸಾವಿರಾರು ಕೋಟಿ ರೂಪಾಯಿ ವೆಚ್ಚವಾಗುತ್ತಿದ್ದು, ಇದರಿಂದಾಗಿ ಇತರ ಅಭಿವೃದ್ಧಿ ಕಾಮಗಾರಿ ಮತ್ತು ಸ್ಥಳೀಯ ಸಂಸ್ಥೆಗಳ ನಿರ್ವಹಣಾ ಅನುದಾನಕ್ಕೆ ಕತ್ತರಿ ಬೀಳುತ್ತಿದೆ ಎಂಬ ಮಾತುಗಳು ಈಗಾಗಲೇ ಆರ್ಥಿಕ ಇಲಾಖೆಯ ವರದಿಗಳಲ್ಲಿ ವ್ಯಕ್ತವಾಗಿವೆ. ಇಂತಹ ಪರಿಸ್ಥಿತಿಯಲ್ಲಿ ಒಂದು ಪುರಸಭೆ ಜಾಹೀರಾತು ಬಾಕಿ ಪಾವತಿಸಲು ಕೂಡ ಹಣ ಹೊಂದಿಲ್ಲ ಎಂದರೆ ಅದು ಸರ್ಕಾರದ ಆದ್ಯತೆಗಳ ಬಗ್ಗೆ ಪ್ರಶ್ನೆ ಮೂಡಿಸುತ್ತದೆ.
ಇದರಿಂದ ಖಾಸಗಿ ಪೂರೈಕೆದಾರರು, ಗುತ್ತಿಗೆದಾರರು ಮತ್ತು ಮಾಧ್ಯಮ ಸಂಸ್ಥೆಗಳು ಸರ್ಕಾರಿ ಕೆಲಸ ಮಾಡಲು ಹಿಂಜರಿಯುವಂತಾಗುತ್ತದೆ, ಏಕೆಂದರೆ ಪಾವತಿ ಭದ್ರತೆ ಇಲ್ಲ ಎಂಬ ಭಾವನೆ ಮೂಡುತ್ತದೆ. ಕಾನೂನು ಪ್ರಕಾರ ಚೆಕ್ ಬೌನ್ಸ್ ಗಂಭೀರ ವಿಷಯವಾಗಿದ್ದು, ಸರ್ಕಾರಿ ಸಂಸ್ಥೆಯೇ ಈ ರೀತಿ ಎಡವುವುದು ಆಡಳಿತದ ವಿಶ್ವಾಸಾರ್ಹತೆಗೆ ದೊಡ್ಡ ಹೊಡೆತ. ಆದ್ದರಿಂದ ಸರ್ಕಾರ ತಕ್ಷಣ ಪುರಸಭೆಗಳ ಹಣಕಾಸು ಲೆಕ್ಕಪರಿಶೋಧನೆ ನಡೆಸಿ, ಆದಾಯ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಬೇಕು, ಅನುದಾನ ಬಿಡುಗಡೆಯಲ್ಲಿ ಪಾರದರ್ಶಕತೆ ತರಬೇಕು.




