☔ Weather
Bengaluru: ☁️ 21°C | AQI 59
Mysore: ☁️ 21°C | AQI 63
Mangalore: ☁️ 26°C | AQI 69
Bengaluru: ☁️ 21°C | AQI 59

CRUDE OIL : 140 ಕೋಟಿ ಭಾರತೀಯರ ಹಿತಾಸಕ್ತಿಯೇ ಮುಖ್ಯ: ರಷ್ಯಾದಿಂದ ಕಚ್ಚಾ ತೈಲ ಆಮದು ನಿಲ್ಲಲ್ಲ

ದೇಶದ 140 ಕೋಟಿ ನಾಗರಿಕರ ಇಂಧನ ಅಗತ್ಯಗಳನ್ನು ಪೂರೈಸುವುದು ಹಾಗೂ ಅವರ ಕ್ಷೇಮಾಭಿವೃದ್ಧಿಯನ್ನು ಕಾಯುವುದೇ ಸರ್ಕಾರದ ಪ್ರಥಮ ಆದ್ಯತೆಯಾಗಿದ್ದು, ರಷ್ಯಾದಿಂದ ಕಚ್ಚಾ ತೈಲ ಖರೀದಿ ಪ್ರಕ್ರಿಯೆಯನ್ನು ಸದ್ಯಕ್ಕೆ ಸ್ಥಗಿತಗೊಳಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸ್ಪಷ್ಟಪಡಿಸಿದ್ದಾರೆ . ಮಂಗಳವಾರ ಆಯೋಜಿಸಲಾಗಿದ್ದ ‘ಬಿಸಿನೆಸ್ ಚೇಂಜ್ ಮೇಕರ್ ಆವಾರ್ಡ್ಸ್’ ವೇದಿಕೆಯಲ್ಲಿ ಮಾತನಾಡಿದ ಅವರು, ದಿಢೀರನೆ ತೈಲ ಪೂರೈಕೆದಾರ ಮೂಲಗಳನ್ನು ಬದಲಾಯಿಸಿದರೆ ಜಾಗತಿಕ ಮಟ್ಟದಲ್ಲಿ ತೈಲ ಕೊರತೆ ತಲೆದೋರಿ ಬೆಲೆಗಳು ಗಗನಕ್ಕೇರಲಿವೆ ಎಂದು ಆತಂಕ ವ್ಯಕ್ತಪಡಿಸಿದರು. ಪ್ರತಿಯೊಂದು ಸಂಸ್ಕರಣಾಗಾರವೂ ನಿರ್ದಿಷ್ಟ ತಾಂತ್ರಿಕ ವಿನ್ಯಾಸ ಹೊಂದಿರುವುದರಿಂದ ಪರ್ಯಾಯ ಇಂಧನವನ್ನು ತಕ್ಷಣವೇ ಬಳಸುವುದು ಪ್ರಾಯೋಗಿಕವಲ್ಲ. ಅಮೆರಿಕದ ನಿರ್ಬಂಧಗಳು ಮತ್ತು ಮಧ್ಯಪ್ರಾಚ್ಯದ ಪ್ರಸ್ತುತ ಬಿಕ್ಕಟ್ಟುಗಳ ನಡುವೆಯೂ ಭಾರತ ತನ್ನ ರಾಷ್ಟ್ರೀಯ ಹಿತಾಸಕ್ತಿಗೆ ಅನುಗುಣವಾಗಿ ಹೆಜ್ಜೆ ಇಡಲಿದೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

ಇನ್ನೊಂದೆಡೆ, ರಷ್ಯಾದಿಂದ ಇಂಧನ ಆಮದನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವಂತೆ ಉಕ್ರೇನ್ ಅಧ್ಯಕ್ಷ ವ್ಲಾಡಿಮಿರ್ ಝೆಲೆನ್‌ಸ್ಕಿ ಅವರು ಭಾರತ ಹಾಗೂ ಚೀನಾ ದೇಶಗಳಿಗೆ ಮತ್ತೊಮ್ಮೆ ಬಹಿರಂಗ ಮನವಿ ಮಾಡಿದ್ದಾರೆ. ಭಾರತ ಮತ್ತು ಚೀನಾ ತೈಲ ಖರೀದಿಯನ್ನು ಬಂದ್ ಮಾಡಿದರೆ ರಷ್ಯಾದ ಆರ್ಥಿಕ ಮೂಲಕ್ಕೆ ಹೊಡೆತ ಬಿದ್ದು ಯುದ್ಧ ಕೊನೆಗೊಳ್ಳಲು ನೆರವಾಗಲಿದೆ ಎಂದು ಅವರು ಪ್ರತಿಪಾದಿಸಿದ್ದಾರೆ. ಗಮನಾರ್ಹ ಸಂಗತಿಯೆಂದರೆ, 2022ರಲ್ಲಿ ಯುದ್ಧ ಆರಂಭವಾಗುವ ಮುನ್ನ ಭಾರತ ರಷ್ಯಾದಿಂದ ಶೇಕಡಾ ಒಂದಕ್ಕಿಂತಲೂ ಕಡಿಮೆ ಕಚ್ಚಾ ತೈಲವನ್ನು ತರಿಸಿಕೊಳ್ಳುತ್ತಿತ್ತು. ಆದರೆ ಪಾಶ್ಚಿಮಾತ್ಯ ದೇಶಗಳ ಕಠಿಣ ಉಪಕ್ರಮಗಳ ಬಳಿಕ ರಷ್ಯಾ ಭಾರೀ ರಿಯಾಯಿತಿ ದರದಲ್ಲಿ ಇಂಧನ ಪೂರೈಸಲು ಮುಂದೆ ಬಂದಿದ್ದರಿಂದ, ಭಾರತ ತನ್ನ ಆರ್ಥಿಕ ಮತ್ತು ಇಂಧನ ಅಗತ್ಯಗಳನ್ನು ಸರಿದೂಗಿಸಲು ರಷ್ಯಾದಿಂದ ಹೆಚ್ಚಿನ ಪ್ರಮಾಣದ ಆಮದನ್ನು ಮುಂದುವರಿಸಿಕೊಂಡು ಬಂದಿದೆ.

ಜಾಗತಿಕ ರಾಜಕೀಯದಲ್ಲಿ ಭಾರತ ತನ್ನ ಸ್ವತಂತ್ರ ವಿದೇಶಾಂಗ ಮತ್ತು ಆರ್ಥಿಕ ನೀತಿಯನ್ನು ಎತ್ತಿಹಿಡಿಯುತ್ತಿರುವುದಕ್ಕೆ ಈ ನಿರ್ಧಾರ ಸ್ಪಷ್ಟ ನಿದರ್ಶನವಾಗಿದೆ. ಅಮೆರಿಕ ಮತ್ತು ಪಾಶ್ಚಿಮಾತ್ಯ ಒಕ್ಕೂಟಗಳ ತೀವ್ರ ಒತ್ತಡ ಹಾಗೂ ಉಕ್ರೇನ್ ಅಧ್ಯಕ್ಷರ ಮನವಿಗಳಿದ್ದರೂ, ಸ್ವದೇಶಿ ಗ್ರಾಹಕರ ಮೇಲೆ ಹಣದುಬ್ಬರದ ಬಿಸಿ ತಟ್ಟದಂತೆ ತಡೆಯುವುದು ಯಾವುದೇ ಜವಾಬ್ದಾರಿಯುತ ಸರ್ಕಾರಕ್ಕೆ ಅತ್ಯಗತ್ಯ. ರಷ್ಯಾದಿಂದ ಸಿಗುತ್ತಿರುವ ರಿಯಾಯಿತಿ ದರದ ತೈಲ ಭಾರತದ ಆರ್ಥಿಕತೆಗೆ ಭಾರಿ ನೆರವು ನೀಡುತ್ತಿದ್ದು, ದೇಶೀಯ ಮಾರುಕಟ್ಟೆಯಲ್ಲಿ ಇಂಧನ ದರ ನಿಯಂತ್ರಣದಲ್ಲಿಡಲು ಸಹಾಯ ಮಾಡಿದೆ. ಅಂತಾರಾಷ್ಟ್ರೀಯ ರಾಜಕೀಯದ ಸಂಘರ್ಷಕ್ಕಿಂತ ದೇಶದ 140 ಕೋಟಿ ಜನರ ಆರ್ಥಿಕ ಭದ್ರತೆಯೇ ಮುಖ್ಯ ಎಂಬ ಕೇಂದ್ರ ಸರ್ಕಾರದ ನಿಲುವು ಪ್ರ ಪ್ರಸ್ತುತ ಜಾಗತಿಕ ಬಿಕ್ಕಟ್ಟಿನ ಸನ್ನಿವೇಶದಲ್ಲಿ ಅತ್ಯಂತ ಜಾಣತನದ ಹಾಗೂ ಕಾರ್ಯಸಾಧ್ಯವಾದ ಹೆಜ್ಜೆಯಾಗಿದೆ.