TIPPU SULTAN: ಟಿಪ್ಪು ವಿಡಿಯೋಗೆ ಪಾಕ್ ಗೀತೆ – ಕೆಟ್ಟ ಕ್ರಿಮಿಗಳ ವಿರುದ್ಧ ದೇಶದ್ರೋಹ ಕೇಸ್ !

ಚಿಕ್ಕಮಗಳೂರು ನಗರ ಪೊಲೀಸರು ಪಾಕಿಸ್ತಾನ ಬೆಂಬಲಿತ ಹಾಡಿನೊಂದಿಗೆ ಟಿಪ್ಪು ಸುಲ್ತಾನ್ ಕಟೌಟ್ ವಿಡಿಯೋ ಹಾಕಿದ ಪ್ರಕರಣದಲ್ಲಿ ಸ್ವಯಂ ಪ್ರೇರಿತ ಎಫ್ಐಆರ್ ದಾಖಲಿಸಿದ್ದು ಪವರ್ ಟಿಪ್ಪು ಬಾಯ್ಸ್ ಹೆಸರಿನ ಇನ್‌ಸ್ಟಾಗ್ರಾಮ್ ಖಾತೆ ವಿರುದ್ಧ ಕ್ರಮ ಜರುಗಿಸಿದ್ದಾರೆ.

ಈದ್ ಮಿಲಾದ್ ಆಚರಣೆ ನಿಮಿತ್ತ ನಗರದ ಟಿಪ್ಪು ನಗರ ಬಡಾವಣೆಯಲ್ಲಿ ಟಿಪ್ಪು ಸುಲ್ತಾನ್ ಭಾವಚಿತ್ರದ ಕಟೌಟ್ ಅಳವಡಿಸಲಾಗಿತ್ತು. ಅದೇ ಕಟೌಟಿನ ದೃಶ್ಯವನ್ನು ಸೆರೆಹಿಡಿದು ಪಾಕ್ ಪರ ಗೀತೆಯನ್ನು ಹಿನ್ನೆಲೆಯಾಗಿ ಸೇರಿಸಿ ಇನ್‌ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡಲಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ದೇಶ ವಿರೋಧಿ ಚಟುವಟಿಕೆ ಹಾಗೂ ಕೋಮು ಭಾವನೆ ಕೆರಳಿಸುವ ಉದ್ದೇಶದ ಆರೋಪದ ಅಡಿ ಪ್ರಕರಣ ದಾಖಲಾಗಿದೆ. ವಿಡಿಯೋ ನಿರ್ಮಿಸಿದವರು, ಪೋಸ್ಟ್ ಮಾಡಿದವರು ಮತ್ತು ಉದ್ದೇಶದ ಬಗ್ಗೆ ತನಿಖೆ ನಡೆಯುತ್ತಿದೆ.

ಇಂತಹ ಪ್ರಕರಣಗಳು ಕೇವಲ ಒಂದು ವಿಡಿಯೋ ಅಥವಾ ಹಾಡಿನ ವಿಚಾರವಾಗಿ ಉಳಿಯುವುದಿಲ್ಲ. ಟಿಪ್ಪು ಸುಲ್ತಾನ್ ಹೆಸರು ಈಗಾಗಲೇ ರಾಜ್ಯದಲ್ಲಿ ಸೂಕ್ಷ್ಮ ವಿಷಯ. ಅವರ ಕುರಿತ ಯಾವುದೇ ಕಾರ್ಯಕ್ರಮ, ಕಟೌಟ್, ಘೋಷಣೆಗಳು ಬಹುಬೇಗ ರಾಜಕೀಯ ಮತ್ತು ಕೋಮು ಚರ್ಚೆಗೆ ಎಳೆದುಕೊಳ್ಳುತ್ತವೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಪರ ಹಾಡನ್ನು ಜೋಡಿಸಿರುವುದು ಹೆಚ್ಚು ಗಂಭೀರ ಸ್ವರೂಪ ಪಡೆದುಕೊಂಡಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವ್ಯೂಸ್ ಮತ್ತು ಫಾಲೋವರ್ಸ್ ಗಳಿಸುವ ಭರದಲ್ಲಿ ಯುವಕರು ಇಂತಹ ಪ್ರಚೋದನಕಾರಿ ಕಂಟೆಂಟ್ ಮಾಡುವುದು ಹೆಚ್ಚಾಗುತ್ತಿದೆ. ಒಂದು ಹಾಡನ್ನು ಬಳಸಿದರೆ ವಿಡಿಯೋ ವೈರಲ್ ಆಗುತ್ತದೆ ಎಂಬ ಲೆಕ್ಕಾಚಾರದಲ್ಲಿ ಕಾನೂನಿನ ಪರಿಣಾಮಗಳ ಅರಿವಿಲ್ಲದೆ ವರ್ತಿಸುತ್ತಾರೆ. ಆದರೆ ಭಾರತದಲ್ಲಿ ದೇಶ ವಿರೋಧಿ ಎಂದು ಪರಿಗಣಿಸಬಹುದಾದ ಹಾಡು ಅಥವಾ ಘೋಷಣೆಯನ್ನು ಬಳಸುವುದು ಐಟಿ ಕಾಯ್ದೆ ಮತ್ತು ಭಾರತೀಯ ನ್ಯಾಯ ಸಂಹಿತೆಯಡಿ ಗಂಭೀರ ಅಪರಾಧವಾಗುತ್ತದೆ.

ಪೊಲೀಸರು ಸುಮೋಟೋ ಕೇಸ್ ದಾಖಲಿಸಿರುವುದು ಸರಿಯಾದ ಹೆಜ್ಜೆ. ಇದು ಇತರರಿಗೆ ಎಚ್ಚರಿಕೆಯ ಸಂದೇಶ ಕೂಡ. ಹಬ್ಬದ ಸಂದರ್ಭದಲ್ಲಿ ಹಾಕುವ ಕಟೌಟ್ ಗಳಿಗೆ ಅನುಮತಿ, ಧ್ವನಿವರ್ಧಕ ಬಳಕೆ ಮತ್ತು ಸಾಮಾಜಿಕ ಜಾಲತಾಣದಲ್ಲಿ ಹಾಕುವ ವಿಡಿಯೋಗಳ ಬಗ್ಗೆಯೂ ಸ್ಥಳೀಯ ಆಡಳಿತ ಮತ್ತು ಧಾರ್ಮಿಕ ಮುಖಂಡರು ಜವಾಬ್ದಾರಿ ವಹಿಸಬೇಕಾಗುತ್ತದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತರುವ ಕೆಲಸ ನಡೆಯಬಾರದು.