☔ Weather
Bengaluru: 🌤️ 24°C | AQI 156
Mysore: ☀️ 22°C | AQI 122
Mangalore: ☀️ 26°C | AQI 144
Bengaluru: 🌤️ 24°C | AQI 156
☔ Weather
Bengaluru: 🌤️ 24°C | AQI 156
Mysore: ☀️ 22°C | AQI 122
Mangalore: ☀️ 26°C | AQI 144
Bengaluru: 🌤️ 24°C | AQI 156

MEKEDATU : ಮೇಕೆದಾಟುಗೆ ತಮಿಳುನಾಡು ಕಾಂಗ್ರೆಸ್ ತೀವ್ರ ಆಕ್ಷೇಪ, ಕೇಂದ್ರ ಮಧ್ಯಪ್ರವೇಶಕ್ಕೆ ಟಾಗೋರ್ ಆಗ್ರಹ

Image of Mekedatu debate
ಮೇಕೆದಾಟುವಿನಲ್ಲಿ (Mekedatu) ಅಣೆಕಟ್ಟು ಕಟ್ಟುವ ಯೋಜನೆಗೆ ತಮಿಳುನಾಡು ಕಾಂಗ್ರೆಸ್ ಅಧ್ಯಕ್ಷ ಮಾಣಿಕ್ಕಂ ಟಾಗೋರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮುಖ್ಯಾಂಶಗಳು

  • ಮೇಕೆದಾಟುಗೆ ತಮಿಳುನಾಡು ತಗಾದೆ
  • ಮಾಣಿಕ್ಕಂ ಟಾಗೋರ್ ಕಿರಿಕ್
  • ಕೇಂದ್ರದ ಮಧ್ಯಪ್ರವೇಶಕ್ಕೆ ಆಗ್ರಹ

ತಮಿಳುನಾಡು: ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟುವಿನಲ್ಲಿ (Mekedatu) ಅಣೆಕಟ್ಟು ಕಟ್ಟುವ ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಯೋಜನೆಗೆ ತಮಿಳುನಾಡು ಕಾಂಗ್ರೆಸ್ ಅಧ್ಯಕ್ಷ ಹಾಗೂ ಸಂಸದ ಮಾಣಿಕ್ಕಂ ಟಾಗೋರ್ ಬಲವಾದ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಅಣೆಕಟ್ಟು ನಿರ್ಮಾಣವಾದರೆ ತಂಜಾವೂರು ಡೆಲ್ಟಾ ಪ್ರದೇಶದ ಕೃಷಿ ಚಟುವಟಿಕೆಗೆ ದೊಡ್ಡ ಹೊಡೆತ ಬೀಳಲಿದೆ. ತಮಿಳುನಾಡಿನ ಲಕ್ಷಾಂತರ ರೈತರಿಗೆ ನೀರು ಸಿಗದೆ ಸಂಕಷ್ಟ ಎದುರಾಗಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ತನ್ನ ಅಗತ್ಯದ ಹೆಸರಿನಲ್ಲಿ ಇಂತಹ ಮಹತ್ವದ ಯೋಜನೆಯನ್ನು ಮುಂದಕ್ಕೆ ಕೊಂಡೊಯ್ಯುವುದು ಸರಿಯಲ್ಲ ಎಂಬುದು ಅವರ ನಿಲುವು.

ತಮಿಳುನಾಡು & ಪುದುಚೇರಿ ಒಪ್ಪಿಗೆ ಅಗತ್ಯ !

ಮೇಕೆದಾಟು ಕಾಮಗಾರಿ ಆರಂಭಿಸುವ ಮೊದಲು ಕಾವೇರಿ ಜಲಾನಯನ ಪ್ರದೇಶದ ಕೆಳಭಾಗದಲ್ಲಿರುವ ತಮಿಳುನಾಡು ಮತ್ತು ಪುದುಚೇರಿ ರಾಜ್ಯಗಳ ಒಪ್ಪಿಗೆ ಪಡೆಯುವುದು ಅನಿವಾರ್ಯ ಎಂದು ಟಾಗೋರ್ ಸ್ಪಷ್ಟಪಡಿಸಿದ್ದಾರೆ. ನೆರೆ ರಾಜ್ಯಗಳ ಅಭಿಪ್ರಾಯ ಕೇಳದೆ ಒಂದೇ ಕಡೆಯಿಂದ ನಿರ್ಧಾರ ತೆಗೆದುಕೊಂಡು ಅಣೆಕಟ್ಟು ಕಟ್ಟಲು ಹೊರಟರೆ ಅದು ಒಕ್ಕೂಟ ವ್ಯವಸ್ಥೆಯ ಮೂಲ ತತ್ವಗಳಿಗೆ ವಿರುದ್ಧವಾಗುತ್ತದೆ ಎಂದು ಅವರು ಟೀಕಿಸಿದ್ದಾರೆ. ಜೊತೆಗೆ ಮೇಕೆದಾಟು ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಮೌನವಾಗಿರುವುದರ ಬಗ್ಗೆಯೂ ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರ ಕೂಡಲೇ ಮಧ್ಯಪ್ರವೇಶ ಮಾಡಿ ತಮಿಳುನಾಡಿನ ಹಿತರಕ್ಷಣೆ ಮಾಡಬೇಕು. ಕಾವೇರಿ ಜಲವಿವಾದ ನ್ಯಾಯಮಂಡಳಿ ಮತ್ತು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪುಗಳನ್ನು ಎರಡೂ ಸರ್ಕಾರಗಳು ಗೌರವಿಸಿ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ : ಸೋನಿಯಾ ಆತ್ಮಕಥೆ ಬಿಡುಗಡೆ: ದೆಹಲಿಯತ್ತ ಸಿದ್ದು & ಡಿಕೆ

ಮೇಕೆದಾಟು ವಿಚಾರ ಕೇವಲ ನೀರಿನ ಯೋಜನೆಯಾಗಿ ಉಳಿದಿಲ್ಲ. ಅದು ಎರಡು ರಾಜ್ಯಗಳ ನಡುವಿನ ರಾಜಕೀಯ ಸಂಘರ್ಷದ ರೂಪ ಪಡೆದುಕೊಳ್ಳುತ್ತಿದೆ. ಕರ್ನಾಟಕದಲ್ಲಿ ಇದು ಕುಡಿಯುವ ನೀರು ಮತ್ತು ವಿದ್ಯುತ್ ಉತ್ಪಾದನೆಯ ಯೋಜನೆ ಎಂಬ ವಾದವಿದ್ದರೆ, ತಮಿಳುನಾಡಿನಲ್ಲಿ ಇದು ಡೆಲ್ಟಾ ರೈತರ ಬದುಕಿನ ಪ್ರಶ್ನೆ ಎಂಬ ಭಾವನೆ ಬಲವಾಗಿದೆ. ಒಂದೇ ಪಕ್ಷದ ಸರ್ಕಾರಗಳು ಎರಡು ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದರೂ ಈ ವಿಚಾರದಲ್ಲಿ ಒಮ್ಮತ ಮೂಡಿಲ್ಲದಿರುವುದು ಕಾಂಗ್ರೆಸ್ ಒಳಗಿನ ಗೊಂದಲವನ್ನು ಬಹಿರಂಗಪಡಿಸುತ್ತದೆ. ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸದೆ ಸುಮ್ಮನಿದ್ದರೆ ವಿವಾದ ಇನ್ನಷ್ಟು ತೀವ್ರವಾಗುವ ಸಾಧ್ಯತೆ ಇದೆ. ನ್ಯಾಯಾಲಯದ ತೀರ್ಪು ಮತ್ತು ನ್ಯಾಯಮಂಡಳಿಯ ಆದೇಶಗಳ ಚೌಕಟ್ಟಿನೊಳಗೆ ಮಾತುಕತೆ ಮೂಲಕವೇ ಪರಿಹಾರ ಕಂಡುಕೊಳ್ಳಬೇಕಾದ ಅನಿವಾರ್ಯತೆ ಈಗ ಎದುರಾಗಿದೆ.