☔ Weather
Bengaluru: 🌤️ 23°C | AQI 156
Mysore: 🌤️ 21°C | AQI 122
Mangalore: ☀️ 26°C | AQI 144
Bengaluru: 🌤️ 23°C | AQI 156
☔ Weather
Bengaluru: 🌤️ 23°C | AQI 156
Mysore: 🌤️ 21°C | AQI 122
Mangalore: ☀️ 26°C | AQI 144
Bengaluru: 🌤️ 23°C | AQI 156

RAHUL GANDHI : ವೋಟ್ ಮಾತ್ರವಲ್ಲ..ಜನರ ಹಕ್ಕುಗಳು ಕಳುವಾಗಿದೆ : ರಾಹುಲ್ ಗಾಂಧಿ

Image of Rahul Gandhi
ಕಲ್ಯಾಣ ಯೋಜನೆಗಳ ಫಲಾನುಭವಿಗಳನ್ನು ಗುರುತಿಸಲು ಆಧಾರ್ ಬದಲು ಮತದಾರರ ಗುರುತಿನ ಚೀಟಿಯನ್ನು ಬಳಸುವ ನಿರ್ಧಾರದ ವಿರುದ್ಧ ರಾಹುಲ್ ಗಾಂಧಿ (Rahul Gandhi) ತೀವ್ರ ವಾಗ್ದಾಳಿ

ಮುಖ್ಯಾಂಶಗಳು

  • ಮತ ಕಳುವು ಸಾಕ್ಷಿ ಸಮೇತ ಹಿಡಿದಿದ್ದೇವೆ
  • ಮತ್ತೆ ರಾಹುಲ್ ಗಾಂಧಿ ಆರೋಪ

ನವದೆಹಲಿ: ಕಲ್ಯಾಣ ಯೋಜನೆಗಳ ಫಲಾನುಭವಿಗಳನ್ನು ಗುರುತಿಸಲು ಆಧಾರ್ ಬದಲು ಮತದಾರರ ಗುರುತಿನ ಚೀಟಿಯನ್ನು ಬಳಸುವ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇದು ಕೇವಲ ಮತಗಳ್ಳತನವಲ್ಲ, ಜನರ ಹಕ್ಕುಗಳ ಕಳ್ಳತನವೂ ಹೌದು ಎಂದು ಅವರು ಎಕ್ಸ್ ಜಾಲತಾಣದಲ್ಲಿ ಆರೋಪಿಸಿದ್ದಾರೆ. ಪಂಚಾಯತ್ ರಾಜ್ ಸಚಿವ ರಾಜೀವ್ ರಂಜನ್ ಸಿಂಗ್ ಅವರು ತಮ್ಮ ಸಚಿವಾಲಯದ ಯೋಜನೆಗಳಿಗೆ ಆಧಾರ್ ಬದಲು ವೋಟರ್ ಐಡಿ ಆಧಾರದಲ್ಲಿ ಹಣಕಾಸು ನೆರವು ನೀಡುವ ಬಗ್ಗೆ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ಫಲಾನುಭವಿಗಳು ಇನ್ನು ಮುಂದೆ ಎಲೆಕ್ಟರ್ಸ್ ಫೋಟೋ ಐಡೆಂಟಿಟಿ ಕಾರ್ಡ್ ಸಂಖ್ಯೆಯ ಜತೆಗೆ ಕಡ್ಡಾಯ ಬಯೋಮೆಟ್ರಿಕ್ ದೃಢೀಕರಣವನ್ನೂ ನೀಡಬೇಕಾಗುತ್ತದೆ ಎಂಬ ಅಂಶವನ್ನು ಪ್ರಸ್ತಾಪಿಸಿದರು.

ಮತ ಕಳವು ಸಾಕ್ಷ್ಯ ಸಮೇತ ಹಿಡಿದಿದ್ದೇವೆ ..!

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯ ಹೆಸರಿನಲ್ಲಿ ಕೋಟ್ಯಂತರ ಹೆಸರುಗಳನ್ನು ಪಟ್ಟಿಯಿಂದ ತೆಗೆಯಲಾಗುತ್ತಿದೆ. ಇದನ್ನು ತಡೆಯದಿದ್ದರೆ ಇನ್ನಷ್ಟು ಹೆಸರುಗಳು ಕೈಬಿಡಲ್ಪಡುತ್ತವೆ. ಅದರಲ್ಲೂ ಬಿಜೆಪಿ ವಿರುದ್ಧ ಅಸಮಾಧಾನ ಹೊಂದಿರುವವರ ಹೆಸರುಗಳನ್ನೇ ಹೆಚ್ಚಾಗಿ ಗುರಿಯಾಗಿಸಲಾಗುತ್ತಿದೆ ಎಂದು ಅವರು ಆರೋಪಿಸಿದರು. ಮತದಾರರ ಪಟ್ಟಿ ನಿಷ್ಪಕ್ಷಪಾತ ಚುನಾವಣಾ ಆಯೋಗದ ಕೈಯಲ್ಲಿರಬೇಕು. ಆದರೆ ಈಗ ಅದು ಮೋದಿ ಸರ್ಕಾರದ ಉದ್ಯೋಗಿ ಎಂದು ತಾವು ಟೀಕಿಸುವ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ನಿಯಂತ್ರಣದಲ್ಲಿದೆ. ಬಿಜೆಪಿ ಜತೆಗಿನ ಹೊಂದಾಣಿಕೆಯಲ್ಲಿ ಮತ ಕಳವು ನಡೆದಿರುವುದನ್ನು ಸಾಕ್ಷ್ಯ ಸಮೇತ ಹಿಡಿದಿದ್ದೇವೆ ಎಂದು ಹೇಳಿದರು. ಬಿಜೆಪಿಗೆ ಬಹುಮತ ಸಿಗುವಂತೆ ಪಟ್ಟಿ ಸಿದ್ಧಪಡಿಸಲಾಗುತ್ತಿದೆ. ಅದೇ ಪಟ್ಟಿ ಮುಂದೆ ಯೋಜನೆಯ ಹಣ ಸಿಗಬೇಕೇ ಬೇಡವೇ ಎಂಬುದನ್ನು ನಿರ್ಧರಿಸಲಿದೆ. ಬಿಜೆಪಿಯನ್ನು ತೆಗೆದುಹಾಕಬೇಕು ಎಂದು ನಿರ್ಧರಿಸಿದವರ ಹೆಸರನ್ನು ಆಯ್ದು ತೆಗೆಯಲಾಗುತ್ತದೆ. ಹೆಸರು ಕಡಿತವಾದರೆ ಮತ ಹೋಗುತ್ತದೆ, ಮತ ಹೋದರೆ ಹಕ್ಕು ಹೋಗುತ್ತದೆ ಎಂದು ಎಚ್ಚರಿಸಿದರು.

ಇದನ್ನೂ ಓದಿ : ರಾಹುಲ್ ಸಭೆಗೆ ಸಿದ್ದರಾಮಯ್ಯ ಗೈರು – ಹೈಕಮಾಂಡ್ ಗೆ ಪರೋಕ್ಷ ಸಂದೇಶ ..?

ಇಂದು ಪಂಚಾಯತ್ ರಾಜ್ ಯೋಜನೆಗೆ ವೋಟರ್ ಐಡಿ ಕಡ್ಡಾಯವಾದರೆ ನಾಳೆ ಪಡಿತರ, ಪಿಂಚಣಿ, ಮನರೇಗಾ, ವಸತಿ, ವಿದ್ಯಾರ್ಥಿವೇತನ, ಮೀಸಲಾತಿಗೂ ಇದೇ ನಿಯಮ ಬರಬಹುದು ಎಂಬ ಅವರ ಆತಂಕ ಕೇವಲ ರಾಜಕೀಯ ಆರೋಪವಾಗಿ ಉಳಿಯುವುದಿಲ್ಲ. ಏಕೆಂದರೆ ಮತದಾರರ ಪಟ್ಟಿ ಎಂಬುದು ಚುನಾವಣೆಯ ದಾಖಲೆಯೇ ಹೊರತು ನಾಗರಿಕರ ಅರ್ಹತೆಯನ್ನು ಅಳೆಯುವ ಸಾಧನವಲ್ಲ. ಆಧಾರ್‌ನಲ್ಲೂ ದೋಷಗಳಿವೆ ಎಂಬುದು ನಿಜ. ಆದರೆ ವೋಟರ್ ಐಡಿಯನ್ನು ಕಲ್ಯಾಣಕ್ಕೆ ಜೋಡಿಸಿದರೆ ಹೆಸರು ಕಡಿತ, ವಿಳಾಸ ಬದಲಾವಣೆ, ತಾಂತ್ರಿಕ ದೋಷದಂತಹ ಕಾರಣಕ್ಕೆ ಬಡವರಿಗೆ ಸಿಗಬೇಕಾದ ಸೌಲಭ್ಯವೇ ನಿಂತುಹೋಗುವ ಅಪಾಯವಿದೆ. ಮತ ನೀಡುವುದು ಹಕ್ಕೇ ಹೊರತು ಷರತ್ತಲ್ಲ ಎಂಬ ಅವರ ಮಾತು ಸಂವಿಧಾನದ ಮೂಲ ಆಶಯಕ್ಕೆ ಹತ್ತಿರವಾಗಿದೆ. ಸರ್ಕಾರ ಈ ನಿರ್ಧಾರದ ಉದ್ದೇಶ, ಸುರಕ್ಷತೆ ಮತ್ತು ಪರ್ಯಾಯ ವ್ಯವಸ್ಥೆಯನ್ನು ಸ್ಪಷ್ಟಪಡಿಸದಿದ್ದರೆ ಇದು ಜನರಲ್ಲಿ ಅಪನಂಬಿಕೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ.