Majestic Movie: ‘ಮಾಸ್ ಹೀರೊ’ ದರ್ಶನ್ ಚೊಚ್ಚಲ ಸಿನಿಮಾ ‘ಮೆಜೆಸ್ಟಿಕ್’, ಸ್ಯಾಂಡಲ್‌ವುಡ್ ಇತಿಹಾಸ ಬರೆದ ಕಥೆ…

ಒಂದೇ ಒಂದು ಸಿನಿಮಾದಿಂದ 'ಮಾಸ್ ಹೀರೊ' ಆದ ದರ್ಶನ್...

Photo Credits: @boss_adda_hubballi (Instagram)

‘ಮೆಜೆಸ್ಟಿಕ್’ 2002 ರಲ್ಲಿ ತೆರೆಕಂಡು ಕನ್ನಡ ಚಿತ್ರರಂಗದಲ್ಲಿ ಹೊಸ ಚರಿತ್ರೆ ಬರೆದ ಅತ್ಯಂತ ಪ್ರಸಿದ್ಧ ಆಕ್ಷನ್ ಕ್ರೈಮ್ ಥ್ರಿಲ್ಲರ್ ಸಿನಿಮಾ. ನಿರ್ದೇಶಕ ಪಿ.ಎನ್. ಸತ್ಯ ಅವರು ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಾಯಕನಾಗಿ ಅಭಿನಯಿಸಿದ ಚೊಚ್ಚಲ ಚಿತ್ರ ಇದಾಗಿದೆ. ಸ್ಪರ್ಶ ರೇಖಾ ನಾಯಕಿಯಾಗಿ ಹಾಗೂ ಜೈ ಜಗದೀಶ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಉಲ್ಲಾಸ್ ಎಂಟರ್‌ಪ್ರೈಸಸ್ ಬ್ಯಾನರ್ ಅಡಿಯಲ್ಲಿ ಬಾ.ಮಾ. ಹರೀಶ್ ಮತ್ತು ಎಂ.ಜಿ. ರಾಮಮೂರ್ತಿ ಇದನ್ನು ನಿರ್ಮಿಸಿದ್ದಾರೆ. ಸಾಧು ಕೋಕಿಲ ಅವರ ಮಾಸ್ ಸಂಗೀತ ಚಿತ್ರದ ಪ್ರತಿಯೊಂದು ದೃಶ್ಯಕ್ಕೂ ಭಾರಿ ಶಕ್ತಿ ತುಂಬಿದೆ.

ಕರಾಳ ಭೂಗತ ಲೋಕ ಮತ್ತು ಪ್ರೇಮಕಥೆಯ ಹಂದರ…

ಅನಾಥ ದಾಸ (ದರ್ಶನ್) ಬಾಲ್ಯದಿಂದಲೇ ಭ್ರಷ್ಟ ಪೊಲೀಸ್ ರಣಧೀರನ ಬಳಿ ಬೆಳೆಯುತ್ತಾನೆ. ಬೆಳೆದು ದೊಡ್ಡವನಾದ ಮೇಲೆ ರಣಧೀರನ ಮಾತು ಕೇಳಿ ಭೂಗತ ಲೋಕದ ರೌಡಿಯಾಗುತ್ತಾನೆ. ಸಂದರ್ಭ ಹಾಗೂ ಹಠದಿಂದಾಗಿ ಅವನು ಪ್ರಜ್ವಲ್ ಹೆಸರಿನಲ್ಲಿ ಕಿರಣ್ (ಸ್ಪರ್ಶ ರೇಖಾ) ಎಂಬ ಹುಡುಗಿಗೆ ಹತ್ತಿರವಾಗುತ್ತಾನೆ.

ಆದರೆ ಕಿರಣ್ ಅದೇ ರಣಧೀರನ ಮಗಳು ಎಂಬ ಸತ್ಯ ಆಮೇಲೆ ಬಯಲಾಗುತ್ತದೆ. ದಾಸನ ನಿಸ್ಸಾರ್ಥ ಮನಸ್ಸನ್ನು ಕಂಡು ಕಿರಣ್ ಅವನನ್ನು ಪ್ರೀತಿಸಲು ಪ್ರಾರಂಭಿಸುತ್ತಾಳೆ. ಆದರೆ ಇಬ್ಬರ ನಡುವೆ ಹಲವು ಗೊಂದಲಗಳು ಉಂಟಾಗಿ ಬೇರ್ಪಡುವ ಪರಿಸ್ಥಿತಿ ಬರುತ್ತದೆ.

ಶತ್ರು ರೌಡಿ ನಾಗನ ಜೊತೆಗಿನ ಕಾಳಗ ಹಾಗೂ ರಣಧೀರನ ಕುತಂತ್ರದಿಂದಾಗಿ ಕಥೆ ದೊಡ್ಡ ದುರಂತಕ್ಕೆ ತಿರುಗುತ್ತದೆ. ಕೊನೆಯಲ್ಲಿ ಕಿರಣ್ ಜೀವ ಬಿಡುತ್ತಾಳೆ ಮತ್ತು ದಾಸ ಕೂಡ ಅವಳ ಮಡಿಲಲ್ಲೇ ಕೊನೆಯುಸಿರೆಳೆಯುತ್ತಾನೆ. ಈ ಭಾವುಕ ಕ್ಲೈಮ್ಯಾಕ್ಸ್ ಪ್ರೇಕ್ಷಕರ ಕಣ್ಣಂಚಿನಲ್ಲಿ ನೀರು ತರಿಸುತ್ತದೆ.

ತಾರಾಗಣದ ಅಭಿನಯ ಮತ್ತು ತಾಂತ್ರಿಕ ಬಲ…

ತಮ್ಮ ಮೊದಲ ಸಿನಿಮಾದಲ್ಲೇ ದರ್ಶನ್ ಅವರು ‘ದಾಸ’ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅವರ ಎತ್ತರ, ಗಂಭೀರ ಧ್ವನಿ ಮತ್ತು ಮಾಸ್ ಡೈಲಾಗ್ ಡೆಲಿವರಿ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಇಷ್ಟವಾಯಿತು. ನಾಯಕಿ ಸ್ಪರ್ಶ ರೇಖಾ ಮತ್ತು ಜೈ ಜಗದೀಶ್ ಅತ್ಯುತ್ತಮ ಅಭಿನಯ ನೀಡಿದ್ದಾರೆ.

ಸಾಧು ಕೋಕಿಲ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದ ಎಲ್ಲ ಹಾಡುಗಳು ಸೂಪರ್ ಹಿಟ್ ಆದವು. ವಿ. ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯ ಚಿತ್ರದ ಭಾವನೆಗಳಿಗೆ ದೊಡ್ಡ ಬಲ ತಂದಿತು. ಚಿತ್ರದ ಮಾಸ್ ಸಂಭಾಷಣೆಗಳು ಗಲ್ಲಿ ಗಲ್ಲಿಯಲ್ಲೂ ಸೌಂಡ್ ಮಾಡಿದವು.

ಗಲ್ಲಾಪೆಟ್ಟಿಗೆಯಲ್ಲಿ ಸೃಷ್ಟಿಯಾದ ಇತಿಹಾಸ…

ಈ ಸಿನಿಮಾ ಚಿತ್ರಮಂದಿರಗಳಲ್ಲಿ ಸತತ 100 ದಿನಗಳಿಗೂ ಹೆಚ್ಚು ಕಾಲ ಪ್ರದರ್ಶನ ಕಂಡು ಸೂಪರ್‌ಹಿಟ್ ಆಯಿತು. ಬಾಕ್ಸ್ ಆಫೀಸ್‌ನಲ್ಲಿ ಭಾರಿ ಗಳಿಕೆ ಮಾಡುವ ಮೂಲಕ ದರ್ಶನ್ ಅವರಿಗೆ ‘ಮಾಸ್ ಹೀರೊ’ ಪಟ್ಟ ನೀಡಿತು.

ಈ ಚಿತ್ರದ ಯಶಸ್ಸಿನಿಂದಾಗಿ ಇದನ್ನು ತೆಲುಗಿನಲ್ಲಿ ‘ಚಾರ್ಮಿನಾರ್’ ಎಂಬ ಹೆಸರಿನಲ್ಲಿ ರಿಮೇಕ್ ಮಾಡಲಾಯಿತು. ದರ್ಶನ್ ಅವರ ಜನ್ಮದಿನದ ಅಂಗವಾಗಿ 2022 ರಲ್ಲಿ ಇದನ್ನು ಮತ್ತೆ ಬಿಡುಗಡೆ ಮಾಡಲಾಗಿತ್ತು. ಕನ್ನಡ ಚಿತ್ರರಂಗದ ಸಾರ್ವಕಾಲಿಕ ಅತ್ಯುತ್ತಮ ಆಕ್ಷನ್ ಸಿನಿಮಾಗಳಲ್ಲಿ ‘ಮೆಜೆಸ್ಟಿಕ್’ ಸದಾ ಮುಂಚೂಣಿಯಲ್ಲಿರುತ್ತದೆ.