PM MODI : ಮೋದಿಯಂತೆ ಮಿಮಿಕ್ರಿ ಮಾಡಿದ ಪ್ರಕಾಶ್ ರಾಜ್ – ಪ್ರಧಾನಿ ಪಟ್ಟದಿಂದ ಕೆಳಗಿಳಿಸ್ತಾರಂತೆ..?

ಬಹುಭಾಷಾ ನಟ ಪ್ರಕಾಶ್ ರಾಜ್ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿ ಸಮುದಾಯವನ್ನು ಗುರಿಯಾಗಿಸಿಕೊಂಡು ಅವರ ವಿರುದ್ಧ ಕ್ರಮ ಕೈಗೊಳ್ಳುವುದನ್ನು ನಟ ಪ್ರಕಾಶ್ ರಾಜ್ ತೀವ್ರವಾಗಿ ಖಂಡಿಸಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯುವಜನರ ಧ್ವನಿಯನ್ನು ಅಡಗಿಸುವ ಪ್ರಯತ್ನ ಅಪಾಯಕಾರಿ ಎಂದಿರುವ ಅವರು, ಜನಸಾಮಾನ್ಯರು ಮತ್ತು ವಿದ್ಯಾರ್ಥಿಗಳು ಮನಸ್ಸು ಮಾಡಿದರೆ ಪ್ರಧಾನಿ ಹುದ್ದೆಯಲ್ಲಿದ್ದವರನ್ನೂ ಅಧಿಕಾರದಿಂದ ಕೆಳಗಿಳಿಸುವ ಶಕ್ತಿ ಹೊಂದಿದ್ದಾರೆ ಎಂದು ನೇರವಾಗಿಯೇ ಸವಾಲು ಹಾಕಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ಹಂಚಿಕೊಳ್ಳುವ ಮೂಲಕ ಪ್ರಕಾಶ್ ರಾಜ್ ಅವರು ಸರ್ಕಾರದ ವಿರುದ್ಧ ತಮ್ಮ ಹರಿತವಾದ ಮಾತುಗಳಿಂದ ದಾಳಿ ಮಾಡಿದ್ದಾರೆ. ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯ ಅಥವಾ ಅವರ ಆಕ್ರೋಶವನ್ನು ಹತ್ತಿಕ್ಕುವ ಧೋರಣೆಯನ್ನು ಬಿಟ್ಟುಕೊಡಬೇಕೆಂದು ಒತ್ತಾಯಿಸಿದ್ದಾರೆ. ಯುವ ಸಮೂಹ ಎತ್ತುತ್ತಿರುವ ಪ್ರಶ್ನೆಗಳಿಗೆ ಪ್ರಜಾಸತ್ತಾತ್ಮಕ ರೀತಿಯಲ್ಲಿ ಉತ್ತರ ನೀಡುವ ಬದಲು, ಅವರ ಮೇಲೆ ಒತ್ತಡ ತರುವುದು ಅಥವಾ ಬೆದರಿಸುವ ತಂತ್ರ ಬಳಸುವುದು ಆಡಳಿತಗಾರರ ದೌರ್ಬಲ್ಯವನ್ನು ತೋರಿಸುತ್ತದೆ ಎಂದು ಆರೋಪಿಸಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಗಳು ಸಮಾಜದ ಜೀವಂತಿಕೆಯನ್ನು ಸಂಕೇತಿಸುತ್ತವೆ. ಸರ್ಕಾರದ ದೋಷಗಳನ್ನು ಪ್ರಶ್ನಿಸುವ ಯುವಕರ ಧ್ವನಿಯನ್ನು ಹತ್ತಿಕ್ಕಲು ಯತ್ನಿಸಿದರೆ ಅದು ದೇಶದ ಪ್ರಜಾಸತ್ತಾತ್ಮಕ ಮೌಲ್ಯಗಳಿಗೇ ಧಕ್ಕೆಯಾಗುತ್ತದೆ. ಆಡಳಿತದಲ್ಲಿದ್ದವರು ನೈಜ ಸಮಸ್ಯೆಗಳನ್ನು ಬಗೆಹರಿಸುವತ್ತ ಗಮನಹರಿಸಬೇಕೇ ಹೊರತು, ಪ್ರತಿಭಟನಾನಿರತರನ್ನು ಶತ್ರುಗಳಂತೆ ಕಾಣುವುದು ಪ್ರಬುದ್ಧ ರಾಜಕೀಯದ ಲಕ್ಷಣವಲ್ಲ ಎಂಬಂತೆ ಮಾತನಾಡಿದ್ದಾರೆ.

ಆದ್ರೆ ಪ್ರಕಾಶ್ ರಾಜ್ ಅವರು ಹೀಗೆ ಪ್ರಧಾನಿ ಅವರನ್ನು ಟೀಕಿಸುವುದು ಅಥವಾ ಹಿಯ್ಯಾಳಿಸುವುದು ಇದೇ ಮೊದಲಲ್ಲ. ಅವರ ಈ ನಡೆಗೆ ಇಂಟರ್ನೆಟ್ ನಲ್ಲಿ ಪರ ವಿರೋಧದ ಚರ್ಚೆಗಳು ಕೂಡ ಜೋರಾಗಿದೆ. ಕೆಲವು ದಿನಗಳ ಮುಂದ ಬೆಂಗಳೂರಿನ ಫ್ರೀಡಂ ಪಾರ್ಕ್ ಹಾಗೂ ದೆಹಲಿಯಲ್ಲಿ ನಡೆದ ಸಿಜೆಪಿ ಪ್ರೊಟೆಸ್ಟ್ ನಲ್ಲಿ ಕೂಡ ನಟ ಪ್ರಕಾಶ್ ರಾಜ್ ಕಾಣಿಸಿಕೊಂಡಿದ್ದರು.