PM MODI : ನನ್ನನ್ನೂ..ನನ್ನ ತಾಯಿಯನ್ನು ನಿಂದಿಸಿದವರನ್ನು ನಾನು ಕ್ಷಮಿಸುತ್ತೇನೆ : ಪ್ರಧಾನಿ ಮೋದಿ

ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆಯ ವೇಳೆ ಪ್ರಧಾನಮಂತ್ರಿ ನರೇಂದ್ರ
ಮೋದಿ ಹಾಗೂ ಅವರ ದಿವಂಗತ ತಾಯಿಯವರ ವಿರುದ್ಧ ನಿಂದನೀಯ ಪದಗಳನ್ನು ಬಳಸಿದ ಘಟನೆ ದೇಶಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ನಡೆಸಲಾದ ಈ ಧರಣಿಯಲ್ಲಿ ವಿದ್ಯಾರ್ಥಿ ಸಮೂಹದ ಮಧ್ಯದಲ್ಲಿ ನಿಂದನಾತ್ಮಕ ಘೋಷಣೆಗಳನ್ನು ಕೂಗಿದ್ದರಿಂದ ಪೊಲೀಸರು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದರು. ಆದರೆ ಈ ವಿವಾದಕ್ಕೆ ಪ್ರಬುದ್ಧವಾಗಿ ಸ್ಪಂದಿಸಿದ ಪ್ರಧಾನಮಂತ್ರಿಯವರು, ಆಕ್ರೋಶ ಮತ್ತು ಬೈಗುಳಗಳಿಂದ ಯಾವುದೇ ಸಮಸ್ಯೆಗೆ ಶಮನ ಸಿಗುವುದಿಲ್ಲ ಎಂದಿದ್ದು, ದಾರಿತಪ್ಪಿದ ಯುವಜನತೆಯನ್ನು ಕಠಿಣವಾಗಿ ಶಿಕ್ಷಿಸುವ ಬದಲಿಗೆ ಅವರನ್ನು ಮನ್ನಿಸಿ ಸರಿಯಾದ ಮಾರ್ಗದಲ್ಲಿ ಮುನ್ನಡೆಸಬೇಕೆಂಬ ನಿಲುವನ್ನು ವ್ಯಕ್ತಪಡಿಸಿದ್ದಾರೆ.

ಹೌದು, ಯುವಸಮುದಾಯದ ತಪ್ಪನ್ನು ಮುಕ್ತಮನಸ್ಸಿನಿಂದ ಕ್ಷಮಿಸುವ ಮೂಲಕ ಪ್ರಧಾನಿ ಮೋದಿ ರಾಜಕೀಯ ನಾಯಕತ್ವಕ್ಕೆ ಹೊಸ ಮಾದರಿಯನ್ನು ತೋರಿಸಿದ್ದಾರೆ. ಯಾವುದೇ ಪ್ರಜಾಸತ್ತಾತ್ಮಕ ಹೋರಾಟಗಳು ಸೈದ್ಧಾಂತಿಕ ವ್ಯಾಪ್ತಿಯಲ್ಲಿರಬೇಕೇ ಹೊರತು, ವೈಯಕ್ತಿಕ ನಿಂದನೆ ಮತ್ತು ಕೊಳಕು ಭಾಷೆಗೆ ಅಲ್ಲಿ ಅವಕಾಶವಿರಬಾರದು. ಸಮಾಜ ಮತ್ತು ಸರ್ಕಾರ ಯುವಕರ ಆಕ್ರೋಶವನ್ನು ಹತ್ತಿಕ್ಕುವ ಬದಲು, ಅವರ ಕೋಪ ಮತ್ತು ಅಸಮಾಧಾನದ ಹಿಂದಿರುವ ನೈಜ ಕಾರಣಗಳನ್ನು ಅರ್ಥೈಸಿಕೊಂಡು ಅವರಿಗೆ ಸರಿ-ತಪ್ಪುಗಳ ಅರಿವು ಮೂಡಿಸುವುದು ಇಂದಿನ ಅತ್ಯಗತ್ಯ ಅಗತ್ಯವಾಗಿದೆ.

ಈ ಘಟನೆ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸಾಮಾಜಿಕ ಜವಾಬ್ದಾರಿಯ ನಡುವಿನ ಸೂಕ್ಷ್ಮ ಗೆರೆಯನ್ನು ಸ್ಪಷ್ಟವಾಗಿ ಬಿಂಬಿಸುತ್ತದೆ. ವಿದ್ಯಾರ್ಥಿ ಸಮುದಾಯ ಎದುರಿಸುತ್ತಿರುವ ಶೈಕ್ಷಣಿಕ ಅಕ್ರಮಗಳು ಹಾಗೂ ಭವಿಷ್ಯದ ಅನಿಶ್ಚಿತತೆ ಅವರಲ್ಲಿ ತೀವ್ರ ಆಕ್ರೋಶವನ್ನು ಮೂಡಿಸಿರುವುದು ನಿಜವಾದರೂ, ವೈಯಕ್ತಿಕ ದಾಳಿಗಳು ಅವರ ನ್ಯಾಯಯುತ ಹೋರಾಟದ ನೈತಿಕತೆಯನ್ನು ಕುಗ್ಗಿಸುತ್ತವೆ. ಆದ್ದರಿಂದ ಸರ್ಕಾರಗಳು ಕೇವಲ ಸಾಂತ್ವನ ಅಥವಾ ಕ್ಷಮಾದಾನ ನೀಡುವುದಕ್ಕೆ ಸೀಮಿತವಾಗದೆ, ಯುವಜನತೆಯನ್ನು ಇಂತಹ ಹತಾಶೆಯ ಸ್ಥಿತಿಗೆ ತಳ್ಳಿದ ಶೈಕ್ಷಣಿಕ ಮತ್ತು ಆಡಳಿತಾತ್ಮಕ ದೋಷಗಳನ್ನು ಶೀಘ್ರವಾಗಿ ಸರಿಪಡಿಸಬೇಕಿದೆ.

ಈ ರೀತಿಯ ಪ್ರತಿಭಟನೆಗಳ ಸಂದರ್ಭದಲ್ಲಿ, ಅವೇಶ , ಆಕ್ರೋಶದಲ್ಲಿ ಭಾಷೆಯ ನಿಯಂತ್ರಣ ತಪ್ಪುವುದು ಸಹಜವಿರಬಹುದು, ಆದ್ರೆ ನಾಯಕರು ತೋರಿಸುವ ಉದಾರತೆ ಮತ್ತು ಕ್ಷಮಾಪಣಾ ಗುಣ ಯುವಶಕ್ತಿಯನ್ನು ಸಕಾರಾತ್ಮಕ ಹಾದಿಯಲ್ಲಿ ಬಳಸಿಕೊಳ್ಳಲು ನೆರವಾಗುತ್ತದೆ. ಆಕ್ರೋಶದ ಜಾಗದಲ್ಲಿ ಸೌಹಾರ್ದತೆ, ಪರಸ್ಪರ ಗೌರವ ಹಾಗೂ ಸಂವಾದ ಸಂಸ್ಕೃತಿಯನ್ನು ಬೆಳೆಸಿದಾಗ ಮಾತ್ರ ದೇಶ ಕಟ್ಟುವ ಕಾರ್ಯ ಸಾಗಲು ಮತ್ತು ಯಾವುದೇ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂಬ ಸಂದೇಶವನ್ನು ಮೋದಿ ರವಾನಿಸಿದ್ದಾರೆ.