CABINET: ಅಂತೂ ಇಂತೂ ಬಂತು ಹೈಕಮಾಂಡ್ ನಿಂದ ಅಂತಿಮ ಪಟ್ಟಿ – ಒಂದೆಡೆ ಸಂಭ್ರಮ ಮತ್ತೊಂದೆಡೆ ಪ್ರತಿಭಟನೆ !

ರಾಜ್ಯ ಹಾಗೂ ರಾಷ್ಟ್ರ ನಾಯಕರ ವ್ಯಾಪಕ ಕಸರತ್ತಿನ ನಂತರ ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆಗೆ ದೆಹಲಿಯ ವರಿಷ್ಠರು ಅಂತಿಮ ಸ್ಪರ್ಶ ನೀಡಿದ್ದಾರೆ. ಕಾಂಗೆಸ್ ಹೈಕಮಾಂಡ್‌ನಿಂದ ನೂತನವಾಗಿ ಆಯ್ಕೆಯಾದ ಶಾಸಕರ ಅಧಿಕೃತ ಪಟ್ಟಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ತಲುಪಿದ್ದು, ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ರಾಜಭವನದ ಗಾಜಿನಮನೆಯಲ್ಲಿ ಅಗತ್ಯ ಸಿದ್ಧತೆಗಳು ಚಾಲ್ತಿಯಲ್ಲಿವೆ.

ಈ ಬಾರಿ ಆಯ್ಕೆಯಾದ ನೂತನ ಸಚಿವರ ಪಟ್ಟಿಯಲ್ಲಿ ಪಿ.ಎಂ. ನರೇಂದ್ರಸ್ವಾಮಿ, ಶಿವರಾಜ್ ತಂಗಡಗಿ, ರುದ್ರಪ್ಪ ಲಮಾಣಿ, ಕೆ.ಎಸ್. ಬಸವಂತಪ್ಪ, ಬಿ. ನಾಗೇಂದ್ರ, ಟಿ. ರಘುಮೂರ್ತಿ, ಜಮೀರ್ ಅಹ್ಮದ್, ರಿಜ್ವಾನ್ ಅರ್ಷದ್, ಸಂತೋಷ್ ಲಾಡ್, ಮಧು ಬಂಗಾರಪ್ಪ, ಸಿ.ಎಸ್. ಪುಟ್ಟರಂಗಶೆಟ್ಟಿ, ಮಂಕಾಳ ವೈದ್ಯ, ಅಜಯ್ ಸಿಂಗ್, ಎನ್.ಚಲುವರಾಯಸ್ವಾಮಿ, ಕೆ.ಎಂ. ಶಿವಲಿಂಗೇಗೌಡ, ಎಚ್.ಸಿ. ಬಾಲಕೃಷ್ಣ, ಗಾಯತ್ರಿ ಶಾಂತೇಗೌಡ, ಬಸವರಾಜ ರಾಯರೆಡ್ಡಿ ಹಾಗೂ ವಿಜಯಾನಂದ ಕಾಶಪ್ಪನವರ್ ಸೇರಿದ್ದಾರೆ.

ಈ ಬಾರಿಯ ಸಂಪುಟ ವಿಸ್ತರಣೆ ಕುರಿತು ಹೈಕಮಾಂಡ್ ನಿರ್ಧಾರದಲ್ಲಿ ಪ್ರಾದೇಶಿಕ ಸಮತೋಲನ ಹಾಗೂ ಜಾತಿ ಸಮೀಕರಣಗಳಿಗೆ ಹೆಚ್ಚಿನ ಆದ್ಯತೆ ನೀಡಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಹಳೆಯ ಮೈಸೂರು, ಕಲ್ಯಾಣ ಕರ್ನಾಟಕ, ಕರಾವಳಿ ಹಾಗೂ ಉತ್ತರ ಕರ್ನಾಟಕ ಭಾಗದ ವಿವಿಧ ಸಮುದಾಯಗಳ ಪ್ರಮುಖ ನಾಯಕರಿಗೆ ಅವಕಾಶ ಕಲ್ಪಿಸುವ ಮೂಲಕ ಪಕ್ಷದೊಳಗಿನ ಅಸಮಾಧಾನವನ್ನು ಶಮನಗೊಳಿಸಲು ಯತ್ನಿಸಲಾಗಿದೆ. ಆದರೆ, ಅನುಭವ ಹಾಗೂ ಸಚಿವಾಕಾಂಕ್ಷಿಗಳ ದಂಡೇ ಇರುವ ಕಾಂಗ್ರೆಸ್‌ನಲ್ಲಿ, ಸ್ಥಾನ ವಂಚಿತರಾದ ಹಿರಿಯ ಶಾಸಕರಲ್ಲಿ ಉಂಟಾಗಬಹುದಾದ ಆಂತರಿಕ ಅಸಮಾಧಾನವನ್ನು ಶಮನಗೊಳಿಸುವುದು ನಾಯಕತ್ವಕ್ಕೆ ದೊಡ್ಡ ಸವಾಲಾಗಲಿದೆ.

ಅಂತಿಮವಾಗಿ, ಸಂಪುಟ ಭರ್ತಿಯಾದ ನಂತರ ನೂತನ ಸಚಿವರಿಗೆ ಇಲಾಖೆಗಳ ಹಂಚಿಕೆ ಮತ್ತು ಅವರ ಕಾರ್ಯಕ್ಷಮತೆ ಪ್ರಮುಖ ಪಾತ್ರ ವಹಿಸಲಿದೆ. ಮತ್ತೊಂದೆಡೆ ಕೆಲವು ಪ್ರಮುಖ ನಾಯಕರ ನಿರೀಕ್ಷೆ ಹುಸಿಯಾಗಿದ್ದು, ಸಚಿವ ಸ್ಥಾನ ಸಿಗದ ಹಿನ್ನಲೆ ಅಸಾಮದನಿತ ನಾಯಕರು ಮತ್ತು ಬೆಂಬಲಿಗರ ಆಕೃಷದ ಕಟ್ಟೆಯೊಡೆದಿದ್ದು, ಹಲವೆಡೆ ರಸ್ತೆಗಿಳಿದಿರುವ ಬೆಂಬಲಿಗರು ಟೈಯರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಈ ಅಸಮಾಧಾನವನ್ನು ಹೈಕಮಾಂಡ್ ಹೇಗೆ ನಿಭಾಯಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.