ಅತ್ಯಾಚಾರ ಪ್ರಕರಣವೊಂದರಲ್ಲಿ ಈಗಾಗಲೇ ನ್ಯಾಯಾಲಯದಿಂದ ಜೀವಾವಧಿ ಶಿಕ್ಷೆಗೆ ಒಳಗಾಗಿ ಜೈಲುವಾಸ ಅನುಭವಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಮತ್ತೊಂದು ಕ್ರಿಮಿನಲ್ ಪ್ರಕರಣದ ಜಾಮೀನು ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿದೆ. ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠ ಈ ಅರ್ಜಿಯ ಸುದೀರ್ಘ ಪರಿಶೀಲನೆ ನಡೆಸಿದ್ದು, ಮುಂದಿನ ವಿಚಾರಣೆಯನ್ನು ಜುಲೈ 31ಕ್ಕೆ ನಿಗದಿಪಡಿಸಿದೆ. ಈ ಪ್ರಕ್ರಿಯೆಯ ವೇಳೆ ಪ್ರಜ್ವಲ್ ಪರ ವಕೀಲರು ಸರ್ಕಾರದ ಆಕ್ಷೇಪಣೆ ಸಲ್ಲಿಕೆಯಾಗಿಲ್ಲ ಎಂದು ಗಮನ ಸೆಳೆದಾಗ, ನ್ಯಾಯಪೀಠ ಈ ಪ್ರಕರಣದಲ್ಲಿ ಪ್ರಮುಖ ಕಾನೂನಾತ್ಮಕ ಅಂಶಗಳು ಅಡಗಿರುವುದರಿಂದ ಸರ್ಕಾರದ ಲಿಖಿತ ಆಕ್ಷೇಪಣೆಯ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.
ಈ ಕಾನೂನು ಹೋರಾಟದ ಹಿನ್ನೆಲೆಯಲ್ಲಿ ನ್ಯಾಯಾಲಯ ಮತ್ತೊಂದು ಗಂಭೀರ ತಾಂತ್ರಿಕ ಅಂಶವನ್ನು ಪ್ರಸ್ತಾಪಿಸಿದೆ. ಪ್ರಜ್ವಲ್ ರೇವಣ್ಣ ಈಗಾಗಲೇ ಒಂದು ಪ್ರಕರಣದಲ್ಲಿ ಜೀವಾವಧಿ ಸಜೆಗೆ ಗುರಿಯಾಗಿರುವುದರಿಂದ, ಪ್ರಸ್ತುತ ಸಲ್ಲಿಕೆಯಾಗಿರುವ ಹೊಸ ಪ್ರಕರಣದಲ್ಲಿ ಅವರಿಗೆ ನ್ಯಾಯಾಲಯದಿಂದ ಜಾಮೀನು ಮಂಜೂರಾದರೂ ಸಹ ಅವರು ಜೈಲಿನಿಂದ ಮುಕ್ತರಾಗಲು ಸಾಧ್ಯವಿಲ್ಲ ಎಂಬ ಕಾನೂನು ವಾಸ್ತವವನ್ನು ಪೀಠ ಒತ್ತಿ ಹೇಳಿದೆ. ಈ ತಾಂತ್ರಿಕ ಮತ್ತು ಶಾಸನಾತ್ಮಕ ಜಟಿಲತೆಗಳ ಕಾರಣದಿಂದಲೇ ನ್ಯಾಯಾಲಯ ಪ್ರಕರಣದ ಆಳವಾದ ಅಧ್ಯಯನಕ್ಕೆ ಮುಂದಾಗಿದ್ದು, ಜುಲೈ ಅಂತ್ಯದ ವೇಳೆಗೆ ಈ ಮೇಲ್ಮನವಿಯ ಕಾನೂನು ಸೂಕ್ಷ್ಮತೆಗಳನ್ನು ಪರಾಮರ್ಶಿಸಲು ನಿರ್ಧರಿಸಿದೆ.
ಈ ಬೆಳವಣಿಗೆ ಕರ್ನಾಟಕದ ಪ್ರಭಾವಿ ರಾಜಕೀಯ ಕುಟುಂಬವೊಂದರ ಹಿನ್ನಡೆಗಿಂತಲೂ ದೊಡ್ಡದಾದ ರಾಜಕೀಯ ಪರಿಣಾಮಗಳನ್ನು ಬೀರುತ್ತಿದೆ. ಮಾಜಿ ಪ್ರಧಾನಿಗಳ ಕುಟುಂಬದ ಕುಡಿ ಇಂತಹ ಗಂಭೀರ ಅಪರಾಧ ಪ್ರಕರಣಗಳಲ್ಲಿ ಸಿಲುಕಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವುದು ಪ್ರಾದೇಶಿಕ ರಾಜಕಾರಣದಲ್ಲಿ ಜೆಡಿಎಸ್ ಪಕ್ಷದ ನೈತಿಕ ನೆಲೆಗಟ್ಟನ್ನು ತೀವ್ರವಾಗಿ ಅಲ್ಲಾಡಿಸಿದೆ. ಹಾಸನ ಜಿಲ್ಲೆ ಸೇರಿದಂತೆ ಹಳೇ ಮೈಸೂರು ಭಾಗದಲ್ಲಿ ದಶಕಗಳಿಂದ ಹೊಂದಿದ್ದ ರಾಜಕೀಯ ಹಿಡಿತ ಮತ್ತು ಮತಬ್ಯಾಂಕ್ ಈ ಪ್ರಕರಣಗಳ ನಂತರ ಸಾರ್ವಜನಿಕ ಆಕ್ರೋಶಕ್ಕೆ ಒಳಗಾಗಿದೆ.
ಪ್ರಜ್ವಲ್ ರೇವಣ್ಣ ಅವರ ಸರಣಿ ಕಾನೂನು ಸಂಕಷ್ಟಗಳು ಮತ್ತು ಕೋರ್ಟ್ ನೀಡಿರುವ ತೀಕ್ಷ್ಣ ಅವಲೋಕನಗಳು ಮುಂಬರುವ ದಿನಗಳಲ್ಲಿ ರಾಜಕೀಯ ವಿರೋಧಿಗಳಿಗೆ ಅಸ್ತ್ರವಾಗಲಿವೆ. ಸತತ ಕಾನೂನು ಹೋರಾಟದ ಹೊರತಾಗಿಯೂ, ಈಗಾಗಲೇ ಜೀವಾವದಿ ಶಿಕ್ಷೆಗೆ ಒಳಗಾಗಿರುವ ಪ್ರಜ್ವಲ್ ರೇವಣ್ಣಗೆ ಕೊಂಚವೂ ಪೂರಕವಾಗುವ ಯಾವುದೇ ಬೆಳವಣಿಗೆಗಳು ಕಂಡುಬರುತ್ತಿಲ್ಲ. ಹೀಗಾಗಿ ಮಾಜಿ ಸಂಸದನಿಗೆ ಜೈಲಿನ ದಿನಗಳು ಖಾಯಂ ಆಗಲಿವೆ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.




