ಕರ್ನಾಟಕ ಸರ್ಕಾರದ ಸಚಿವ ಸಂಪುಟವನ್ನು ಪುನರ್ರಚಿಸುವ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ರಾಷ್ಟ್ರೀಯ ನಾಯಕತ್ವ ಭಾರಿ ಆಡಳಿತಾತ್ಮಕ ಬದಲಾವಣೆಗೆ ಮುನ್ನುಡಿ ಬರೆದಿದೆ. ಮುಂಬರುವ ಸಾರ್ವತ್ರಿಕ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು, ಆಡಳಿತದಲ್ಲಿ ಹೊಸ ಚೈತನ್ಯ ಮೂಡಿಸಲು ದೆಹಲಿ ನಾಯಕರು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಬಾರಿಯ ಸಂಪುಟ ವಿಸ್ತರಣೆಯಲ್ಲಿ ಸುಮಾರು ಶೇಕಡಾ 60 ರಷ್ಟು ಸ್ಥಾನಗಳನ್ನು ಹೊಸಬರಿಗೆ ಹಾಗೂ ಯುವ ಮುಖಗಳಿಗೆ ನೀಡಲು ವರಿಷ್ಠರು ಗಂಭೀರ ತೀರ್ಮಾನ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಹೌದು, ಸಾಂಪ್ರದಾಯಿಕ ಆಯ್ಕೆ ಪ್ರಕ್ರಿಯೆಯನ್ನು ಬದಿಗಿಟ್ಟು ಕಾಂಗ್ರೆಸ್ ಪಕ್ಷ ಶಾಸಕರ ವಿದ್ಯಾಭ್ಯಾಸ, ಹಿನ್ನೆಲೆ, ಸಮಾಜದಲ್ಲಿನ ವರ್ಚಸ್ಸು ಮತ್ತು ಪ್ರಾದೇಶಿಕ-ಜಾತಿ ಸಮೀಕರಣಗಳನ್ನು ಆಧರಿಸಿ ಹೊಸ ನಿಯಮಗಳನ್ನು ರೂಪಿಸಿದೆ. ಯುವ ನಾಯಕತ್ವವನ್ನು ಮುಂಚೂಣಿಗೆ ತರುವ ಮೂಲಕ ರಾಜ್ಯದಲ್ಲಿ ಪಕ್ಷದ ಭವಿಷ್ಯದ ಬಲಿಷ್ಠ ನಾಯಕತ್ವವನ್ನು ರೂಪಿಸುವುದು ಹೈಕಮಾಂಡ್ನ ಪ್ರಮುಖ ಉದ್ದೇಶವಾಗಿದೆ. ಅರ್ಹತೆ ಮತ್ತು ಕಾರ್ಯಕ್ಷಮತೆಗೆ ಮೊದಲ ಆದ್ಯತೆ ಸಿಗುತ್ತಿರುವುದರಿಂದ, ಈ ಬಾರಿ ಹಲವು ಹಿರಿಯ ನಾಯಕರು ಸಚಿವ ಸ್ಥಾನ ವಂಚಿತರಾಗುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿವೆ.
ಕಾಂಗ್ರೆಸ್ ಹೈಕಮಾಂಡ್ನ ಈ ನಡೆ ರಾಜ್ಯ ರಾಜಕಾರಣದಲ್ಲಿ ದೂರದೃಷ್ಟಿಯ ತಂತ್ರಗಾರಿಕೆಯಾಗಿದೆ. ಸರ್ಕಾರ ಮತ್ತು ಪಕ್ಷದ ಮೇಲೆ ಜನಸಾಮಾನ್ಯರಲ್ಲಿ ಉಂಟಾಗಬಹುದಾದ ಆಡಳಿತ ವಿರೋಧಿ ಅಲೆಯನ್ನು ತಡೆಯಲು ಇಂತಹ ತೀವ್ರ ಸ್ವರೂಪದ ಬದಲಾವಣೆ ಅನಿವಾರ್ಯವಾಗಿದೆ. ಯುವ ಹಾಗೂ ಉತ್ಸಾಹಿ ಶಾಸಕರಿಗೆ ಸಚಿವ ಸ್ಥಾನ ನೀಡುವುದರಿಂದ ಆಡಳಿತ ವ್ಯವಸ್ಥೆಗೆ ಹೊಸ ವೇಗ ಸಿಗಲಿದ್ದು, ಭ್ರಷ್ಟಾಚಾರ ಮುಕ್ತ ಹಾಗೂ ಜನಪರ ಆಡಳಿತ ಎಂಬ ಸಂದೇಶವನ್ನು ಮತದಾರರಿಗೆ ತಲುಪಿಸಲು ಕಾಂಗ್ರೆಸ್ಗೆ ಸುಲಭವಾಗುತ್ತದೆ.
ಆದರೆ ಈ ಹೊಸ ತಂತ್ರ ಪಕ್ಷದ ಆಂತರಿಕ ವಲಯದಲ್ಲಿ ಭಿನ್ನಮತದ ಕಿಡಿಗೆ ಕಾರಣವಾಗುವ ಅಪಾಯವೂ ಇದೆ.
ಏಕೆಂದರೆ ದಶಕಗಳಿಂದ ಪಕ್ಷಕ್ಕಾಗಿ ಶ್ರಮಿಸಿರುವ ಮತ್ತು ಪ್ರಭಾವಿ ಸಮುದಾಯಗಳನ್ನು ಪ್ರತಿನಿಧಿಸುವ ಹಿರಿಯ ನಾಯಕರನ್ನು ಕಡೆಗಣಿಸಿದರೆ, ಅವರು ಪಕ್ಷದ ವಿರುದ್ಧ ಅಸಮಾಧಾನಗೊಳ್ಳಬಹುದು. ಹಿರಿಯರ ಅನುಭವ ಮತ್ತು ಹೊಸಬರ ಉತ್ಸಾಹದ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಹೈಕಮಾಂಡ್ ಗೆ ದೊಡ್ಡ ಸವಾಲಾಗಲಿದೆ. ಈ ಅಸಮಾಧಾನವನ್ನು ಹೈಕಮಾಂಡ್ ಹೇಗೆ ನಿಭಾಯಿಸುತ್ತದೆ ಎಂಬುದರ ಮೇಲೆ ಮುಂಬರುವ ಚುನಾವಣೆಗಳ ಭವಿಷ್ಯ ನಿರ್ಧಾರವಾಗಲಿದೆ.




