ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಸಾಮಾನ್ಯರ ಪ್ರತಿಭಟನೆಗಳನ್ನು ಹತ್ತಿಕ್ಕಲು ಪೊಲೀಸರ ಬಲಪ್ರಯೋಗ ಮಾಡುವ ಬದಲು, ಮುಕ್ತ ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಹಿರಿಯ ಸಮಾಜಸೇವಕ ಅಣ್ಣಾ ಹಜಾರೆ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ. ನೀಟ್ ಪರೀಕ್ಷೆಯ ವ್ಯಾಪಕ ಅಕ್ರಮಗಳನ್ನು ವಿರೋಧಿಸಿ ರಸ್ತೆಗಿಳಿದಿರುವ ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಪರಿಸರ ಪ್ರೇಮಿ ಸೋನಮ್ ವಾಂಗ್ಚುಕ್ ನಡೆಸುತ್ತಿರುವ ಆಂದೋಲನದ ಮೇಲೆ ನಡೆದ ದೌರ್ಜನ್ಯಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಅವರು, ಸರ್ಕಾರ ತಕ್ಷಣವೇ ಸಂಘರ್ಷದ ಹಾದಿ ಕೈಬಿಡಬೇಕು ಎಂದು ಮನವಿ ಮಾಡಿದ್ದಾರೆ.
ದೇಶದ ಭವಿಷ್ಯವಾಗಿರುವ 22 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಬಾಳಿನ ಜೊತೆ ಚೆಲ್ಲಾಟವಾಡಿರುವ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಕೇವಲ ಸಣ್ಣಪುಟ್ಟ ಸಿಬ್ಬಂದಿಯನ್ನು ಬಲಿಪಶು ಮಾಡುವುದು ಸರಿಯಲ್ಲ ಎಂದು ಹಜಾರೆ ಕಿಡಿಕಾರಿದ್ದಾರೆ. ಇಂತಹ ಬೃಹತ್ ಹಗರಣಗಳಿಗೆ ನೇರ ಹೊಣೆ ಹೊತ್ತು ಸಂಬಂಧಪಟ್ಟ ಸಚಿವರೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿರುವ ಅವರು, ಸುದೀರ್ಘ ದಿನಗಳಿಂದ ದೆಹಲಿಯಲ್ಲಿ ಧರಣಿ ಕುಳಿತಿದ್ದ ವಾಂಗ್ಚುಕ್ ಅವರೊಂದಿಗೆ ಸೌಹಾರ್ದಯುತ ಸಮಾಲೋಚನೆ ನಡೆಸದೆ ಅವರನ್ನು ಬಲವಂತವಾಗಿ ತೆರವುಗೊಳಿಸಿರುವುದಕ್ಕೆ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರ ಜನಸಾಮಾನ್ಯರ ಮತ್ತು ವಿದ್ಯಾರ್ಥಿಗಳ ಅಸಮಾಧಾನವನ್ನು ಎದುರಿಸುವಲ್ಲಿ ಆಡಳಿತಾತ್ಮಕವಾಗಿ ಹಿನ್ನಡೆ ಅನುಭವಿಸುತ್ತಿರುವುದು ಎದ್ದು ಕಾಣುತ್ತಿದೆ. ಯುವಸಮುದಾಯದ ಭವಿಷ್ಯಕ್ಕೆ ಸಂಬಂಧಿಸಿದ ಶಿಕ್ಷಣ ಕ್ಷೇತ್ರದಲ್ಲಿ ನಿರಂತರವಾಗಿ ಎದುರಾಗುತ್ತಿರುವ ಅಕ್ರಮಗಳು ಆಡಳಿತಾರೂಢ ಒಕ್ಕೂಟ ಸರ್ಕಾರದ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವಂತೆ ಮಾಡಿದ್ದು, ನಾಗರಿಕರ ಆಕ್ರೋಶವನ್ನು ಕೇವಲ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಯಾಗಿ ಬಿಂಬಿಸಿ ಹಿಂಸಾತ್ಮಕವಾಗಿ ಹತೋಟಿಗೆ ತರಲುತ್ನಿಸುವುದು ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ತಂದೊಡ್ಡುವ ದೊಡ್ಡ ಧಕ್ಕೆ.
ಒಂದೆಡೆ ಭ್ರಷ್ಟಾಚಾರ ರಹಿತ ಆಡಳಿತದ ಭರವಸೆ ನೀಡಿದ್ದ ಸರ್ಕಾರಕ್ಕೆ, ಸಮಾಜದ ಹಿರಿಯ ನಾಯಕ ಅಣ್ಣಾ ಹಜಾರೆ ಅವರ ಈ ಬಹಿರಂಗ ಪತ್ರ ಆಡಳಿತಾತ್ಮಕ ಹೊಣೆಗಾರಿಕೆಯನ್ನು ನೆನಪಿಸುವ ಮೈಲಿಗಲ್ಲಾಗಿದೆ. ವಿರೋಧ ಪಕ್ಷಗಳ ಟೀಕೆಗಳನ್ನು ರಾಜಕೀಯ ಲಾಭದ ತಂತ್ರವೆಂದು ತಳ್ಳಿಹಾಕಬಹುದಾದರೂ, ಹಜಾರೆಯಂತಹ ಅರಾಜಕೀಯ ಗಾಂಧಿವಾದಿಯ ಧ್ವನಿಯನ್ನು ಅಲಕ್ಷಿಸುವುದು ಮೋದಿ ಸರ್ಕಾರಕ್ಕೆ ರಾಜಕೀಯವಾಗಿ ಭಾರಿ ಹಿನ್ನಡೆ ತರಬಹುದು. ಆದ್ದರಿಂದ ಸರ್ಕಾರ ಪ್ರತಿಭಟನಾಕಾರರನ್ನು ವೈರಿಗಳಂತೆ ನೋಡುವ ಮನೋಭಾವ ಬಿಟ್ಟು, ಅವರ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಸಾರ್ವಜನಿಕರಲ್ಲಿ ನಂಬಿಕೆ ಮೂಡಿಸುವುದು ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಅತ್ಯಗತ್ಯವಾಗಿದೆ.



