ತಮಿಳುನಾಡುನ ಪೊಲ್ಲಾಚಿಯ ಸಾರ್ವಜನಿಕ ವೇದಿಕೆಯಲ್ಲಿ ಮಾತನಾಡಿದ ಕೆ. ಅಣ್ಣಾಮಲೈ, ಸಾಮಾಜಿಕ ಸಾಮರಸ್ಯ ಮತ್ತು ಧಾರ್ಮಿಕ ಆಚರಣೆಗಳ ಕುರಿತು ಕ್ರಾಂತಿಕಾರಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. ನೈಜ ಹಿಂದೂ ಧರ್ಮ ಜಾತಿ ರಹಿತ ಸಮಾಜವನ್ನು ಪ್ರತಿಪಾದಿಸುತ್ತದೆ ಮತ್ತು ಸಾರ್ವಜನಿಕ ವಲಯದಲ್ಲಿ ಧರ್ಮದ ಅತಿಯಾದ ಪ್ರದರ್ಶನ ಅನಗತ್ಯ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಸಾಂಪ್ರದಾಯಿಕ ಗುರುತುಗಳನ್ನು ಮನೆಗಷ್ಟೇ ಸೀಮಿತಗೊಳಿಸಿ ಹೊರಬರಬೇಕೆಂದು ಕರೆ ನೀಡಿದ ಅವರು, ತಾರತಮ್ಯ ಮಾಡುವವರು ಎಂದಿಗೂ ಧಾರ್ಮಿಕರಾಗಲು ಸಾಧ್ಯವಿಲ್ಲ ಎಂದಿದ್ದಾರೆ.
ಇದೇ ವೇಳೆ, ಇತ್ತೀಚಿನ ಸಾರ್ವತ್ರಿಕ ಚುನಾವಣೆಗಳು ರಾಜ್ಯದಲ್ಲಿ ದೊಡ್ಡ ಆಡಳಿತಾತ್ಮಕ ಪರಿವರ್ತನೆಗೆ ನಾಂದಿ ಹಾಡಿದ್ದು, ಮುಂಬರುವ 2031ರ ವೇಳೆಗೆ ದ್ರಾವಿಡ ನೆಲದಲ್ಲಿ ಅಭೂತಪೂರ್ವ ರಾಜಕೀಯ ಸ್ಥಿತ್ಯಂತರಗಳು ಸಂಭವಿಸಲಿವೆ ಎಂದು ಭವಿಷ್ಯ ನುಡಿದಿದ್ದಾರೆ.
ಭಾರತೀಯ ಜನತಾ ಪಕ್ಷದ ಸಾರಥ್ಯದಿಂದ ಹೊರಬಂದಿರುವ ಅಣ್ಣಾಮಲೈ ಅವರ ಈ ನಡೆ ತಮಿಳುನಾಡು ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದೆ. ತಮಿಳುನಾಡಿನ ಸಾಂಪ್ರದಾಯಿಕ ರಾಜಕೀಯ ವ್ಯವಸ್ಥೆ ದಶಕಗಳಿಂದ ದ್ರಾವಿಡ ಸಿದ್ಧಾಂತ ಹಾಗೂ ಪ್ರಾದೇಶಿಕ ಅಸ್ಮಿತೆಯ ಸುತ್ತವೇ ಸುತ್ತುತ್ತಿದ್ದು, ರಾಷ್ಟ್ರೀಯ ಪಕ್ಷಗಳಿಗೆ ಅಲ್ಲಿ ನೆಲೆ ಕಂಡುಕೊಳ್ಳುವುದು ಕಠಿಣವಾಗಿತ್ತು. ಬಿಜೆಪಿ ತೊರೆದು ಸ್ವತಂತ್ರವಾಗಿ ಪ್ರಾದೇಶಿಕ ಅಸ್ತಿತ್ವ ಕಂಡುಕೊಳ್ಳಲು ಸಜ್ಜಾಗುತ್ತಿರುವ ಅಣ್ಣಾಮಲೈ, ಹೊಸ ರಾಜಕೀಯ ಪಕ್ಷದ ಸ್ಥಾಪನೆಯ ಮುನ್ಸೂಚನೆ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಸಾರ್ವಜನಿಕ ಭಾಷಣಗಳು ತಮಿಳುನಾಡಿನ ಭವಿಷ್ಯದ ರಾಜಕೀಯ ಧ್ರುವೀಕರಣದ ದಿಕ್ಸೂಚಿಯಾಗಿ ಮಾರ್ಪಟ್ಟಿವೆ.
ಇನ್ನು ಅಣ್ಣಾಮಲೈ ತಮ್ಮ ಭಾಷಣದ ಮೂಲಕ ಅತ್ಯಂತ ಚಾಣಾಕ್ಷತನದ ಕಾರ್ಯತಂತ್ರ ರೂಪಿಸುತ್ತಿದ್ದಾರೆ. ತಮಿಳುನಾಡಿನಲ್ಲಿ ಬಿಜೆಪಿಯ ಮೇಲಿರುವ ಹಿಂದಿ ಹೇರಿಕೆ ಮತ್ತು ಕಠಿಣ ಧಾರ್ಮಿಕ ರಾಜಕಾರಣದ ಹಣೆಪಟ್ಟಿಯನ್ನು ಕಳಚಿಕೊಳ್ಳಲು ಬಯಸಿದ್ದಾರೆ. ಹೀಗಾಗಿಯೇ ಅವರು ಒಳಗೊಳ್ಳುವಿಕೆಯ ಮತ್ತು ಉದಾರವಾದಿ ಹಿಂದೂ ಸಿದ್ಧಾಂತವನ್ನು ಮುನ್ನೆಲೆಗೆ ತರುತ್ತಿದ್ದಾರೆ. ಇದು ಡಿಎಂಕೆ ಹಾಗೂ ಎಐಎಡಿಎಂಕೆ ಪಕ್ಷಗಳ ದ್ರಾವಿಡ ಮತಬ್ಯಾಂಕ್ ಮತ್ತು ಪ್ರಗತಿಪರ ಮತದಾರರನ್ನು ಸೆಳೆಯಲು ಹೂಡಿರುವ ತಂತ್ರವಾಗಿದೆ. ರಾಷ್ಟ್ರೀಯ ಚಿಂತನೆಗಿಂತ ಹೆಚ್ಚಾಗಿ ತಮಿಳು ಸಂಸ್ಕೃತಿಗೆ ಹತ್ತಿರವಾಗುವ ಮೂಲಕ ತಮ್ಮ ಹೊಸ ಪ್ರಾದೇಶಿಕ ಅಸ್ಮಿತೆಯನ್ನು ಗಟ್ಟಿಗೊಳಿಸಿಕೊಳ್ಳುವುದು ಅವರ ಮೂಲ ಉದ್ದೇಶವಾಗಿದೆ.
2031ರ ದೀರ್ಘಾವಧಿ ರಾಜಕೀಯ ಗುರಿಯನ್ನು ಇಟ್ಟುಕೊಂಡಿರುವ ಅಣ್ಣಾಮಲೈ, ತಮಿಳುನಾಡು ಮತದಾರರು ಸದಾ ಪ್ರಾದೇಶಿಕ ನಾಯಕತ್ವಕ್ಕೆ ಮನ್ನಣೆ ನೀಡುತ್ತಾ ಬಂದಿದ್ದು ತಮ್ಮ ವಿಭಿನ್ನ ನಿಲುವುಗಳಿಂದ ಯುವ ಸಮೂಹವನ್ನು ಆಕರ್ಷಿಸಲು ಮುಂದಾಗಿದ್ದಾರೆ. ಧರ್ಮದ ಪ್ರದರ್ಶನವನ್ನು ವಿರೋಧಿಸುವ ಮತ್ತು ಸಾಮಾಜಿಕ ಸಮಾನತೆಯನ್ನು ಎತ್ತಿಹಿಡಿಯುವ ಅವರ ಹೊಸ ಈ ವಾದ, ರಾಜ್ಯದ ಸಾಂಪ್ರದಾಯಿಕ ರಾಜಕೀಯ ಸಮೀಕರಣಗಳನ್ನು ತಲೆಕೆಳಗಾಗಿಸುವ ಸಾಮರ್ಥ್ಯ ಹೊಂದಿದೆ. ಮುಂಬರುವ ದಿನಗಳಲ್ಲಿ ಅವರು ಸ್ಥಾಪಿಸಲಿರುವ ಹೊಸ ಪಕ್ಷ ತಮಿಳುನಾಡಿನಲ್ಲಿ ಮೂರನೇ ಪರ್ಯಾಯ ಶಕ್ತಿಯಾಗಿ ಹೊರಹೊಮ್ಮಲಿದೆಯೇ ಎಂಬುದನ್ನು ಕಾಲವೇ ನಿರ್ಧರಿಸಬೇಕಿದೆ.



